Karnataka Polls: ವರುಣಾಗೆ ಅಂಟಿಕೊಂಡ ಸಿದ್ದರಾಮಯ್ಯ, ಕೋಲಾರ ಕೈಬಿಡುವ ಸಾಧ್ಯತೆ- ಇನ್‌ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 15: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ( Karnataka Assembly Elections 2023 ) ಕಾವು ದಿನೇದಿನೇ ಹೆಚ್ಚುತ್ತಿದೆ. ವರುಣಾ ಹಾಗೂ ಕೋಲಾರದಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ( Siddaramaiah ) ಅವರು ಕೋಲಾರವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.
ಈ ವಿಚಾರವಾಗಿ ಕೆಜೆ ಜಾರ್ಜ್, ಬೈರತಿ ಸುರೇಶ್ ಸೇರಿದಂತೆ ಹಲವಾರು ನಿಷ್ಠಾವಂತರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ವರುಣಾ ಕ್ಷೇತ್ರ ಸುರಕ್ಷಿತ ಕ್ಷೇತ್ರವಾಗಿದ್ದು, ಕೋಲಾರದಿಂದ ಸ್ಪರ್ಧಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬೆಳವಣಿಗೆಯ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರವನ್ನು ಕೈಬಿಡುವ ನಿರ್ಧಾಕ್ಕೆ ಬಂದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದು ವ್ಯತಿರಿಕ್ತ ಮತ್ತು ಮತದಾರರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ವರುಣಾದಿಂದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ವರುಣಕ್ಕೆ ಅಂಟಿಕೊಂಡು ಕೋಲಾರದಿಂದ ಸ್ಪರ್ಧಿಸುವ ಯೋಚನೆ ಕೈಬಿಡಬೇಕು ಎಂದು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅದೂ ಅಲ್ಲದೆ, ಸಿದ್ದರಾಮಯ್ಯನವರಿಗೆ ರಾಜ್ಯದೆಲ್ಲೆಡೆ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರವನ್ನು ಮಾಡಬೇಕಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸುವುದು ಕಷ್ಟವಾಗಲಿದೆ ಎಂದು ಹೇಳಲಾಗುತ್ತದೆ.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪಕ್ಷದ ಮೂರನೇ ಪಟ್ಟಿಯು ಯಾವುದೇ ಸಮಯದಲ್ಲಿ ಪ್ರಕಟಗೊಳ್ಳಲಿದೆ. ಇದು ಊಹಾಪೋಹಗಳಿಗೆ ಅಂತ್ಯ ಹಾಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೂಲಗಳ ಪ್ರಕಾರ, ಕೋಲಾರಕ್ಕೆ ಕೊತ್ತೂರು ಮಂಜುನಾಥ್ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೊತ್ತೂರು ಮಂಜು ಸಲುವಾಗಿ ಕೋಲಾರ ಮತ್ತು ಮುಳಬಾಗಲು ಎರಡೂ ಸ್ಥಾನಗಳನ್ನು ಖಾಲಿ ಇರಿಸಿದ್ದಾರೆ. ಕೊತ್ತೂರು ಮಂಜು ಅವರ ಸಂಬಂಧಿ ಮಂಜುಶ್ರೀ ಅವರಿಗೆ ಮುಳಬಾಗಲು ಸ್ಥಾನಕ್ಕೆ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ ಸೋಮಣ್ಣ
ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸೋಮಣ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಸೋಮಣ್ಣ ಅವರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಹಿರಿಯ ಬಿಜೆಪಿ ನಾಯಕ ಮತ್ತು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ.
ಶ್ರೀನಿವಾಸ ಪ್ರಸಾದ್ ಅವರನ್ನು ಸಿದ್ದರಾಮಯ್ಯನವರ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಸೋಮಣ್ಣ ಮತ್ತು ಶ್ರೀನಿವಾಸ ಪ್ರಸಾದ್ ಕ್ಷೇತ್ರವನ್ನು ಗೆಲ್ಲಲು ಏನೆಲ್ಲ ತಂತ್ರಗಳನ್ನು ಅನುಸರಿಸಬೇಕು ಎಂದು ಚರ್ಚಿಸಿದರು ಎಂದು ತಿಳಿದುಬಂದಿದೆ.
ಸೋಮಣ್ಣ ಅವರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಸಚಿವರು ವರುಣಾದ ಪ್ರಮುಖ ಪಕ್ಷದ ಮುಖಂಡರ ಜತೆಯೂ ಸಭೆ ನಡೆಸಿದ್ದಾರೆ. ನಾನು ಏಪ್ರಿಲ್ 17 ರಂದು ನನ್ನ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.












Click it and Unblock the Notifications