ಸಿದ್ದು, ಡಿಕೆಶಿ ಕದನ ಶಮನಕ್ಕೆ ಮುಂದಾದ ಕಾಂಗ್ರೆಸ್: ಪಕ್ಷ ಅಧಿಕಾರಕ್ಕೆ ಬಂದರೆ 2:3 ಸಿಎಂ ಫಾರ್ಮುಲಾ? ಏನಿದು ಹೊಸ ವರಸೆ?
ಬೆಂಗಳೂರು, ಏಪ್ರಿಲ್ 03: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ದಿನಾಂಕ ಪ್ರಕಟಗೊಂಡಿದ್ದು, ಮೇ 10ರಂದು ಮತದಾನ ನಡೆಯಲಿದೆ ಹಾಗೂ ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಈಗ ಬಂದಿರುವ ಆರು ಸಮೀಕ್ಷೆಗಳ ಪ್ರಕಾರ, ಮೂರರಲ್ಲಿ ಕಾಂಗ್ರೆಸ್ ( Congress ) ಗೆಲ್ಲುವುದಾಗಿ ತಿಳಿಸಿವೆ. ಇನ್ನುಳಿದ ಮೂರರಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ಹಲವಾರು ತಿಂಗಳಿಂದ ಮಾತುಗಳು ಕೇಳಿಬರುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಮುಖ್ಯಮಂತ್ರಿ ಖರ್ಚಿಗಾಗಿ ಕದನ ಏರ್ಪಟ್ಟಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.

ಈಗಾಗಲೇ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಡಿಕೆ ಶಿವಕುಮಾರ್ ಅವರು ಕನಕಪುರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಿಸುತ್ತಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರ ನಡುವೆ ಅಸಮಾಧಾನವಿದೆ ಎಂದು ಮಾಧ್ಯಮ ವರದಿಗಳು ಅಷ್ಟೇ ಅಲ್ಲದೇ, ಬಿಜೆಪಿ ನಾಯಕರೂ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.
ಸಿದ್ದರಾಮಯ್ಯನವರು 2008ರಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದರು. ಡಿಕೆ ಶಿವಕುಮಾರ್ ಅವರು ಮೂಲ ಕಾಂಗ್ರೆಸ್ಸಿಗರು. ಅವರಿಬ್ಬರ ನಡುವೆ ಮೊದಲನಿಂದಲೂ ಪೈಫೋಟಿ ಇದೆ ಎಂಬ ವಿಚಾರವೇನೂ ಗುಟ್ಟಾಗಿ ಉಳಿದಿಲ್ಲ.

2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಮೊದಮೊದಲು ಸೇರ್ಪಡೆಗೊಳ್ಳಿಸಿರಲಿಲ್ಲ. ಇದಕ್ಕೆ ಶಿವಕುಮಾರ್ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ನಂತರ ಕಾಂಗ್ರೆಸ್ ಹೈಕಮಾಂಡ್ ಮೂಲಕ ಡಿ ಕೆ ಶಿವಕುಮಾರ್ ಇಂಧನ ಸಚಿವರಾಗಿ ನೇಮಕವಾದರು. ಅಲ್ಲಿಂದಲೇ ಡಿಕೆಶಿ ಸಿದ್ದು ನಡುವಿನ ಭಿನ್ನಾಭಿಪ್ರಾಯಗಳು ದಟ್ಟಗೊಂಡವು.
ಮುಖ್ಯಮಂತ್ರಿ ಸ್ಥಾನದ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, '100 ಪರ್ಸೆಂಟ್ ನಾನು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ. ಡಿಕೆ ಶಿವಕುಮಾರ್ ಮತ್ತು ನಾನು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದೇವೆ. ಜಿ ಪರಮೇಶ್ವರ ಅವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅವರು ಈ ಹಿಂದೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, 'ಕಾಂಗ್ರೆಸ್ ಸಂಪೂರ್ಣ ಒಗ್ಗಟ್ಟಾಗಿದೆ.ಅವರು ಕೂಡ ಆಕಾಂಕ್ಷಿಗಳಲ್ಲಿ ಒಬ್ಬರು. ಅದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಚುನಾಯಿತ ಶಾಸಕರೇ ನಾಯಕರನ್ನು ನಿರ್ಧರಿಸಬೇಕು' ಎಂದರು.

'ಕಾಂಗ್ರೆಸ್ ಎಂದಿಗೂ ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸುವುದಿಲ್ಲ. ಚುನಾಯಿತ ಶಾಸಕರು ಮತ್ತು ಹೈಕಮಾಂಡ್ ನಿರ್ಧಾರಕ್ಕೆ ನಾವು ಬಿಡುತ್ತೇವೆ' ಎಂದೂ ಸಿದ್ದರಾಮಯ್ಯ ತಿಳಿಸಿದ್ದಾರೆ.
2:3 ಸಿಎಂ ಪಾರ್ಮುಲಾ?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, 2:3 ಸಿಎಂ ಪಾರ್ಮುಲಾ ಅನುಸರಿಬಹುದು ಎಂಬ ಮಾತುಗಳು ಕೇಳಿಬಂದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಎರಡು ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಆ ನಂತರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪಾರ್ಮುಲಾವನ್ನು ಪಕ್ಷದ ವರಿಷ್ಠರು ಕಂಡುಕೊಂಡಿದ್ದಾರೆ ಎಂದು ಪಕ್ಷದ ಮೂಲವೊಂದು ಹೇಳಿದೆ.












Click it and Unblock the Notifications