Karnataka Elections: ಬಹುಮತಕ್ಕಾಗಿ ಪಂಚಮಸಾಲಿ ಮತಗಳನ್ನು ಸೆಳೆಯಲು ಮುಂದಾದ ಕಾಂಗ್ರೆಸ್- ಮಾಹಿತಿ, ವಿವರ, ಲೆಕ್ಕಾಚಾರ
ಬೆಂಗಳೂರು, ಏಪ್ರಿಲ್ 11: ಕರ್ನಾಟಕದ ಕಾಂಗ್ರೆಸ್ ( Karnakata Congress ) ಇದುವರೆಗೆ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಮತ ಬ್ಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮುಂಬರುವ ಕರ್ನಾಟಕ ವಿಧಾಸನಭೆ ಚುನಾವಣೆಯಲ್ಲಿ ( Karnataka Elections 2023 ) ಬಹುಮತಕ್ಕಾಗಿ ಲಿಂಗಾಯತ ಒಳ ಪಂಗಡವಾದ ಪಂಚಮಸಾಲಿ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಕೆಲ ವರ್ಷಗಳಿಂದ ಮೀಸಲಾತಿ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯವು ಈ ಬಾರಿ ಕಾಂಗ್ರೆಸ್ ಪರ ನಿಲ್ಲಲಿದೆ ಎಂದು ಅಂದಾಜಿಸಲಾಗಿದೆ. ಪಂಚಮಸಾಲಿಗಳು ಲಿಂಗಾಯತರ ಪ್ರಬಲ ಉಪಪಂಗಡದಲ್ಲಿ ಬರುತ್ತಾರೆ. ಅವರು ಬಿಜೆಪಿಯ ಪ್ರಮುಖ ಮತ ಬ್ಯಾಂಕ್ ಆಗಿದ್ದಾರೆ.

2013 ರಲ್ಲಿ, ಬಿಜೆಪಿಯ ಇಬ್ಬರು ಪ್ರಮುಖ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ಅವರು ಪಕ್ಷವನ್ನು ತೊರೆದಿದ್ದರು. ತಮ್ಮದೇ ಆದ ಪಕ್ಷಗಳನ್ನು ಕಟ್ಟಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದು ಬಿಜೆಪಿ ಮತಗಳ ವಿಭಜನೆಗೆ ಕಾರಣವಾಗಿತ್ತು. ಇದು ಕಾಂಗ್ರೆಸ್ ಗೆಲುವಿಗೆ ಏಕೈಕ ದೊಡ್ಡ ಕೊಡುಗೆಯಾಗಿದೆ ಎಂದು ನಂಬಲಾಗಿದೆ.
1990 ರ ದಶಕದಿಂದಲೂ ಲಿಂಗಾಯತರ ಬೆಂಬಲವನ್ನು ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿರುವ ಪ್ರಮುಖ ಅಂಶವಾಗಿದೆ. ಕರ್ನಾಟಕವನ್ನು ಮರಳಿ ಗೆಲ್ಲಲು, ಅದು ಬಿಜೆಪಿಯ ವೋಟ್ ಬ್ಯಾಂಕ್ ಮೇಲೆ ಕಣ್ಣಿಡಬೇಕಾದ ಅನಿವಾರ್ಯತೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

'1994 ರ ಚುನಾವಣೆಯನ್ನು ಹೊರತುಪಡಿಸಿ, ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟಾರೆಯಾಗಿ ಶೇ 35 ರಷ್ಟು ಮತಗಳನ್ನು ಗಳಿಸಿದೆ. ಬಿಜೆಪಿಯಿಂದ ಶೇ 5 ಮತಗಳನ್ನು ಕಸಿದುಕೊಳ್ಳುವಲ್ಲಿ ಅದು ಯಶಸ್ವಿಯಾದರೆ, ಅದು ಬಹುಮತವನ್ನು ಗಳಿಸುವಲ್ಲಿ ಯಶಸ್ವಿ ಆಗಬಹುದು. ಕಾಂಗ್ರೆಸ್ ಇದುವರೆಗೆ ಬಿಡುಗಡೆ ಮಾಡಿರುವ 165 ಅಭ್ಯರ್ಥಿಗಳಲ್ಲಿ 37 ಲಿಂಗಾಯತರನ್ನು ಹೆಸರಿಸಿದೆ. ಅವರಲ್ಲಿ ಸುಮಾರು ಶೇ 50 ಪಂಚಮಸಾಲಿಗಳು' ಎಂಬುದನ್ನು ಇಲ್ಲಿ ಗಮನಿಸಬೇಕಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲಿ ಇನ್ನೂ 6 ರಿಂದ 10 ಮಂದಿ ಟಿಕೆಟ್ ಪಡೆಯುವ ಸಾಧ್ಯತೆ ಇದೆ. ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಈ ಬಾರಿ ನಿರೀಕ್ಷೆ ಮೂಡಿಸಿದೆ. ಎರಡು ವರ್ಷಗಳಿಂದ, ಪಂಚಮಸಾಲಿ ಲಿಂಗಾಯತರು ಕೋಟಾ ವರ್ಗವನ್ನು 3B (ಶೇ 5) ನಿಂದ 2A (ಶೇ 15) ಗೆ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಹಲವಾರು ಗಡುವು ಮತ್ತು ಭರವಸೆಗಳನ್ನು ನೀಡಿದ ನಂತರವೂ, ಪಂಚಮಸಾಲಿಗಳಿಗೆ ಕೇವಲ ಶೇ 7 ರಷ್ಟು ಮೀಸಲಾತಿಯನ್ನು ನೀಡುವಲ್ಲಿ ಯಶಸ್ವಿ ಆಗಿದೆ.
OBC ಕೋಟಾದ ಅಡಿಯಲ್ಲಿ ಬರುವ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು (2B ವರ್ಗ) ರದ್ದುಗೊಳಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

'ಸಮುದಾಯವು ಕನಿಷ್ಠ ಶೇ 10 ರಷ್ಟು ಮೀಸಲಾತಿ ಹೆಚ್ಚಳವನ್ನು ಬಯಸಿತ್ತು. ಆದರೆ ಅದು ಕೇವಲ ಶೇ 2 ರಷ್ಟನ್ನು ಮಾತ್ರ ನೀಡಿದೆ' ಎಂದು ಲಿಂಗಾಯತ ಪಂಚಮಸಾಲಿ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಮಾಧಾನಗೊಂಡಿರುವ ಅವರು ಈ ಸ್ಥಾನವನ್ನು ತೊರೆದಿದ್ದಾರೆ.
'ಸಮುದಾಯವು ಮೋಸಹೋಗಿದೆ ಎಂದು ಭಾವಿಸುತ್ತದೆ. ಅವರು ಮತ ಚಲಾಯಿಸಲು ಹೊರಟಾಗ ಕೇಸರಿ ಪಕ್ಷದ ವಿರುದ್ಧ ತಮ್ಮ ಕೋಪವನ್ನು ತೋರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದು ಕಾಶಪ್ಪನವರ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷವು ಪ್ರಮುಲ ಸಮುದಾಯವಾದ ಪಂಚಮಸಾಲಿ ವೋಟಗಳ ಮೇಲೆ ಕಣ್ಣಿಟ್ಟಿರುವು ಮೇಲ್ನೋಟಕ್ಕೆ ತಿಳಿದುಬಂದಿದೆ.












Click it and Unblock the Notifications