Karnataka Elections: ಬಿಜೆಪಿ ತೊರೆದ ಬಿಎಸ್‌ವೈ ಆಪ್ತರ ಸೆಣಸಾಟ ಯಾರ ವಿರುದ್ಧ? ಇಲ್ಲಿದೆ ಕುತೂಹಲಕರ ಸ್ಟೋರಿ
ಬೆಂಗಳೂರು, ಏಪ್ರಿಲ್ 07: ಕರ್ನಾಟಕ ಬಿಜೆಪಿಯ ( Karnataka BJP ) ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪ ( Yediyurappa ) ಅವರ ನಿಷ್ಠಾವಂತರು ಎಂದು ಪರಿಗಣಿಸಲ್ಪಟ್ಟ ಕನಿಷ್ಠ ಐವರು ಮುಖಂಡರು ಪಕ್ಷವನ್ನು ತೊರೆದಿದ್ದಾರೆ. ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್ ( Congress ) ಸೇರಿರುವ ಅವರು ಹೊಸ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪಕ್ಷ ತೊರೆದು ಹೋದ ತಮ್ಮ ಆಪ್ತರನ್ನು ಯಡಿಯೂರಪ್ಪ ಉಳಿಸಿಕೊಳ್ಳಲಿಲ್ಲ, ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಿಲ್ಲ ಎಂಬ ವಿಚಾರವೀಗ ಬಿಜೆಪಿಯಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷ ತೊರೆದಿರುವ 'ನಿಷ್ಠಾವಂತರು' ಯಡಿಯೂರಪ್ಪನವರ ಟೀಕಾಕಾರರಾಗಿ ಗುರಿತಿಸಿಕೊಂಡಿರುವ ಬಿಜೆಪಿ ನಾಯಕರ ವಿರುದ್ಧ ಹೋರಾಡಲು ಸಜ್ಜಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಹಿರಿಯ ಎಂಎಲ್‌ಸಿ ಆಯನೂರು ಮಂಜುನಾಥ್ ಸ್ಪರ್ಧಿಸಲು ಬಯಸಿದ್ದಾರೆ. ಆಯನೂರು ಮಂಜುನಾಥ್ ಅವರು ಬಿಜೆಪಿಯನ್ನು ತೊರೆದಿರುವುದಾಗಿ ಘೋಷಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ ಅರವಿಂದ ಬೆಲ್ಲದ್ ವಿರುದ್ಧ ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಲಿಂಗಾಯತ ಮುಖಂಡ ಹೆಚ್ ಡಿ ತಮ್ಮಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿ ಟಿ ರವಿ ವಿರುದ್ಧ ಹೆಚ್ ಡಿ ತಮ್ಮಯ್ಯ ತೊಡೆ ತಟ್ಟಿದ್ದಾರೆ. ಅವರು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಶಿವಮೊಗ್ಗ ಶಾಸಕ ಈಶ್ವರಪ್ಪ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಹಾಗೂ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಹಲವು ಬಾರಿ ಟೀಕಿಸಿದ್ದಾರೆ. ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸಿದ್ದಾರೆ.
ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಯು ಬಿ ಬಣಕಾರ ಸೆಣಸಲಿದ್ದಾರೆ. ಬಿಜೆಪಿ ತೊರೆದಿರುವ ಬಣಕಾರ ಅವರು ಯಡಿಯೂರಪ್ಪ ನಿಷ್ಠಾವಂತರು ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಯಲ್ಲಾಪುರದ ವಿ ಎಸ್ ಪಾಟೀಲ್ ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿರುದ್ಧ ಸ್ಪರ್ಧಿಸಲಿದ್ದಾರೆ.

ಮೇ 10 ರಂದು ನಡೆಯಲಿರುವ ಚುನಾವಣೆಗೆ ಪಕ್ಷವನ್ನು ತೊರೆದಿರುವ ತಮ್ಮ ನಿಕಟವರ್ತಿಗಳನ್ನು ತಡೆಯಲು ಮಾಜಿ ಮುಖ್ಯಮಂತ್ರಿಗಳು ಸಾಕಷ್ಟು ಯತ್ನ ಮಾಡಲಿಲ್ಲ ಎಂದು ಬಿಜೆಪಿಯ ಯಡಿಯೂರಪ್ಪ ವಿರೋಧಿ ಪಾಳಯ ಆರೋಪಿಸಿದೆ. ಆದರೆ, ಯಡಿಯೂರಪ್ಪ ಪರ ಪಾಳಯವು ಬಂಡಾಯವೆದ್ದು ವಲಸೆ ಹೋದವರ ಕ್ರಮವನ್ನು ಸಮರ್ಥಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಬಣಕಾರ, ಮಂಜುನಾಥ್, ತಮ್ಮಯ್ಯ ಮತ್ತು ಪಾಟೀಲ್ ಅವರಂತಹವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯದಲ್ಲಿ ಪ್ರಸ್ತುತವಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ವಾದಿಸುತ್ತಾರೆ.

'ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯುವ ಅನಿವಾರ್ಯತೆ ಬಂದಾಗ, ಜನರು ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಮೇಲೆ ಯಡಿಯೂರಪ್ಪನವರಿಗೆ ನಿಯಂತ್ರಣವಿಲ್ಲ. ಈ ಸನ್ನಿವೇಶಕ್ಕೆ ಮಾಜಿ ಮುಖ್ಯಮಂತ್ರಿಯನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ವಲಸೆ ಹೋದವರ ಅಗತ್ಯಗಳನ್ನು ಪೂರೈಸಲು ಜಿಲ್ಲಾ ಘಟಕಗಳು ವಿಫಲವಾಗಿರಬಹುದು' ಎಂದು ಯಡಿಯೂರಪ್ಪನವರ ಆಪ್ತ ಮೂಲಗಳು 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಬಂಡಾಯವೆದ್ದು ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತವಾಗಿರುವ ಇಬ್ಬರು ಹಿರಿಯ ನಾಯಕರು ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಕೆಜೆಪಿ ವಿಸರ್ಜಿಸಿ ಬಿಜೆಪಿಗೆ ಮರಳಿದ ನಂತರ ನಮಗೆ ಸಿಕ್ಕಿದ್ದೇನು? ನಮ್ಮನ್ನು ಯಾವಾಗಲೂ ಹೊರಗಿನವರಂತೆ ನೋಡುತ್ತಿದ್ದರು. ನಮ್ಮ ಜಿಲ್ಲೆಗಳಲ್ಲಿ ನಾವು 'ಅಸ್ಪೃಶ್ಯ'ರಾದೆವು. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರವಾಹ ಮತ್ತು ಕೋವಿಡ್ ಇತ್ತು. ನಮಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಾಗಿಲ್ಲ. ನಮಗೆ ಟಿಕೆಟ್ ನಿರಾಕರಿಸಲಾಗುವುದು ಎಂದು ಖಚಿತವಾಗಿತ್ತು, ಆದ್ದರಿಂದ ನಾವು ರಾಜಕೀಯವಾಗಿ ಪ್ರಸ್ತುತವಾಗಿರಲು ನಮ್ಮ ಮಾರ್ಗಗಳನ್ನು ಆರಿಸಿಕೊಂಡಿದ್ದೇವೆ ಎಂದು ವಲಸೆ ಹೋದ ಮುಖಂಡರಲ್ಲಿ ಒಬ್ಬರು ಹೇಳಿದ್ದಾರೆ.












Click it and Unblock the Notifications