BJPvsBJP: ಬಾಂಬೆಗೆ ಹೋಗಿದ್ದ ಗ್ಯಾಂಗ್ ಲೀಡರ್ ರಮೇಶ್ ಜಾರಕಿಹೊಳಿಗೆ ಬಿಜೆಪಿಯಲ್ಲಿ ನಯಾಪೈಸೆ ಬೆಲೆ ಇಲ್ಲ- ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 03: ಕುಮಾರಸ್ವಾಮಿ ( HD Kumaraswamy ) ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ( Ramesh Jarkiholi ) ಅವರು ಬಿಜೆಪಿ ( BJP ) ನಾಯಕತ್ವದ ವಿರುದ್ಧ ತೊಡೆ ತಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ( Karnataka Assembly Elections 2023 ) ತಮ್ಮ ಆಪ್ತರಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.
ಈ ಬೆಳವಣಿಗೆ ಬಿಜೆಪಿಯಲ್ಲೀಗ ತಲ್ಲಣವನ್ನೇ ಸೃಷ್ಟಿಸಿದೆ. ಅಥಣಿ ಕ್ಷೇತ್ರದಿಂದ ಮಹೇಶ್ ಕಮಠಳ್ಳಿ ಹಾಗೂ ಕಾಗವಾಡದಿಂದ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಕೇಳಿದ್ದಾರೆ. ಭಾನುವಾರ ನಡೆದ ಬಿಜೆಪಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಇದಕ್ಕೆ ಸೊಪ್ಪು ಹಾಕಿಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ಬೆಲೆ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಗ್ಯಾಂಗ್ ಕಟ್ಟಿಕೊಂಡು ಬಾಂಬೆಗೆ ಹೋಗಿದ್ದ ಗ್ಯಾಂಗ್ ಲೀಡರ್ ರಮೇಶ್ ಜಾರಕಿಹೊಳಿಗೆ ಬಿಜೆಪಿಯಲ್ಲಿ ನಯಾಪೈಸೆ ಬೆಲೆ ಇಲ್ಲ. ಸಿಎಂ ಕ್ಯಾಂಡಿಡೇಟ್ ಎಂಬ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಶ್ರಮಿಸುತ್ತಿರುವ ಪ್ರಹ್ಲಾದ್ ಜೋಷಿ ವಾರ್ನಿಂಗ್ ಕೊಟ್ಟಿದ್ದು ನಾಚಿಕೆಗೇಡು' ಎಂದು ಟೀಕಿಸಿದೆ.
ಬಿಎಸ್‌ವೈ ಆಯನೂರು ಅಸ್ತ್ರ
'ಬಿಜೆಪಿ ಯಡಿಯೂರಪ್ಪನವರನ್ನು ಅವಮಾನಿಸುವ ಕಾಂಟ್ರಾಕ್ಟನ್ನು ಈಶ್ವರಪ್ಪನವರಿಗೆ ಕೊಟ್ಟಿತ್ತೇ? ಆಯನೂರು ಮಂಜುನಾಥ್ ಮಾತಲ್ಲೇ ಆ ನಿಗೂಢ ಅರ್ಥವಿದೆ. ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಕ್ಕೆ ಸೇಡು ತೀರಿಸಿಕೊಳ್ಳಲೆಂದೇ BSY 'ಆಯನೂರು' ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ದಮ್ಮು ತಾಕತ್ತಿದ್ದರೆ ಬಿಜೆಪಿ ಆಯನೂರು ಬಗ್ಗೆ ಮಾತಾಡಲಿ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಸಿಸಿ ಪಾಟೀಲ್ ವಿರುದ್ಧ ಟ್ವೀಟ್
'ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗೆ ನಿಂದಿಸಿದ್ದ ಸಿಸಿ ಪಾಟೀಲ್ & ನಿರಾಣಿ ಅವರು ಆಗ ಕುಡಿದಿದ್ದರೇ? ಸ್ವಾಮಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಬಿಜೆಪಿ ನಾಯಕರು, ಈಗ ಮತ್ತೊಮ್ಮೆ ಸ್ವಾಮಿಗಳನ್ನು ಎಳೆತಂದು ಅವಮಾನಿಸುತ್ತಿದ್ದಾರೆ. ಸ್ವಾಮಿಗಳ ಹೆಸರಲ್ಲಿ ಸುಳ್ಳು ಹೇಳಲು ನಾಚಿಕೆ ಎನಿಸುವುದಿಲ್ಲವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಿಸಿ ಪಾಟೀಲ್ ಅವರು ಕಾಂಗ್ರೆಸ್ ನಾಯಕರಾದ ವಿಜಯಾನಂದ ಕಾಶಪ್ಪನವರ ಹಾಗೂ ವಿನಯ್ ಕುಲಕರ್ಣಿ ವಿರುದ್ಧ ಆರೋಪ ಮಾಡಿದ್ದಾರೆ. ರಾತ್ರಿ ವೇಳೆಯಲ್ಲಿ ಅವರು ಕುಡಿದು ಜಯಮೃತ್ಯುಂಜಯ ಸ್ವಾಮೀಜಿಗೆ ಕರೆ ಮಾಡಿ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಿವಿ ಮೇಲೆ ಹೂವು
'ಚುನಾವಣೆಗಾಗಿ ಬಿಜೆಪಿ ಎಲ್ಲಾ ಸಮುದಾಯಗಳ ಕಿವಿ ಮೇಲೆ ಹೂವು ಇಟ್ಟು ಮುಂಗೈಗೆ ತುಪ್ಪ ಸವರಿದೆ. ಮೀಸಲಾತಿ ವಿಚಾರದಲ್ಲಿ ಒಕ್ಕಲಿಗರಿಗೆ "ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ" ಎಂಬಂತೆ ಹಂಚಿ ಮೋಸ ಮಾಡಿದೆ ಬಿಜೆಪಿ ಎಂದು ನಂಜಾವಧೂತ ಶ್ರೀಗಳು ಕಿಡಿಕಾರಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ಶ್ರೀಗಳ ಮಾತಿಗೆ ನಿಮ್ಮಲ್ಲಿ ಉತ್ತರವಿದೆಯೇ?' ಎಂದು ಪ್ರಶ್ನಿಸಿದೆ.
'ನಂಜಾವಧೂತ ಶ್ರೀಗಳ ಈ ಮಾತಿಗೆ ಸರ್ಕಾರದ ಬಳಿ ಉತ್ತರವಿದೆಯೇ? ಒಕ್ಕಲಿಗ ಎಂದರೆ ಒಕ್ಕಲುತನ ಮಾಡಿ ಇತರರಿಗೆ ಉಣಬಡಿಸುವವನು ಎಂದರ್ಥ. ಇನ್ನೊಬ್ಬರನ್ನು ಕಿತ್ತು ತಿನ್ನುವವರಲ್ಲ. ಮೀಸಲಾತಿ ಗೊಂದಲ ಸೃಷ್ಟಿಸಿದ ಬಿಜೆಪಿ ಬಂಜಾರರ, ಒಕ್ಕಲಿಗರ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲವೇಕೆ? ದಮ್ಮು ತಾಕತ್ತಿದ್ದರೆ ಬಸವರಾಜ ಬೊಮ್ಮಾಯಿ ಅವರು ಮಾತಾಡಲಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ವಿರುದ್ಧ ಹೆಚ್. ವಿಶ್ವನಾಥ್ ಹೇಳಿಕೆ
'ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದಕ್ಕೆ ತುಂಬಾ ನೋವಿದೆ. ಬಿಜೆಪಿಯ ಹೆಚ್. ವಿಶ್ವನಾಥ್ ಅವರ ಮಾತಿದು. ಸದ್ಯದಲ್ಲೇ ಇದೇ ಮಾತು ಬಿಜೆಪಿಗೆ ಹೋಗಿರುವ ಬಹುತೇಕ ವಲಸಿಗರ ಬಾಯಲ್ಲೂ ಬರಲಿದೆ. ಹಕ್ಕಿಗಳು ಮೊಟ್ಟೆ ಇಟ್ಟು ಮರಿ ಮಾಡಲು ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತವೆ, ಆದರೆ ಎಂದಿಗೂ ವಲಸೆಯ ಪ್ರದೇಶಕ್ಕೆ ಹೊಂದಿಕೊಂಡು ಅಲ್ಲೇ ಬದುಕಲಾರವು' ಎಂದು ಕೆಪಿಸಿಸಿ ಹೇಳಿದೆ.












Click it and Unblock the Notifications