ಸವದಿ ಜೊತೆ ವಿಮಾನದಲ್ಲಿ ಕಾಣಿಸಿಕೊಂಡ ಹೆಬ್ಬಾಳ್ಕರ್ ಸಹೋದರ: ಮತ್ತೊಂದು ಹಂತ ತಲುಪಿದ ಜಾರಕಿಹೊಳಿ ಜೊತೆಗಿನ 'ಲಕ್ಷ್ಮಿ' ಯುದ್ಧ
ಬೆಂಗಳೂರು, ಏಪ್ರಿಲ್ 14: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ( Karnataka Elections 2023 ) ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ ( Belagavi ) ರಾಜಕಾರಣ ಹೆಚ್ಚು ಚರ್ಚಿತವಾಗುತ್ತಿದೆ. ಅಥಣಿ ಕ್ಷೇತ್ರದಿಂದ ಟಿಕೆಟ್ ಪಡೆಯಲು ವಿಫಲರಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ( Laxman Savadi ) ಬಿಜೆಪಿಯನ್ನು ತೊರೆದಿದ್ದಾರೆ. ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ತೀವ್ರ ಕುತೂಹಲ ಕೆರಳಿದೆ.
ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅವರು ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಸಾಗಿದರು, ಅವರ ರಾಜಕೀಯ ಭವಿಷ್ಯವು ತೂಗುಯ್ಯಾಲೆಯಲ್ಲಿ ಇರುವ ಕಾರಣ ಇಂದು ಮಹತ್ವದ ತೀರ್ಮಾಣವನ್ನು ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಸವದಿ ಅವರು ರಾಜ್ಯ ರಾಜಧಾನಿಗೆ ತೆರಳುವಾಗ ಕೆಪಿಸಿಸಿ ವಕ್ತಾರೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ, ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಜೊತೆಗಿದ್ದರು.
ಸವದಿ ಅವರು ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ತಮ್ಮ ಆಯ್ಕೆಯ ಪಕ್ಷಕ್ಕೆ ಸೇರುವುದಾಗಿ ಅಥವಾ ಅಥಣಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದರು.

ಆದರೆ, ಗುರುವಾರ ಸಂಜೆ ಅಥಣಿಯಲ್ಲಿ ಬೆಂಬಲಿಗರ ಸಭೆಯನ್ನು ಲಕ್ಷ್ಮಣ್ ಸವದಿ ಕರೆದಿದ್ದರು. ಸಭೆಯಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರು ಸವದಿ ಅವರಿಗೆ ಕಾಂಗ್ರೆಸ್ ಸೇರುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸವದಿ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದರು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಲಕ್ಷ್ಮಣ ಸವದಿ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ ಎಂದು ಹೇಳಬಹುದು.
ಸವದಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ
ಬೆಳಗಾವಿ ಸಂಭ್ರಾ ವಿಮಾನ ನಿಲ್ದಾಣದಲ್ಲಿ ಲಕ್ಷ್ಮಣ ಸವದಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಅವರು ಸವದಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ನಿಟ್ಟಿನಲ್ಲಿ ವ್ಯಾಪಕ ಯತ್ನ ನಡೆಸಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ.

ರಮೇಶ್ ಜಾರಕಿಹೊಳಿ ಜೊತೆಗಿನ ಲಕ್ಷ್ಮಿ ಯುದ್ಧ
ಈ ಎಲ್ಲ ಬೆಳವಣಿಗಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಜೊತೆಗಿನ ಲಕ್ಷ್ಮೀ ಹೆಬ್ಬಾಳ್ಕರ್ ಯುದ್ದ ಮತ್ತೊಂದು ತಲುಪಿದಂತಾಗಿದೆ. ಬೆಳಗಾವಿ ರಾಜಕಾರಣದಲ್ಲಿ ಲಕ್ಷ್ಮಣ ಸವದಿ ಅವರು ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಒಂದು ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡರೆ, ಬೆಳಗಾವಿಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ. ಇದು ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗ ಮುಖಂಡರಿಗೆ ದೊಡ್ಡ ಪೆಟ್ಟು ಕೊಡಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ, ಬೆಳಗಾವಿ ರಾಜಕಾರಣ ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಬಿಜೆಪಿಯಿಂದ ಟಿಕೆಟ್ ತಪ್ಪಿರುವ ಶಾಸಕ ಅನಿಲ್ ಬೆನಕೆ ಸಹ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅವರು ಕಾಂಗ್ರೆಸ್ ಸೇರ್ಪಡೆಗೊಂಡರೆ, ಬೆಳಗಾವಿಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತವೆಂದು ಹೇಳಲಾಗುತ್ತಿದೆ. ತೀವ್ರ ಕುತೂಹಲ ಕೆರಳಿಸಿರುವ ರಾಜಕೀಯ ಚದುರಂಗದಾಟದಲ್ಲಿ ಯಾರು ಜಯಸಾಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications