Basavaraj Bommai: ನವಾಬರ ನಾಡಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಾಧಕ-ಬಾಧಕಗಳ ವಿಶ್ಲೇಷಣೆ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಿದ್ಧವಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರ ಬಳಿ ಹೋಗಿ ಪ್ರಚಾರ ಆರಂಭಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಶಿಗ್ಗಾಂವಿ-ಸವಣೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಗೆಲುವು ಬಯಸಿ ಸ್ಪರ್ಧಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ಸಾಧಕ ಮತ್ತು ಬಾಧಕಗಳ ಲೆಕ್ಕಾಚಾರ ಇಲ್ಲಿದೆ.

ಸಂತರ ನಾಡು, ಶರಣರ ನಾಡು, ನವಾಬರ ನಾಡು ಎಂದೇ ಕರೆಸಿಕೊಳ್ಳುವ ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವಿ-ಸವಣೂರು ಕ್ಷೇತ್ರ ಒಂದಾಗಿದೆ. ರಾಜ್ಯಕ್ಕೆ ಎರಡು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಎಂಬ ಖ್ಯಾತಿ ಹಾವೇರಿ ಜಿಲ್ಲೆಗಿದೆ. ಅದರಲ್ಲೂ ತಂದೆ-ಮಗ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂಬುದು ಗಮನಾರ್ಹ.
ಈ ಹಿಂದೆ ಜನತಾ ದಳದ ನಾಯಕ ಎಸ್.ಆರ್. ಬೊಮ್ಮಾಯಿ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಪುತ್ರನಾಗಿರುವ ಬಸವರಾಜ ಬೊಮ್ಮಾಯಿ ಕೂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಪರ್ಧೆಯಿಂದ ಶಿಗ್ಗಾಂವಿ ಕ್ಷೇತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಈ ಹಿಂದೆ ಜೆಡಿಎಸ್‌ನಲ್ಲಿದ್ದ ಬಸವರಾಜ ಬೊಮ್ಮಾಯಿಯವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಕರೆ ತಂದರು. 2008ರಲ್ಲಿ ಶಿಗ್ಗಾಂವಿಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು. ಅನಂತರ 2013ರಲ್ಲಿಯೂ ಗೆದ್ದಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ.

ನಂತರ 2018ರಲ್ಲಿ ನಡೆದ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಮತ್ತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಯಿತು. ಆಗ ಬಸವರಾಜ ಬೊಮ್ಮಾಯಿ ಗೃಹ ಸಚಿವರಾದರು. ಬಿ.ಎಸ್. ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿದ ನಂತರ, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು, ಮೂರುವರೆ ವರ್ಷ ಆಡಳಿತ ನಡೆಸಿದ್ದಾರೆ.
ಇದೀಗ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಯಾಸೀರ್ ಖಾನ್ ಪಠಾಣ್ ಅವರು ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಶಶಿಧರ ಯಲಿಗಾರ ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ 5 ಧನಾತ್ಮಕ ಅಂಶಗಳು
* ಮತ್ತೆ ಸಿಎಂ ಆಗುವ ಭರವಸೆ: ಬಸವರಾಜ ಬೊಮ್ಮಾಯಿ ಸ್ವತಃ ಮುಖ್ಯಮಂತ್ರಿಯಾಗಿರುವುದರಿಂದ ಶಿಗ್ಗಾಂವಿ ಕ್ಷೇತ್ರದ ಮತದಾರರು ಕೈ ಹಿಡಿಯುತ್ತಾರೆ ಎನ್ನುವ ಭರವಸೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗುವ ಕಾರಣದಿಂದ ಕ್ಷೇತ್ರದ ಮತದಾರರು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಅವರಿಗಿದೆ. ಆಯ್ಕೆ ಮಾಡುತ್ತಿರುವುದು ಶಾಸಕನಲ್ಲ, ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಕ್ಷೇತ್ರದ ಜನರು ಭಾವಿಸಿದ್ದಾರೆ.

* ಬಿಜೆಪಿ ಮತ್ತು ನರೇಂದ್ರ ಮೋದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆನ್ನಿಗೆ ಬಿಜೆಪಿ ಪಕ್ಷ ನಿಲ್ಲಲಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಲು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಬೆಂಬಲ ನೀಡಲಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಪ್ರಭಾವವೂ ಬಸವರಾಜ ಬೊಮ್ಮಾಯಿ ಗೆಲುವಿಗೆ ಸಹಕಾರಿಯಾಗಲಿದೆ.
* ಕ್ಷೇತ್ರದಲ್ಲಿ ಅಭಿವೃದ್ಧಿ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಕ್ಷೇತ್ರದಲ್ಲಿ ನೀರಾವರಿ ಕೆಲಸ ಮಾಡಿದ್ದಾರೆ. ಏತ ನೀರಾವರಿ, ಕೆರೆಗೆ ನೀರು ತುಂಬಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿವೆ.
* ಎಲ್ಲ ಜಾತಿ- ಧರ್ಮದ ಜನರ ಬೆಂಬಲ: ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದಾರೆ. ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಲಿಂಗಾಯತರಷ್ಟೇ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈಯಕ್ತಿಕವಾಗಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಾತಿ ಮತ್ತು ಧರ್ಮದ ಜನರ ವಿಶ್ವಾಸ ಗಳಿಸಿರುವುದು ಗೆಲುವಿಗೆ ಸಹಕಾರಿಯಾಗಲಿದೆ.
* ದುರ್ಬಲ ಎದುರಾಳಿ ಅಭ್ಯರ್ಥಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಬಲ ಎದುರಾಳಿಗಳಿಲ್ಲದಿರುವುದು ಧನಾತ್ಮಕ ಅಂಶವಾಗಲಿದೆ. ಇದಕ್ಕೂ ಮೊದಲು ವಿನಯ್ ಕುಲಕರ್ಣಿ ಕಾಂಗ್ರೆಸ್‌ನ ಅಭ್ಯರ್ಥಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಪಕ್ಷದಿಂದ ಯಾಸೀರ್ ಖಾನ್ ಪಠಾಣ್ ಸ್ಪರ್ಧಿಸಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿಯಾಗಿ ಶಶಿಧರ ಯಲಿಗಾರ ಕಣದಲ್ಲಿದ್ದಾರೆ.
* ಬೊಮ್ಮಾಯಿ ಬೆನ್ನಿಗೆ ನಿಂತ ಕಿಚ್ಚ ಸುದೀಪ್: 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಾರಾಬಲ ಸಿಕ್ಕಿದೆ. ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆಯೂ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ನಕಾರಾತ್ಮಕ ಅಂಶಗಳು
* ಕ್ಷೇತ್ರದಿಂದ ದೂರ: ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಗೆದ್ದರೆ ಕ್ಷೇತ್ರದಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತಿದೆ. ಕಳೆದ ಮೂರುವರೆ ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದರೂ ಜನರ ಕೈಗೆ ಸಿಗುವುದಿಲ್ಲ ಎಂದು ಮತದಾರರ ಅಭಿಪ್ರಾಯವಾಗಿದೆ.
* ಬಸವರಾಜ ಬೊಮ್ಮಾಯಿ ಸ್ಥಳೀಯರಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದಾರೆ. ಆದರೆ, ಅವರು ಪಕ್ಕದ ಹುಬ್ಬಳ್ಳಿಯವರಾಗಿದ್ದು, ಶಿಗ್ಗಾಂವಿ ಕ್ಷೇತ್ರದವರಾಗಿಲ್ಲದಿರುವುದು ಈ ಬಾರಿ ಮೈನಸ್ ಪಾಯಿಂಟ್ ಆಗಲಿದೆ.
* ಮುಸ್ಲಿಮರ ವಿರೋಧ: ಶಿಗ್ಗಾಂವಿ- ಸವಣೂರು ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸಿದರೆ ಬಸವರಾಜ ಬೊಮ್ಮಾಯಿ ಅವರ ಗೆಲುವು ಸುಲಭವಾಗಿರಲ್ಲ. ಇದೇ ವೇಳೆ ಇವರ ಅಧಿಕಾರವಧಿಯಲ್ಲಿ ಕೆಲವು ಮುಸ್ಲಿಂ ವಿರೋಧಿ ನೀತಿ-ನಿಲುವುಗಳು ಗೆಲುವಿಗೆ ಹಿನ್ನಡೆಯಾಗಲಿದೆ.












Click it and Unblock the Notifications