ಬಿಜೆಪಿಯಲ್ಲಿ ಪ್ರಹ್ಲಾದ ಜೋಶಿ ರೆಡಿಯಾಗುತ್ತಿದೆಯೇ ವೇದಿಕೆ? 'ಪೇಶ್ವೆಗೆ ಪಟ್ಟ' ಎಂದಿದ್ದ ಎಚ್‌ಡಿಕೆ ಮಾತು ನಿಜವಾಗುತ್ತಿದೆಯೇ?
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Elections 2023 ) ಕೆಲ ದಿನಗಳು ಬಾಕಿ ಇರುವಾಗಲೇ, ಬಿಜೆಪಿ ( BJP ) ಪಾಳಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯತ್ತಿವೆ. ಶಿವಮೊಗ್ಗ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ( KS Eshwarappa ) ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ.
ಈಶ್ವರಪ್ಪನವರ ನಿವೃತ್ತಿಯ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಕರೆ ಮಾಡಿರುವ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದೆ ಎಂದು ಶೆಟ್ಟರ್ ಹೇಳಿಕೊಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ, ಸ್ವತಂತ್ರವಾಗಿ ನಿಲ್ಲುವುದಾಗಿ ಅವರು ಹೇಳಿದ್ದಾರೆ.

ಪಕ್ಷದ ಪ್ರಮುಖ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ದಾವಣಗೆರೆ ದಕ್ಷಿಣ ಶಾಸಕ ರವೀಂದ್ರನಾಥ್ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಇನ್ನೂ ಹಲವರಿಗೆ ಟಿಕೆಟ್ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಬಿಜೆಪಿ ಕೇಂದ್ರ ನಾಯಕತ್ವವು ಗುಜರಾತ್ ಮಾಡೆಲ್ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಕರ್ನಾಟಕದ ಚಿತ್ರಣವು ಗುಜರಾತ್‌ಗಿಂತ ವಿಭಿನ್ನವಾಗಿದೆ. ಇಲ್ಲಿನ ನಾಯಕರು ವೈಯಕ್ತಿಯ ವರ್ಚಸ್ಸನ್ನು ಹೊಂದಿದ್ದಾರೆ. ಆದರೂ, ಇಂತದೊಂದು ಪ್ರಯೋಗಕ್ಕೆ ಬಿಜೆಪಿ ಕೈ ಹಾಕಿರುವುದರ ಬಗ್ಗೆ ಹಲವು ಚರ್ಚೆಗಳು ಎದ್ದಿವೆ.
ಪ್ರಹ್ಲಾದ ಜೋಶಿಗೆ ಸಿದ್ದವಾಯಿತೇ ವೇದಿಕೆ?
ಇಲ್ಲಿಯವರೆಗೆ ಬಿಎಸ್ ಯಡಿಯೂರಪ್ಪನವರ ಹಿಡಿತದಲ್ಲಿದ್ದ ಬಿಜೆಪಿ ಈಗ ಆರ್‌ಎಸ್‌ಎಸ್ ನಾಯಕರ ತೆಕ್ಕೆಗೆ ಜಾರುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತಯಾರಿಕೆಯಲ್ಲಿ ಬಿಎಲ್ ಸಂತೋಷ್ ಹಾಗೂ ಪ್ರಹ್ಲಾದ ಜೋಶಿ ಅವರು ಮೈಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಲ್ಹಾದ್ ಜೋಶಿ ಅವರಿಗೆ ದಾರಿ ಮಾಡಿಕೊಡಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

'ಪೇಶ್ವೆಗೆ ಪಟ್ಟ' ಎಂದಿದ್ದ ಎಚ್‌ಡಿಕೆ ಮಾತು ನಿಜವಾಗುತ್ತಿದೆಯೇ?
ಈ ಹಿಂದೆ ಪ್ರಹ್ಲಾದ ಜೋಶಿ ಅವರ ಬಗ್ಗೆ ಮಾತನಾಡಿದ್ದ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು, ಪ್ರಹ್ಲಾದ ಜೋಶಿಗೆ ಪಟ್ಟ ಕಟ್ಟಲು ಬಿಜೆಪಿ ಮುಂದಾಗಿದೆ ಎಂದು ಹೇಳಿದ್ದರು. ಪ್ರಹ್ಲಾದ ಜೋಶಿ ಕನ್ನಡ ಮೂಲದವರಲ್ಲ. ಅವರು ಮರಾಠಿ ಭಾಷಿಗ ಪೇಶ್ವೆ ವಂಶಸ್ಥರು ಎಂದು ತಿಳಿಸಿದ್ದರು. ಇದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಆದರೆ, ಬಿಜೆಪಿ ಹೈಕಮಾಂಡ್ ನಡವಳಿಕೆ ಹಿನ್ನೆಲೆಯಲ್ಲಿ ನೋಡುವುದಾದರೆ, ಎಚ್‌ಡಿಕೆ ಮಾತುಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಂತಾಗಿದೆ.
ಜೆಡಿಎಸ್ ಟ್ವೀಟ್
ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರೂ ಟಿಕೆಟ್ ವಿಚಾರವಾಗಿ ಬಿಎಸ್ ಯಡಿಯೂರಪ್ಪರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ.ರಾಜ್ಯದಲ್ಲಿ ಪಕ್ಷ ಕಟ್ಟಿಬೆಳೆಸಿದ ನಾಯಕನ ದುಸ್ಥಿತಿಯಿದು.ಬಳಸಿ ಎಸೆಯುವುದು ಬಿಜೆಪಿಯ ಜನ್ಮಸಿದ್ದ ಹಕ್ಕು.ವಿಶ್ವದ ಅತ್ಯಂತ ದೊಡ್ಡ ಪಕ್ಷ ಎಂದು ಕೊಚ್ಚಿಕೊಳ್ಳುವ ಬಿಜೆಪಿ ಟಿಕೆಟ್ ಘೋಷಣೆ ಮಾಡದೆ ದಿನ ದೂಡುತ್ತಿವೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
'ರೌಡಿಗಳನ್ನು ಸೆಳೆಯುವ ಪಕ್ಷವು, ತನ್ನನ್ನು ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡಲು ನಾಟಕವಾಡುತ್ತಿದೆ. ಎಚ್‌ಡಿ ಕುಮಾರಸ್ವಾಮಿ ಅವರು ಹೇಳಿದಂತೆ ಪೇಶ್ವೆಗಳನ್ನು ಮುನ್ನೆಲೆಗೆ ತರಲು ವೇದಿಕೆ ತಯಾರಾಗುತ್ತಿದೆ. ಹೀಗಾಗಿಯೆ ಬಿಜೆಪಿ ತನ್ನ ಟಿಕೆಟ್ ಘೋಷಣೆಗೆ ಮೀನಮೇಷ ಎಣಿಸುತ್ತಿದೆ' ಎಂದು ಹೇಳಿದೆ.

'ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲು ನಡೆಸಿದ ಸಭೆಯ ಮುಖ್ಯ ಸೂತ್ರದಾರ ಅಮಿತ್ ಶಾ ತನ್ನ ಮಗನಿಗೆ ಆಯಕಟ್ಟಿನ ಜಾಗ ನೀಡಿದವರು ಎನ್ನುವುದೆ ಪರಿಸ್ಥಿತಿಯ ವ್ಯಂಗ್ಯ. ಎಲ್ಲಾ ಸಮುದಾಯಗಳ ಕೋಪಕ್ಕೆ ಗುರಿಯಾಗಿರುವ ಬಿಜೆಪಿ ಈ ಬಾರಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ' ಎಂದೂ ತಿಳಿಸಿದೆ.












Click it and Unblock the Notifications