ನಿಮ್ಮ ಮತದಿಂದ ಸಿಎಂ ಆದೆ: ಕರ್ನಾಟವನ್ನು ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶಿರ್ವಾದಿಸಿ: ಬಸವರಾಜ ಬೊಮ್ಮಾಯಿ
ಹಾವೇರಿ,ಮೇ 8: ಹಾವೇರಿಯನ್ನು ರಾಜ್ಯದ ನಂಬರ್ ಒನ್ ಜಿಲ್ಲೆ ಹಾಗೂ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶೀರ್ವಾದ ಮಾಡಿ ನನ್ನನ್ನು ಆಯ್ಕೆ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಇದು ಯಾವ ಜನ್ಮದ ಋಣಾನುಬಂಧವೋ ನಮ್ಮನ್ನು ಇಲ್ಲಿ ಕೂಡಿಸಿದೆ. ನಾನು ಎಷ್ಟೇ ಕೆಲಸ ಮಾಡಿದರೂ ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಅದು ಕಡಿಮೆ. ಇಲ್ಲಿನ ಶಾಸಕರು ಮುಖ್ಯಮಂತ್ರಿಯಾಗಿ ಈ ರಾಜ್ಯವನ್ನು ಮುನ್ನಡಿಸಿದರು. ಎಸ್ ನಿಜಲಿಂಗಪ್ಪ ಅವರು ಅವರೋಧ ಆಯ್ಕೆಯಾಗಿ ಕೆಲಸ ಮಾಡಿ ಗೌರವಯುತವಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇವತ್ತಿನ ಸ್ಪರ್ಧಾತ್ಮಕ ರಾಜಕಾರಣದಲ್ಲಿ ಹಾಗೂ ನೀವು ನನಗೆ ಕೊಟ್ಟಿರುವ ಬೆಂಬಲದಿಂದ 2018 ರ ಚುನಾವಣೆಯಲ್ಲಿ ನೀವು ನನಗೆ ಕೊಟ್ಟ ಮತದ ಶಕ್ತಿಯಿಂದ ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಕಲ್ಪನೆ ಇಟ್ಟುಕೊಂಡು ನಾನು ಕೆಲಸ ಮಾಡಿದ್ದೇನೆ. ನನ್ನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದೆ ಇಟ್ಟು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ನಗರಕ್ಕೆ ಕಳೆದ 5 ವರ್ಷದಲ್ಲಿ ನಾವು ಮಾಡಿರುವ ಕೆಲಸಗಳ ದೊಡ್ಡ ಪಟ್ಟಿ ಇದೆ. ನಗರೋತ್ಥಾನದ ಅಡಿಯಲ್ಲಿ 15 ಕೋಟಿ ಅಲ್ಲದೇ 25 ಕೋಟಿ ರೂ. ಹೆಚ್ಚುವರಿ ವಿಶೇಷ ಅನುದಾನ ಕೊಟ್ಟಿದ್ದೇನೆ. ಶಿಗ್ಗಾವಿಂಗೆ ಶುದ್ಧ ಕುಡಿಯುವ ನೀರು ಪಡೆಯುವುದು ಎಷ್ಟು ಕಷ್ಟ ಇತ್ತು ಅಂತ ತಮಗೆ ಗೊತ್ತಿದೆ. ನಿಮಗಾಗಿ ವರದಾ ನದಿಯಿಂದ ನೀರು ತಂದಿದ್ದೇನೆ. ಶಿಗ್ಗಾಂವಿಯ ಆಂತರಿಕ ನೀರು ವಿತರಣೆಗೆ 35 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದೇನೆ.
ಶಿಗ್ಗಾಂವಿನ ಬಡಜನರಿಗೆ ಸ್ಲಂ ಬೋರ್ಡ್‌ನಿಂದ 750 ಮನೆ, ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ 5 ಲಕ್ಷದ ಮನೆಗಳನ್ನು 380 ಕುಟುಂಬಕ್ಕೆ ನೀಡಿದ್ದೇನೆ. ನನಗೆ ಇಷ್ಟಕ್ಕೆ ಸಮಾಧಾನ ಇಲ್ಲ. ಶಿಗ್ಗಾವಿ ಯ ಎಲ್ಲ ಬಡವರಿಗೂ ಸೂರು ಕಲ್ಪಿಸಲಾಗುವುದು. ಎಲ್ಲ ವಸತಿ ಯೋಜನೆಗಳಿಂದಲೂ ಐದು ಲಕ್ಷ ರೂ. ಅನುದಾನ ನೀಡಲಾಗುವುದು. ಶಿಗ್ಗಾವಿ ಐಟಿಐ ಶಿಕ್ಷಣಕ್ಕೆ 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ಕೆ ಎಸ್ ಆರ್‌ಟಿಸಿ ಡಿಪೋದಲ್ಲಿ ಐಟಿಐ ಪ್ರತ್ಯೇಕವಾಗಿ ಮಾಡಿದ್ದೇವೆ.

ಸರ್ಕಾರಿ ಟೂಲ್ ರೂಂ ಅನ್ನು 67 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭ ಆಗ್ತಿದೆ. ಸುಮಾರು 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ ಟೈಲ್ ಪಾರ್ಕ್ ಏಳೆಂಟು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತದೆ. ಈಗಾಗಲೇ ಸಾಯಿ ಗಾರ್ಮೆಂಟ್ಸ್ ಆರಂಭ ಆಗಿದ್ದು ಅದರಲ್ಲಿ ಸುಮಾರು 2000 ಹೆಣ್ಣು ಮಕ್ಕಳಿಗೆ ಉದ್ಯೊಗ ದೊರೆಯಲಿದೆ. ಇಲ್ಲಿ ಖಾಸಗಿ ಸಿಬಿಎಸ್ ಸಿ ಶಾಲೆ ತೆರೆಯಲು ಅವಕಾಶ ಕಲ್ಪಿಸಲಾಗುವುದು. ಕಾರ್ಖಾನೆ ಬಂದರೆ, ಟ್ಯಾಕ್ಸಿ ಆಟೊ, ವ್ಯಾಪಾರ ಎಲ್ಲವೂ ಹೆಚ್ಚಾಗಿ ಶಿಗ್ಗಾಂವಿಯ ಆರ್ಥಿಕ ಬೆಳವಣಿಗೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅಂಬೇಡ್ಕರ್ ಭವನ, ಜಗಜೀವನ್ ರಾಂ ಭವನ, ವಾಲ್ಮೀಕಿ ಭವನ, ಕಸಕದಾಸ ಸಂಘಕ್ಕೆ 3 ಕೋಟಿ, ಮರಾಠ ಸಮುದಾಯ ಸಂಘಕ್ಕೆ 3 ಕೋಟಿ, ವೀರಶೈವ ಪಂಚಮಸಾಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಸಮುದಾಯಕ್ಕೂ ಜಮೀನು ಕೊಡಿಸಿ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕು. ಶಿಗ್ಗಾಂವಿಯಲ್ಲಿ ಚೆನ್ನಮ್ಮ, ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ನಿರ್ಮಾಣ ಮಾಡಲಾಗುವುದು. ಮತ್ತೊಮ್ಮೆ ಬಿಜೆಪಿ ಬರಬೇಕು.
ಖರ್ಗೆಯವರು ಮೋದಿಗೆ ವಿಷ ಸರ್ಪ ಅಂದರು. ಮೋದಿ ಸಮಾಜದ ವಿಷ ನುಂಗಿ ಆಧುನಿಕ ನೀಲಕಂಠ ಆಗಿದ್ದಾರೆ. ಬಜರಂಗ ದಳ ಬ್ಯಾನ್ ಮಾಡುವುದಾಗಿ ಹೇಳುತ್ತಾರೆ. ಪಿಎಫ್ಐ ಜೊತೆ ಬಜರಂಗ ದಳವನ್ನು ಹೋಲಿಸುತ್ತಾರೆ. ಈಗ ವಿರೋಧ ವ್ಯಕ್ತವಾಗುತ್ತಿದ್ದಂತೆ ತಾವೂ ಹನುಮಂತ ನ ಭಕ್ತರು ಎಂದು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.












Click it and Unblock the Notifications