ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ: #ಲಿಂಗಾಯತವಿರೋಧಿಬಿಜೆಪಿ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್
'ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ' ಎಂದು ಕರ್ನಾಟಕ ಕಾಂಗ್ರೆಸ್‌ನ ರಾಜ್ಯ ಘಟಕವು ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದೆ. #ಲಿಂಗಾಯತವಿರೋಧಿಬಿಜೆಪಿ ಹ್ಯಾಶ್‌ಟ್ಯಾಗ್ ಬಳಸಲಾಗಿದೆ.
ಬೆಂಗಳೂರು, ಮಾರ್ಚ್ 16: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆರೋಪ- ಪ್ರತ್ಯಾರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ, 'ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ' ಎಂದು ಕರ್ನಾಟಕ ಕಾಂಗ್ರೆಸ್‌ನ ರಾಜ್ಯ ಘಟಕವು ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದೆ. #ಲಿಂಗಾಯತವಿರೋಧಿಬಿಜೆಪಿ ಹ್ಯಾಶ್‌ಟ್ಯಾಗ್ ಬಳಸಲಾಗಿದೆ.
'ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ. ಶೆಟ್ಟರ್‌ಗೆ ಅವರ ಕ್ಷೇತ್ರದಲ್ಲೇ ವೇದಿಕೆಗೆ ಆಹ್ವಾನವಿರಲಿಲ್ಲ. BSY ರವರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. ಶಾಸಕ ಸೋಮಣ್ಣ ಅತಂತ್ರರಾಗಿದ್ದಾರೆ. ಕೇಂದ್ರ ನಾಯಕರು ಬೊಮ್ಮಾಯಿಯವರ ಹೆಸರೇ ಹೇಳುತ್ತಿಲ್ಲ. ಇದೆಲ್ಲವೂ ಜೋಶಿ, ಸಂತೋಷರ ತಂತ್ರವೇ' ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

'ಬಸವರಾಜ ಬೊಮ್ಮಾಯಿ ಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ. ಸಂಸದ ಸಿದ್ದೇಶ್ ಹೇಳಿದ್ದಕ್ಕೂ ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ ಬೊಮ್ಮಾಯಿಯವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ? ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ' ಎಂದೂ ಕೆಪಿಸಿಸಿ ಟ್ವೀಟ್ ಮಾಡಿದೆ.
'ಸ್ವತಃ ಬಿಜೆಪಿ ಶಾಸಕರೇ ರಾಜ್ಯ ಸರ್ಕಾರ ನಮಗೆ ಅನುದಾನ ಕೊಡ್ತಿಲ್ಲ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುತ್ತಾರೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಜಾರಿಗೆ ಮುಂದಾಗಿದೆ. ಕರ್ನಾಟಕಕ್ಕೆ ಇಂತಹ ಹೀನಾಯ ಸ್ಥಿತಿ ತಂದಿದ್ದೇ ಬಸವರಾಜ ಬೊಮ್ಮಾಯಿ ಸಾಧನೆಯೇ? ಬೊಮ್ಮಾಯಿಯವರ ಮೇಲೆ ಬಿಜೆಪಿಗೇ ಭರವಸೆ ಇಲ್ಲದಾಗಿದೆಯೇ' ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
'BSY ಟೀಕಿಸಲೆಂದು ಒಂದು ತಂಡವನ್ನೇ "ಸಂತೋಷ ಕೂಟ" ತಯಾರು ಮಾಡಿದೆ. ಆ ತಂಡದ ಪ್ರಮುಖ ವಕ್ತಾರರು ಯತ್ನಾಳ್, ಸಿಟಿ ರವಿ. ಬಿಜೆಪಿಯಲ್ಲಿ BSY ನಾಯಕತ್ವವನ್ನು ಪ್ರಶ್ನಿಸುತ್ತಿರುವವರು ಯಾರು? ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು ಶತಪ್ರಯತ್ನ ನಡೆಸುತ್ತಿರುವವರು ಯಾರು' ಎಂದು ಕೆಪಿಸಿಸಿ ಕೇಳಿದೆ.

'BSY ಅವರಿಗೆ ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ. BSYರಿಗೆ ಟಿಕೆಟ್ ನಿರ್ಧರಿಸುವ ಹಕ್ಕಿಲ್ಲ. BSYರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. BSYರಿಗೆ ವೇದಿಕೆಗಳಲ್ಲಿ ಜಾಗವಿಲ್ಲ. BSY ಅವರ ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡಲಿಲ್ಲ. BSY ಬಿಜೆಪಿಗೆ ಅನಿವಾರ್ಯವಲ್ಲ ಎಂದು ಕಟೀಲ್ ಹೇಳುತ್ತಾರೆ. ಈ ಘಟನೆಗಳೇ ಈ ಹೇಳಿಕೆಗೆ ಸ್ಪೂರ್ತಿಯೇ ಬಿಜೆಪಿ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications