ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ; ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೆಷ್ಟು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಪಕ್ಷೇತರ ಮತ್ತು ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದು, ಗೆಲುವಿಗಾಗಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಈಗಾಗಲೇ ಏಪ್ರಿಲ್ 20ರೊಳಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇಂದು (ಏಪ್ರಿಲ್ 24) ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಸಂಜೆಯ ವೇಳೆಗೆ ಅಧಿಕೃತವಾಗಿ ಸ್ಪರ್ಧೆಯಲ್ಲಿ ಉಳಿಯುವವರು ಯಾರು ಎಂಬ ಮಾಹಿತಿ ಲಭ್ಯವಾಗಲಿದೆ.

ಸದ್ಯ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ 224 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಅಭ್ಯರ್ಥಿಗಳು ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸೇರಿದಂತೆ ನೂರಾರು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಆಡಳಿತರೂಢ ಬಿಜೆಪಿಯಿಂದ 224 ಅಭ್ಯರ್ಥಿಗಳು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ 223 ಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಎಎಪಿಯಿಂದ 212, ಜೆಡಿಎಸ್‌ನಿಂದ 211 ಬಿಎಸ್‌ಪಿ ಪಕ್ಷದಿಂದ 137, ಸಿಪಿಐ(ಎಂ)ನಿಂದ 4 ಎನ್‌ಸಿಪಿಯಿಂದ 9, ನೋಂದಾಯಿತ ಮತ್ತು ಮಾನ್ಯತೆರಹಿತ ಪಕ್ಷಗಳಿಂದ 736, ಸ್ವತಂತ್ರ ಹಾಗೂ ಪಕ್ಷೇತರರಾಗಿ 1379 ಅಭ್ಯರ್ಥಿಗಳು ಸೇರಿದಂತೆ ಒಟ್ಟು 3130 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದೆ.
ನಾಮಪತ್ರ ವಾಪಸ್‌ಗೆ ಜೊನೆಯ ದಿನ
ಇಂದು (ಏಪ್ರಿಲ್ 24) ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ್ದರಿಂದ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನ ಮಾಡಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಬಿಜೆಪಿ, ಕಾಂಗ್ರೆಸ್ ಮತ್ತಯ ಜೆಡಿಎಸ್‌ನಿಂದ ಟಿಕೆಟ್ ವಂಚಿತ ಆಕಾಂಕ್ಷಿಗಳು ಸ್ವಪಕ್ಷದ ವಿರುದ್ಧವೇ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬಂಡಾಯ ಅಭ್ಯರ್ಥಿಗಳಿಂದ ತಲೆಕೆಡಿಸಿಕೊಂಡಿರುವ ರಾಷ್ಟ್ರೀಯ ಪಕ್ಷಗಳು, ಮತ ವಿಭಜನೆ ಹೊಡೆತದಿಂದ ತಪ್ಪಿಸಿಕೊಳ್ಳಲು ನಾಮಪತ್ರ ವಾಪಸ್ ಹಿಂತೆಗೆದುಕೊಳ್ಳುವಂತೆ ಮನವೊಲಿಸುತ್ತಿವೆ.
ಇದೇ ವೇಳೆ ಮೂರು ಪಕ್ಷಗಳಿಂದ ಟಿಕೆಟ್ ಸಿಗದೇ ಬಂಡಾಯವೆದ್ದಿರುವ ಕೆಲವು ಅಭ್ಯರ್ಥಿಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಯಾವುದೇ ಮನವೊಲಿಕೆಗೆ ಬಗ್ಗುತ್ತಿಲ್ಲ.
ಇನ್ನು ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಬ್ಯಾಕಪ್ ಆಗಿ ನಾಮಪತ್ರ ಸಲ್ಲಿಸಿದ್ದ ಅವರ ಸಹೋದರ ಡಿ.ಕೆ. ಸುರೇಶ್ ಇಂದು ನಾಮಪತ್ರ ವಾಪಸ್ ಪಡೆಯಲಿದ್ದಾರೆ.
ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಬೆಂಬಲ ನೀಡಲಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಅವರು ತಮ್ಮ ಪತ್ನಿ ಕಾವ್ಯ ಅವರಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಕೊಡಿಸಿದ್ದರು. ಇಂದು ಅವರೂ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ.
ಇದೇ ವೇಳೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯ ಅಭ್ಯರ್ಥಿಗಳೇ ಕಂಟಕವಾಗಿದ್ದಾರೆ. ಹಾಲಿ ಶಾಸಕ ಎಂ. ಶ್ರೀನಿವಾಸ್‌ಗೆ ಟಿಕೆಟ್ ತಪ್ಪಿಸಿ ಮನ್ಮುಲ್ ಅಧ್ಯಕ್ಷ ರಾಮಚಂದ್ರಗೆ ಟಿಕೆಟ್ ನೀಡಲಾಗಿತ್ತು. ನಂತರ ವಿಜಯಾನಂದ ಹಾಗೂ ಎಂ. ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ, ಏಪ್ರಿಲ್ 24ರ ಸಂಜೆ ವೇಳೆಗೆ 2023 ವಿಧಾನಸಭೆ ಚುನಾವಣೆಯ ಮತದಾನದಲ್ಲಿ ಉಳಿಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಕಣದಲ್ಲಿರುವ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನು ನಾಮಪತ್ರ ವಾಪಸ್ ಪಡೆಯಲು ಇಂದು (ಏಪ್ರಿಲ್ 24) ಕೊನೆಯ ದಿನಾವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications