Karnataka Elections: ಕೇವಲ 18 ದಿನಗಳಲ್ಲಿ ₹58 ಕೋಟಿ ಮೌಲ್ಯದ ವಸ್ತು, ನಗದು ವಶ- ಕೆಜಿಗಟ್ಟಲೇ ಬಂಗಾರ, ಇಲ್ಲಿದೆ ವಿವರ
ಬೆಂಗಳೂರು, ಮಾರ್ಚ್ 30: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ದಿನಾಂಕ ಪ್ರಕಟಗೊಂಡಿವೆ. ಮೇ 10 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗವು ( Election Commission of India ) ಈ ಮಾಹಿತಿಯನ್ನು ಹಂಚಿಕೊಂಡಿದೆ. ಇದೇ ವೇಳೆ ಕರ್ನಾಟಕ ಚುನಾವಣೆಗೂ ಮುನ್ನ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಆಯೋಗವು ಆತಂಕ ವ್ಯಕ್ತಪಡಿಸಿದೆ.
ಚುನಾವಣೆಗೂ ನಲವತ್ತು ದಿನಗಳು ಬಾಕಿ ಇರುವಾಗಲೇ ಸಿಕ್ಕಿರುವ ಅಕ್ರಮದ ಹಣ ಹಾಗೂ ವಸ್ತುಗಳ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಬುಧವಾರ ಮಾತನಾಡಿದರು.

ಮತದಾರರಿಗೆ ಆಮಿಷ ಒಡ್ಡುವಂತಹ ಚುನಾವಣಾ ಅವ್ಯವಹಾರಗಳನ್ನು ಪರಿಶೀಲಿಸಲು ವಿವಿಧ ಏಜೆನ್ಸಿಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ವೇಳೆಯಲ್ಲಿ, ಸುಮಾರು 58 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿವೆ. ಕರ್ನಾಟಕದಲ್ಲಿ ಮಾರ್ಚ್ 9 ರಿಂದ ಮಾರ್ಚ್ 27 ರ ವರೆಗೆ ಈ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 1, 985 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸಿಇಒ ಹೇಳಿದರು.
14 ಕೋಟಿ ನಗದು, 530 ಕೆಜಿ ಮಾದಕ ದ್ರವ್ಯ, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ, 11.2 ಕೋಟಿ ಮೌಲ್ಯದ ಸಾಮಾನುಗಳೂ ಸೇರಿದಂತೆ 34.4 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ 10.9 ಕೋಟಿ ಮೌಲ್ಯದ ಮಧ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆಯು 1. 16 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆ ಒಟ್ಟಾರೆ 5. 02 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. ಇತರ ವಶಪಡಿಸಿಕೊಂಡವುಗಳಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನಿಂದ 1. 03 ಕೋಟಿ ರೂ., ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ರೂ 57. 15 ಲಕ್ಷ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯಿಂದ ರೂ 3. 97 ಕೋಟಿ ಮತ್ತು ರಾಜ್ಯ ನಾಗರಿಕ ವಿಮಾನಯಾನದಿಂದ ರೂ 69. 4 ಲಕ್ಷ ಸೇರಿವೆ ಎಂದು ಮೀನಾ ಹೇಳಿದರು.
ಚುನಾವಣೆ ಅಕ್ರಮಗಳನ್ನು ತಡೆಯಲು 2, 040 ಫ್ಲೈಯಿಂಗ್ ಸ್ಕ್ವಾಡ್‌ಗಳು, 2, 605 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು, 266 ವಿಡಿಯೋ ವೀಕ್ಷಣೆ ತಂಡಗಳು, 631 ವಿಡಿಯೋ ಕಣ್ಗಾವಲು ತಂಡಗಳು ಮತ್ತು 225 ಲೆಕ್ಕಪರಿಶೋಧಕ ತಂಡಗಳನ್ನು ರಚಿಸಲಾಗಿದೆ. 942 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ರಾಜಕೀಯ ಪಕ್ಷಗಳು ಮತದಾರರಿಗೆ ವಸ್ತುಗಳು ಮತ್ತು ನಗದು ಹಂಚುವುದನ್ನು ತಡೆಯಲು ಅಂತರರಾಜ್ಯ ಗಡಿಗಳಲ್ಲಿ ಒಟ್ಟು 171 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ರಾಜ್ಯ ರಾಜಧಾನಿಯೊಂದರಲ್ಲೇ 2.76 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಹೊಲಿಗೆ ಯಂತ್ರಗಳು, ಲೋಹದ ಸ್ಟ್ಯಾಂಡ್‌ಗಳು, ಬಕೆಟ್‌ಗಳು, ಟೋಪಿಗಳು, ಕುಕ್ಕರ್‌ಗಳು, ತವಾಗಳು, ಚಿನ್ನಾಭರಣಗಳು, ವಾಹನಗಳು, ನೋಟ್‌ಬುಕ್‌ಗಳು ಮತ್ತು ಶಾಲುಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈಗಿನ ವಿಧಾನಸಭೆಯ ಅವಧಿ ಮೇ 24 ರಂದು ಕೊನೆಯಾಗಲಿದೆ. ಕರ್ನಾಟಕ ಚುನಾವಣೆಯಲ್ಲಿ 2.62 ಕೋಟಿ ಪುರುಷರು ಮತ್ತು 2.59 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 5. 21 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications