Rahul Gandhi: ಪ್ರಧಾನಮಂತ್ರಿಗಳೇ 40% ಕಮಿಷನ್ ಲಂಚದಲ್ಲಿ ಯಾವ ಇಂಜಿನ್ ಗೆ ಎಷ್ಟು ಪಾಲು ದೊರೆತಿದೆ? : ರಾಹುಲ್ ಗಾಂಧಿ
ಬೆಂಗಳೂರು,ಮೇ 08: ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದರೋಡೆಯಾಗಿದೆ. ಪ್ರಧಾನಮಂತ್ರಿಗಳೇ 40% ಕಮಿಷನ್ ಲಂಚದಲ್ಲಿ ಯಾವ ಇಂಜಿನ್ ಗೆ ಎಷ್ಟು ಪಾಲು ದೊರೆತಿದೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನ ಪ್ರಶ್ನಿಸಿದ್ದಾರೆ.
ಆನೇಕಲ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷ 91 ಬಾರಿ ನನ್ನನ್ನು ಟೀಕೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಅವವರು, ಎಷ್ಟು ಜನರನ್ನು ಜೈಲಿಗೆ ಹಾಕಿದ್ದೀರಿ? ನಾನು ಲೋಕಸಭೆಯಲ್ಲಿ ನಿಮಗೆ ಅಧಾನಿ ಅವರ ಜತೆ ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದೆ. ನನ್ನನ್ನು ಅನರ್ಹ ಮಾಡಿದರು. ನಾನು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಲೋಕಸಭೆಯಿಂದ ಹೊರಗೆಹಾಕಿದರು ಎಂದು ಅಸಮಾಧಾನ ಹೊರ ಹಾಕಿದರು.

ರಾಜ್ಯದಲ್ಲಿ ಕಳ್ಳತನ ಆಗಿದ್ದರೆ ಅದರ ಲಾಭ ದೆಹಲಿಗೂ ತಲುಪಿರುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕಿತ್ತು. ಕಳೆದ 3 ವರ್ಷಗಳಲ್ಲಿ ಮೋದಿ ಅವರು ಏನು ಮಾಡಿಲ್ಲ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಒಂದು ಮಾತನ್ನು ಆಡಿಲ್ಲ. ಮಣಿಪುರದಲ್ಲಿ ದೊಡ್ಡ ಗಲಾಟೆ ನಡೆದು ಜನ ಸಾಯುತ್ತಿದ್ದರಾ. ಆದರೂ ಪ್ರಧಾನಿಗಳು ಹಾಗೂ ಗೃಹಸಚಿವರಿಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ.
ದ್ವೇಷ ರಾಜಕೀಯದ ಫಲ ಇದಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಅದಕ್ಕೆ ದ್ವೇಷ ರಾಜಕಾರಣವೇ ಕಾರಣ. ಈ ರಾಜನೀತಿ ವಿರುದ್ಧವಾಗಿಯೇ ನಾವು ಭಾರತ ಜೋಡೋ ಯಾತ್ರೆ ಮಾಡಿದೆವು. ಇದು ನಮ್ಮ ವಿಚಾರಧಾರೆ. ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು, ಬೇರೆ ಸರ್ಕಾರ, ಆದರೆ ಆಡಳಿತ ಮಾಡಿದ್ದು, ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ.

ನಾನು ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ಮೂಲಕ 500ಕ್ಕೂ ಹೆಚ್ಚು ಕಿ.ಮೀ ನಿಮ್ಮ ಜತೆ ಪಾದಯಾತ್ರೆ ಮಾಡಿದ್ದೆ. ಈ ರಾಜ್ಯದ ತಾಯಂದಿರು, ಯುವಕರು, ಕಾರ್ಮಿಕರ ಜತೆ ನಾನು ಹೆಜ್ಜೆ ಹಾಕಿದ್ದೆ. ಭಾರತ ಹಾಗೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಿದ್ದೆ. ಸಮಾಜದಲ್ಲಿ ದ್ವೇಷ, ಹಿಂಸಾಚಾರ ತೊಲಗಿಸಲು ಹೆಜ್ಜೆ ಹಾಕಿದ್ದೆ. ಈ ಸಂದರ್ಭದಲ್ಲಿ ನೀವು ನನಗೆ ನಿರುದ್ಯೋಗ, ಬೆಲೆ ಏರಿಕೆ ವಿಚಾರವಾಗಿ ಹೇಳಿದ್ದಿರಿ. 400 ರೂ. ಇದ್ದ ಸಿಲಿಂಡರ್ 1100 ಆಗಿದೆ. 70 ರೂ. ಇದ್ದ ಪೆಟ್ರೋಲ್ 100 ರೂ. ಆಗಿದೆ. ಡೀಸೆಲ್ 60 ರೂ. ಇತ್ತು 90 ರೂ. ಆಗಿದೆ. ನೋಟು ರದ್ಧತಿ ಹಾಗೂ ಜಿಎಸ್ ಟಿ ಸಣ್ಣಪುಟ್ಟ ವ್ಯಾಪಾರಿಗಳನ್ನು ನಾಶ ಮಾಡಿದೆ. ಕರ್ನಾಟಕದಲ್ಲಿ 40% ಕಮಿಷನ್ ಭ್ರಷ್ಟಾಚಾರ ಸರ್ಕಾರ ಎಂದು ನೀವೆಲ್ಲರೂ ಹೇಳಿದ್ದೀರಿ. ಭ್ರಷ್ಟಾಚಾರದಲ್ಲಿ ಈ ಸರ್ಕಾರ ವಿಶ್ವ ದಾಖಲೆ ಮುರಿದಿದೆ.
ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಲಿಲ್ಲ. ಎಲ್ಲೇ ನೋಡಿದರೂ ಹಗರಣಗದಳು ನಡೆದಿವೆ. ಪಿಎಸ್ಐ, ಸಹಾಯಕ ಪ್ರಾದ್ಯಾಪಕರು, ಕಿರಿಯ ಇಂಜಿನಿಯರ್ ನೇಮಕಾತಿ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಮೈಸೂರ್ ಸ್ಯಾಂಡಲ್ ಹಗರಣದಲ್ಲಿ ಶಾಸಕರ ಪುತ್ರ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬೀಳುತ್ತಾರೆ. ಆದರೆ ಬಿಜೆಪಿ ಶಆಸಕರು ಹೇಳುತ್ತಾರೆ, ರಾಜ್ಯದಲ್ಲಿ ಸಿಎಂ ಹುದ್ದೆಗೆ 2500 ಕೋಟಿಗೆ ಖರೀದಿ ಮಾಡಬಹುದು ಎನ್ನುತ್ತಾರೆ. ಈ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಕ್ಕಳಿಗೂ ತಿಳಿದಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಪ್ರಧಾನಮಂತ್ರಿಗಳಿಗೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ.
ಈ ಸರ್ಕಾರಕ್ಕೆ 40ರ ಸಂಖ್ಯೆ ಬಹಳ ಸೂಕ್ತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಎಲ್ಲಾ ಹಂತದಲ್ಲೂ 40 ಸಂಖ್ಯೆ ಬಳಸಿದ್ದಾರೆ. ಇದಕ್ಕಾಗಿ ನೀವು ಈ ಚುನಾವಣೆಯಲ್ಲಿ 40 ಸೀಟುಗಳನ್ನು ಮಾತ್ರ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಕನಿಷ್ಠ 150 ಸೀಟುಗಳನ್ನು ನೀಡಬೇಕು. ಅದಕ್ಕಿಂತ ಕಡಿಮೆ ಬಹುಮತ ನೀಡಿದರೆ, ಮತ್ತೆ ಶಾಸಕರ ಕಳ್ಳತನ ಮಾಡುವ ಪ್ರಯತ್ನ ಮಾಡುತ್ತಾರೆ. ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆದ್ದೆ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications