ಹೈಕಮಾಂಡ್ ನಾಯಕರಿಗೆ ಸಿಎಂ ದೂರವಾಣಿ ಕರೆ; ನಮ್ಮ ಸ್ಟ್ಯಾಂಡ್ ಒಂದೇ,ನಮಗೆ ಬಹುಮತ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಮೇ 12: ಹೈಕಮಾಂಡ್ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ಬಗ್ಗೆ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ಹೈಕಮಾಂಡ್ ನಾಯಕರು ಸಹ ಗೆಲ್ಲುವ ವಿಶ್ವಾಸದಲ್ಲಿದ್ದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡುವ ಪ್ರಯತ್ನ ಪಡ್ತಿದಾರೆ. ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ನಾನು ಮೊದಲಿಂದಲೂ ಒಂದೇ ಮಾತು ಹೇಳುತ್ತ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ನಾವು ಗೆಲ್ಲುವ ವಿಶ್ವಾಸ ಇದ್ದು, ಬಹುಮತದ ಗಡಿ ದಾಟುತ್ತೇವೆ. ಮ್ಯಾಜಿಕ್ ನಂಬರ್ ತಲುಪುತ್ತೇವೆ. ಎಲ್ಲ ಕ್ಷೇತ್ರ, ಬೂತ್ ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ. ಈಗ ನಮ್ಮ ಮುಂದೆ ಮೈತ್ರಿಯ ಪ್ರಶ್ನೆ ಇಲ್ಲ. ನಾವು ಬಹುಮತ ದಾಟುತ್ತೇವೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ. ಅವರಿಗೆ ಸಭೆ ಮಾಡುವ ಹಕ್ಕಿದೆ. ಎಲ್ಲ ಪಕ್ಷಗಳೂ ಸಭೆ ಮಾಡುತ್ತಾರೆ ಎಂದರು.
ಕುಮಾರಸ್ವಾಮಿ ಯಾರ ಜತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವೋ ಗೊತ್ತಿಲ್ಲ: ಡಿಕೆಶಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಯಾರ ಜತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಬಹುಮತ ಬಾರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂಬ ಹೇಳಿಕೆ ಕುರಿತು ಮಾತನಾಡಿ, ಕುಮಾರಣ್ಣ ಅವರು ಯಾವ ಲೆಕ್ಕಾಚಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವಂತೂ ಆರೋಗ್ಯ ಉತ್ತಮವಾಗಿ ಇರುವವರೆಗೂ ನಿವೃತ್ತಿ ಪಡೆಯುವುದಿಲ್ಲ. ದಳದ ಕಾರ್ಯಕರ್ತರು ಸಮಯ ವ್ಯರ್ಥ ಮಾಡದೆ ನಮ್ಮ ಜತೆ ಸೇರಿಕೊಳ್ಳಲಿ ಎಂದು ಹೇಳಿದ್ದೇನೆ. ಇಂದು ಅದನ್ನೆ ಹೇಳುತ್ತೇನೆ ಎಂದು ತಿಳಿಸಿದರು.
ರೆಸಾರ್ಟ್ ರಾಜಕೀಯ ಈ ಬಾರಿ ಅಂತ್ಯ ಆಗುತ್ತಾ ಎಂಬ ಬಗ್ಗೆ ಮಾತನಾಡಿ, ಬಿಜೆಪಿಯವರು ಎಷ್ಟೇ ಸೀಟು ಬಂದರು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದು ಅವರ ಭ್ರಮೆ. ಎಲ್ಲಾ ಪಕ್ಷದವರು ತಮ್ಮ ಪಕ್ಷದ ನಾಯಕರನ್ನು ಒಂದು ಕಡೆ ಸೇರಿಸಿ ವಿಶ್ರಾಂತಿ ಪಡೆದು ಚರ್ಚೆ ಮಾಡುತ್ತಾರೆ. ಇದು ಸಹಜ ಎಂದು ತಿಳಿಸಿದರು.
ಎಕ್ಸಿಟ್ ಪೋಲ್ ಆಧಾರದ ಮೇಲೆ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸದ್ಯಕ್ಕೆ ಯಾವ ಅಧಿಕಾರ ಹಂಚಿಕೆ ಆಗಿಲ್ಲ. ನಮ್ಮ ಹೈಕಮಾಂಡ್, ಮಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಏನು ಹೇಳುತ್ತಾರೋ ಅದೇ ಅಂತಿಮ ಎಂದು ಹೇಳಿದರು.
ನಾನು ಶ್ರಮ ಪಟ್ಟಿದ್ದೇನೆ. ಉಪಚುನಾವಣೆಯಲ್ಲಿ ಪಕ್ಷ ಸೋತ ನಂತರ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿದ್ದರಾಮಯ್ಯ ಅವರು ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ನಂತರ ಸೋನಿಯಾ ಗಾಂಧಿ ಅವರು ನನಗೆ ಈ ಜವಾಬ್ದಾರಿ ನೀಡಿದರು. ನಾನು ಈ ಜವಾಬ್ದಾರಿ ಪಡೆದ ದಿನದಿಂದ ಮಲಗಿಲ್ಲ. ಪಕ್ಷದ ನಾಯಕರು ಕಾರ್ಯಕರ್ತರಿಗೂ ಮಲಗಲು ಬಿಟ್ಟಿಲ್ಲ. ಪಕ್ಷ ಸಂಘಟನೆಗೆ ಏನು ಮಾಡಬೇಕೋ ಮಾಡಿದ್ದೇನೆ. ಎಲ್ಲರೂ ನಮಗೆ ಸಹಕಾರ ನೀಡಿ ಆಶೀರ್ವಾದ ನೀಡುತ್ತಾರೆ. ಉತ್ತಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ' ಎಂದು ತಿಳಿಸಿದರು.












Click it and Unblock the Notifications