ಸ್ಥಳೀಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾಂಗ್ರೆಸ್ ಮೆಗಾಪ್ಲ್ಯಾನ್- ಇನ್‌ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 08: ಕರ್ನಾಟಕ ಚುನಾವಣೆ ( Karnataka Assembly Elections 2023 ) ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ( Narendra Modi ) ವರ್ಸಸ್ ರಾಹುಲ್ ಗಾಂಧಿ ( Rahul Gandhi ) ಚರ್ಚೆ ಮುನ್ನೆಲೆಗೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್ ಮೆಗಾಪ್ಲ್ಯಾನ್ ಮಾಡಿದೆ. ಈ ಮೂಲಕ ರಾಷ್ಟ್ರೀಯ ಸಮಸ್ಯೆಗಳ ಬದಲಿಗೆ ರಾಜ್ಯದ ಸಮಸ್ಯೆಗಳ ಮೇಲೆ ವಿಧಾನಸಭೆ ಚುನಾವಣೆಯ ಪ್ರಚಾರ ನಡೆಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ನಾಯಕರಿಗೆ ತಿಳಿಸಿದ್ದಾರೆ.
40 ಪರ್ಸೆಂಟ್ ಕಮಿಷನ್ ಆರೋಪ, ಲೋಕಾಯುಕ್ತದಿಂದ ಹಾಲಿ ಬಿಜೆಪಿ ಶಾಸಕ ವೀರುಪಾಕ್ಷಪ್ಪ ಮಾಡಾಳ್ ಬಂಧನ, ಪಿಎಸ್‌ಐ ನೇಮಕಾತಿ ಹಗರಣ, ಕೋಮು ದ್ವೇಷ ಮತ್ತು ಬೆಲೆ ಏರಿಕೆ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯಗಳ ಕೊರೆತೆಯು ಕರ್ನಾಟಕದ ಪ್ರಮುಖ ಚುನಾವಣಾ ವಿಷಯಗಳಾಗಬೇಕೆಂದು ಚಿಂತನೆ ಮಾಡಲಾಗಿದೆ. ಆದಾಗ್ಯೂ, ಬೆಲೆ ಏರಿಕೆ, ಕೃಷಿ ಕ್ಷೇತ್ರದ ಸಮಸ್ಯೆಗಳು, ರಸಗೊಬ್ಬರಗಳ ಬೆಲೆ ಹೆಚ್ಚಳ ಮತ್ತು ನಿರುದ್ಯೋಗದಂತಹ ರಾಷ್ಟ್ರೀಯ ಸಮಸ್ಯೆಗಳನ್ನೂ ಪಕ್ಷವು ಪ್ರಸ್ತಾಪಿಸುತ್ತದೆ ಎಂದು ಹಿರಿಯ ನಾಯಕರು ಹೇಳಿದ್ದಾರೆ.
'ರಾಹುಲ್ ಗಾಂಧಿಯವರ ಅನರ್ಹತೆ ಮತ್ತು ಅದಾನಿ ಗ್ರೂಪ್ ವಿವಾದಗಳ ಬಗ್ಗೆ ಕಾಂಗ್ರೆಸ್ಸಿನ ಕೇಂದ್ರ ನಾಯಕರು ಮಾತನಾಡಬಹುದು. ಆದರೆ, ನಮ್ಮ ಮುಖ್ಯ ಚುನಾವಣಾ ಪ್ರಚಾರವು ಬೊಮ್ಮಾಯಿ ಸರ್ಕಾರದ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವುದಾಗಿದೆ' ಎಂದು ತಿಳಿಸಿದ್ದಾರೆ.
'ಸ್ಥಳೀಯ ಸಮಸ್ಯೆಗಳಿಂದ ದೂರವಿರಲು ಬಿಜೆಪಿ ಈ ಚುನಾವಣಾ ಪ್ರಚಾರವನ್ನು ಮೋದಿ ವರ್ಸಸ್ ರಾಹುಲ್ ಮಾಡಲು ಪ್ರಯತ್ನಿಸುವ ಸಾಧ್ಯತೆಯಿದೆ. ಆದರೆ ಪ್ರಚಾರದ ವೇಗ ಹಳಿತಪ್ಪದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಲಿದೆ. ಏಪ್ರಿಲ್ 10 ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆಯೇ ಹೆಚ್ಚು ಮಾತನಾಡಲಿದ್ದಾರೆ' ಎಂದು ತಿಳಿದುಬಂದಿದೆ.

ಪಕ್ಷವು ರಾಹುಲ್ ಗಾಂಧಿ ರ್ಯಾಲಿಗಳ ಸರಣಿಯನ್ನು ಯೋಜಿಸಿದ್ದರೂ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರಿಯಾಂಕಾ ಗಾಂಧಿಯನ್ನು ವಿನಂತಿಸುತ್ತೇವೆ ಎಂದು ಹಿರಿಯ ನಾಯಕರು ತಿಳಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ರೋಡ್ ಶೋ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಣ್ಣ ರ್ಯಾಲಿಗಳು ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಾಯಕ ಎಂದು ಕಾಂಗ್ರೆಸ್ ನಾಯಕರು ನಂಬಿದ್ದಾರೆ. ಪಕ್ಷವು ರೋಡ್‌ಶೋಗಳನ್ನು ಆಯ್ಕೆ ಮಾಡುತ್ತದೆ ಮತ್ತು ಚುನಾವಣೆಯ ಪೂರ್ವದಲ್ಲಿ ದೊಡ್ಡ ರ್ಯಾಲಿಗಳ ಸಂಖ್ಯೆಯನ್ನು ಮಿತಿಗೊಳಿಸಬಹುದು ಎಂದು ಹಿರಿಯ ನಾಯಕರು ತಿಳಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯತಂತ್ರದ ಬಗ್ಗೆ ಕೇಳಿದಾಗ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಅವರು ಡೆಕ್ಕನ್ ಹೆರಾಲ್ಡ್‌ಗೆ ಪ್ರತಿಕ್ರಿಯಿಸಿದ್ದಾರೆ, 'ಬಿಜೆಪಿ ಸರ್ಕಾರವು ಪ್ರಬಲ ಆಡಳಿತ ವಿರೋಧಿಯನ್ನು ಎದುರಿಸುತ್ತಿದೆ. ನಮ್ಮ ಗಮನವು ಭ್ರಷ್ಟಾಚಾರ ಮತ್ತು ಹಗರಣಗಳಂತಹ ವಿಷಯಗಳನ್ನು ಎತ್ತುವ ಮೂಲಕ ಸರ್ಕಾರದ ದುರಾಡಳಿತವನ್ನು ಬಹಿರಂಗಪಡಿಸುತ್ತದೆ' ಎಂದು ಹೇಳಿದ್ದಾರೆ.
'ನಮ್ಮ PayCM ಅಭಿಯಾನವು ದೊಡ್ಡ ಯಶಸ್ಸನ್ನು ಕಂಡಿತು. ಅದೇ ರೀತಿ ಇನ್ನೂ ಹಲವಾರು ಅಭಿಯಾನಗಳನ್ನು ಮಾಡುತ್ತೇವೆ' ಎಂದು ತಿಳಿಸಿದ್ದಾರೆ
ಮೀಸಲಾತಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಮೂಲಕ ಅನ್ಯಾಯವೆಸಗಿರುವ ಬಗ್ಗೆ ಮತದಾರರಿಗೆ ತಿಳಿಸುತ್ತೇವೆ ಎಂದಿದ್ದಾರೆ.












Click it and Unblock the Notifications