ನನ್ನನ್ನೂ ನಿಂದಿಸಲಾಗಿದೆ, ಆದರೆ ನಾನು ಅಳಲಿಲ್ಲ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್
ಕಲಬುರಗಿ, ಮೇ 04: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತರಾಟೆಗೆ ತೆಗೆದುಕೊಂಡರು. 'ನನ್ನನ್ನೂ ನಿಂದಿಸಲಾಗಿದೆ, ಆದರೆ ನಾನು ಎಂದಿಗೂ ಅಳಲಿಲ್ಲ' ಎಂದು ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ, ಪ್ರಧಾನಿ ಮೋದಿಯವರಂತೆ ಸಾರ್ವಜನಿಕರ ಬಳಿ ಹೋಗಿ ನಾನು ನೋವು ತೋಡಿಕೊಂಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಧವೆ ಮತ್ತು ಇಟಲಿ ಮಹಿಳೆ ಎಂದು ಪ್ರಧಾನಿ ಮತ್ತು ಬಿಜೆಪಿ ಹಿರಿಯ ನಾಯಕರು ನಿಂದಿಸಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಆದರೆ ನಾವು ಯಾರೂ ಮೋದಿ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಅವರು ಹೇಳಿದರು.
'ಮೋದಿ ತಾನು ಕೆಳಜಾತಿಯವನು ಎಂದು ಜನರಿಗೆ ಹೇಳುವ ಮೂಲಕ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾನು ಅವರಿಗಿಂತ ಕೆಳ ಜಾತಿಯಿಂದ ಬಂದಿದ್ದೇನೆ, ಆದರೆ ನಾನು ಎಂದಿಗೂ ಅಳಲಿಲ್ಲ' ಎಂದು ಮಲ್ಲಿಕಾರ್ಜುನ ತಿಳಿಸಿದರು.
ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಈ ಬಗ್ಗೆ ಮಾತನಾಡಿರುವ ಅವರು, ಇದನ್ನು ಬಿಜೆಪಿ ಹೆಚ್ಚಿನ ಅನುಕೂಲ ಕಲ್ಪಿಸಿಕೊಳ್ಳಲು ವಿವಾದ ಮಾಡುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕರು ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ಬಿಜೆಪಿಯೇ ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಇದರಿಂದ ಕೇಸರಿ ಪಕ್ಷವು ರಾಜಕೀಯ ಮೈಲೇಜ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಭರವಸೆಗಳನ್ನು ಕಾರ್ಯಗತಗೊಳಿಸಲು ಅಸಾಧ್ಯ ಎಂದು ಬಿಜೆಪಿ ಹೇಳಿಕೆ ನೀಡಿದೆ. ಈ ಕುರಿತು ಮಾತನಾಡಿರುವ ಅವರು, ಪಕ್ಷ ಅಧಿಕಾರಕ್ಕೆ ಬಂದ ನಂತರ ಖಂಡಿತವಾಗಿಯೂ ಅವುಗಳನ್ನು ನಿಜಗೊಳಿಸುತ್ತೇವೆ ಎಂದು ಹೇಳಿದರು.
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು 165 ಆಶ್ವಾಸನೆಗಳನ್ನು ನೀಡಿದ್ದೆವು ಮತ್ತು ಅವುಗಳಲ್ಲಿ 158 ಅನ್ನು ಜಾರಿಗೊಳಿಸಲಾಗಿದೆ. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿನ ಭರವಸೆಗಳ ಕುರಿತು ಆದೇಶ ಹೊರಡಿಸಲಾಗುವುದು' ಎಂದು ತಿಳಿಸಿದರು.












Click it and Unblock the Notifications