ಬಿಜೆಪಿಯಲ್ಲಿ ಟಿಕೆಟ್ ಕಳೆದುಕೊಳ್ಳುವವರ ಪಟ್ಟಿ, ಇಲ್ಲಿದೆ ವಿವರ?
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಆಡಳಿತರೂಢ ಬಿಜೆಪಿಯಲ್ಲಿ ಟಿಕೆಟ್ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಲಿದ್ದು, ಇದಕ್ಕಾಗಿ ಆಂತರಿಕ ಮತದಾನವನ್ನು ನಡೆಸಲಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ಹಲವಾರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಮಾತ್ರ ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರ ಬಂದರೂ ಪಟ್ಟಿ ಬಿಡುಗಡೆಗೆ ಭಾರೀ ವಿಳಂಬ ಮಾಡುತ್ತಿದೆ. ಇದಕ್ಕೆ ಬಂಡಾಯದ ಬಿಸಿ ಕಾರಣ ಎಂದೂ ಮೂಲಗಳು ತಿಳಿಸಿವೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೇನು ಬಿಡುಗಡೆಯಾಗಲಿದೆ. ಇಲ್ಲಿ ಹಲವಾರು ಮಂದಿಗೆ ಬಿಜೆಪಿ ಟಿಕೆಟ್ ಕೈತಪ್ಪುವ ಸಂಭದವಿದೆ. ಬಿಜೆಪಿಯಲ್ಲಿ ಈ ಬಾರಿ ಸುಮಾರು 22ರಿಂದ 25 ಮಂದಿಗೆ ಟಿಕೆಟ್ ಕೈತಪ್ಪಲಿದೆ ಎಂದು ವರದಿಗಳು ಬರತೊಡಗಿವೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದ್ದಾರೆ.
ಇದಲ್ಲದೆ ಮಂಗಳವಾರ ಶಿವಮೊಗ್ಗ ನಗರ ಶಾಸಕ ಕೆಎಸ್ ಈಶ್ವರಪ್ಪ ಕೂಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್‌ಗೆ ಕೂಡ ಟಿಕೆಟ್ ಕೈತಪ್ಪಲಿದೆ. ಇನ್ನು ಶಿರಸಿ ವಿಧಾನಸಭಾ ಕ್ಷೇತ್ರದ ಹಾಲಿ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗೆಡೆ ಕಾಗೇರಿಗೂ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ವಿಜಯನಗರ ಶಾಸಕರಾಗಿರುವ ಹಾಲಿ ಸಚಿವ ಆನಂದ್ ಸಿಂಗ್ ಕೂಡ ಟಿಕೆಟ್ ಕೈತಪ್ಪಲಿದೆ ಎನ್ನಲಾಗುತ್ತಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಗೂ ಈ ಬಾರಿ ಬಿಜೆಪಿ ಟಿಕೆಟ್ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ, ಇದಲ್ಲದೆ ವಸತಿ ಸಚಿವರಾಗಿರುವ ವಿ ಸೋಮಣ್ಣ ಅವರಿಗೂ ಟಿಕೆಟ್ ತಪ್ಪಲಿದೆ ಎನ್ನಲಾಗುತ್ತಿದೆ. ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌ಎ ರವೀಂದ್ರನಾಥ್ ಅವರಿಗೂ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎನ್ನಲಾಗುತ್ತಿದೆ.
ಮುಧೋಳದ ಗೋವಿಂದ್ ಕಾರಜೋಳ, ಅಥಣಿಯ ಲಕ್ಷಣ ಸವದಿ, ಹಾವೇರಿಯ ನೆಹರೂ ಓಲೇಕಾರ್, ಬೆಂಗಳೂರು ಬಸವನಗುಡಿಯ ರವಿ ಸುಬ್ರಹ್ಮಣ್ಯ, ಚಿಕ್ಕಪೇಟೆ ಉದಯ ಗರುಡಾಚಾರ್, ಮೂಡಿಗೆರೆ ಎಂಪಿ ಕುಮಾರಸ್ವಾಮಿ, ರೋಣದ ಕಳಕಪ್ಪ ಬಂಡಿ, ಯಾದಗಿರಿ ಶಾಸಕ ವೆಂಕಟರೆಡ್ಡಿ, ರಾಜಾಜಿನಗರದ ಸುರೇಶ್ ಕುಮಾರ್, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿಗೂ ಈ ಬಾರಿ ಟಿಕೆಟ್ ಕೈತಪ್ಪಲಿದೆ.
ಇನ್ನೂ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಎಸ್ಎ ರಾಮದಾಸ್ ಅವರಿಗೂ ಈ ಬಾರಿ ಬಿಜೆಪಿಯಿಂದ ಟಿಕೆಟ್ ಲಭ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಕ್ಷೇತ್ರದ ಹಲವಾರು ಬ್ರಾಹ್ಮಣ ಮುಖಂಡರು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಮದಾಸ್ ವಿರುದ್ಧ ದೂರು ನೀಡಿದ್ದರು. ಇದಲ್ಲದೆ ಇತ್ತೀಚೆಗೆ ರಾಮದಾಸ್ ವಿರುದ್ದ ಪ್ರತಿಭಟನೆಗಳು ನಡೆದಿದ್ದವು.
ಇನ್ನು ಧಾರವಾಡದ ಅಮೃತ್ ದೇಸಾಯಿ, ಬಾಗಲಕೋಟೆ ವೀರಣ್ಣ ಚಂತಿಮಠ, ಮಾಯಕೊಂಡ ಶಾಸಕ ಲಿಂಗಣ್ಣ, ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಅವರಿಗೂ ಟಿಕೆಟ್ ಸಿಗುವುದಿಲ್ಲ ಎನ್ನಲಾಗುತ್ತಿದೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ಬಿಜೆಪಿಯಲ್ಲಿ ಯಾರೆಲ್ಲಾ ತಮಗೂ ತಮ್ಮ ಮಕ್ಕಳಿಗೂ ಟಿಕೆಟ್ ಬೇಕು ಎಂದು ಕೇಳಿದ್ದರೋ ಅವರಿಗೆಲ್ಲಾ ಟಿಕೆಟ್ ಇಲ್ಲಾ ಎನ್ನಲಾಗುತ್ತಿದೆ. ಇನ್ನು ಮಂಗಳವಾರ ಟಿಕೆಟ್ ಜಗದೀಶ್ ಶೆಟ್ಟರ್ ಅವರಿಗೆ ಇಲ್ಲ ಎಂದು ಹೈಕಾಮಾಂಡ್‌ನಿಂದ ಸೂಚನೆ ಬಂದಿದ್ದು, ಅವರು ಬಂಡಾಯ ಏಳುತ್ತಾರೆ ಎನ್ನಲಾಗಿದೆ, ಇದಲ್ಲದೆ ಪತ್ರಿಕಾಗೋಷ್ಠಿ ನಡೆಸಿದ ನಾನು ಹುಬ್ಬಳ್ಳಿಯಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ಹೇಳಿದ್ದಾರೆ. ಸಮೀಕ್ಷೆಗಳೆಲ್ಲವೂ ನನ್ನ ಪರವೇ ಇದೆ. 30 ವರ್ಷದಿಂದ ಬಿಜೆಪಿಗೋಸ್ಕರ ದುಡಿದಿದ್ದೇನೆ, ನನಗೆ ವರಿಷ್ಠರ ಮಾತಿನಿಂದ ನೋವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.












Click it and Unblock the Notifications