TV9 C-Voter Opinion Poll: ಬಿಜೆಪಿಗೆ ಮಾಡಾಳ್ ಫ್ಯಾಮಿಲಿ ಪೆಟ್ಟು?
ಬೆಂಗಳೂರು: ಇನ್ನು 15 ದಿನದಲ್ಲಿ ಕರ್ನಾಟಕ ವಿಧಾನಸಭೆಯ ಮತದಾನ ಮುಕ್ತಾಯವಾಗಲಿದೆ. ಏನೇ ಮ್ಯಾಜಿಕ್ ಮಾಡಿದ್ರು 2 ವಾರದ ಒಳಗೆ ಮ್ಯಾಜಿಕ್ ಮುಗಿಸಬೇಕು. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಚುನಾವಣಾ ಅಖಾಡದಲ್ಲಿ ಭರ್ಜರಿ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಎರಡೂ ಪಕ್ಷದಲ್ಲಿ ಬಂಡಾಯದ ಭಯ ಮೂಡುವಂತೆ ಮಾಡಿವೆ.
ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ಪ್ರಕಾರ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ 2018ರ ಚುನಾವಣೆಗಿಂತ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದಿದೆ. ಕಾಂಗ್ರೆಸ್ 18ರಿಂದ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದರೆ, ಬಿಜೆಪಿ 13ರಿಂದ 17 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಕಮಲ ಪಡೆಗೆ ಮಾಡಾಳ್ ಮತ್ತು ಗೂಳಿಹಟ್ಟಿ ಶೇಖರ್ ಮಧ್ಯ ಕರ್ನಾಟಕದಲ್ಲಿ ಒಂದಷ್ಟು ಹಿನ್ನಡೆ ತರುವ ಭೀತಿ ಎದುರಾಗಿದೆ. ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅಖಾಡ ಪ್ರವೇಶ ಮಾಡಿದ್ದಾರೆ.

ಚನ್ನಗಿರಿ ಕ್ಷೇತ್ರ ಯಾರ ಪಾಲಿಗೆ?
ಜೆ.ಎಚ್. ಪಟೇಲ್ ಅವರ ಕಾಲದಿಂದಲೂ ಚನ್ನಗಿರಿ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಜನತಾ ಪಕ್ಷದಿಂದ ಸ್ಪರ್ಧಿಸಿ ಇದೇ ಕ್ಷೇತ್ರದಲ್ಲಿ ಸತತ ಮೂರು ಬಾರಿ ಹಾಗೂ ಜನತಾ ದಳದಿಂದ ಸ್ಪರ್ಧಿಸಿ 1 ಬಾರಿ ಜೆ.ಎಚ್. ಪಟೇಲ್ ಗೆಲುವು ಸಾಧಿಸಿದ್ದರು. ಇಂತಹ ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ 2 ಬಾರಿ ಗೆದ್ದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ತಮ್ಮ ಪುತ್ರ ಮಾಡಾಳ್ ಮಲ್ಲಿಕಾರ್ಜುನರನ್ನ ಅಖಾಡಕ್ಕೆ ಇಳಿಸಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಬಲು ಜೋರಾಗಿದೆ.
ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗುತ್ತಾ?
ಚನ್ನಗಿರಿ ಕ್ಷೇತ್ರದ ಇತಿಹಾಸ ನೋಡುವುದಾದರೆ ಕಳೆದ 15 ವರ್ಷದಿಂದ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರವಾದ ಪೈಪೋಟಿ ಇದೆ. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಕೈತಪ್ಪಿಸಿ, ಆ ಟಿಕೆಟ್ ಅನ್ನ ಎಚ್.ಎಸ್. ಶಿವಕುಮಾರ್‌ಗೆ ನೀಡಲಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಹೊಸ ಮುಖಕ್ಕೆ ಮಣೆ ಹಾಕಿದ್ದು, ರೈತ ಮುಖಂಡ ಶಿವಗಂಗಾ ಬಸವರಾಜ್‌ಗೆ ಟಿಕೆಟ್ ನೀಡಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಯುದ್ಧದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಗೇಮ್ ಚೇಂಜರ್ ಆಗೋದು ಗ್ಯಾರಂಟಿ.
ಲಿಂಗಾಯತ ಮತಗಳೇ ನಿರ್ಣಾಯಕ
ಅಂದಹಾಗೆ ಚನ್ನಗಿರಿ ಕ್ಷೇತ್ರದ ಜಾತಿವಾರು ಮತಗಳನ್ನ ಲೆಕ್ಕ ಹಾಕಿ ಹೇಳುವುದಾದರೆ ಇಲ್ಲಿ ಲಿಂಗಾಯತ ಮತದಾರರದ್ದೇ ನಿರ್ಣಾಯಕ ಪಾತ್ರ. ಇದನ್ನ ಹೊರತುಪಡಿಸಿ ಮುಸ್ಲಿಂ ಮತದಾರರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವೋಟರ್ಸ್ ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಲೆಕ್ಕಾಚಾರದಲ್ಲಿ ಹೇಳುವುದಾದರೆ ಮಾಡಾಳ್ ವಿರೂಪಾಕ್ಷಪ್ಪ ಬಂಡಾಯ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಮಾಡಾಳ್ ಮಲ್ಲಿಕಾರ್ಜುನ ಅವರನ್ನ ಪಕ್ಷದಿಂದ ಉಚ್ಛಾಟಿಸಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆದರೆ ಇದೆಲ್ಲವನ್ನೂ ಇಟ್ಟುಕೊಂಡೇ ಮಾಡಾಳ್ ಫ್ಯಾಮಿಲಿ ಗೇಮ್ ಪ್ಲೇ ಮಾಡುತ್ತಿದೆ.
ಮಧ್ಯ ಕರ್ನಾಟಕಕ್ಕೆ ಪೈಪೋಟಿ!
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯು ರಾಜ್ಯದ ಮಧ್ಯ ಭಾಗವೆಂದು ಗುರುತಿಸಲ್ಪಟ್ಟಿದೆ. ಈ ಭಾಗದಲ್ಲಿ ಗೆಲುವಿಗಾಗಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾರಿ ಪೈಪೋಟಿ ಆರಂಭಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಕೂಡ ಮಧ್ಯ ಕರ್ನಾಟಕ ಭಾಗವನ್ನೇ ಟಾರ್ಗೆಟ್ ಮಾಡಿ, ಕೆಲವು ತಿಂಗಳ ಹಿಂದೆ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದರು. ಇಷ್ಟೆಲ್ಲದರ ನಡುವೆ ಚನ್ನಗಿರಿ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.
ಮತ ಗಳಿಕೆಯಲ್ಲೂ ಲಾಭ?
ಮತ್ತೊಂದು ಕಡೆ ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ವರದಿಯಂತೆ, ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮತ ಹಂಚಿಕೆ ಪ್ರಮಾಣ ಶೇ 36ರಿಂದ 40.5ಕ್ಕೆ ಹೆಚ್ಚಳವಾಗಲಿದೆ. ಬಿಜೆಪಿ ಮತ ಹಂಚಿಕೆ ಪ್ರಮಾಣ ಶೇ 43 ಇದ್ದುದು ಶೇ 36.6ಕ್ಕೆ ಇಳಿಕೆಯಾಗಿದೆ. ಜೆಡಿಎಸ್ ಮತ ಹಂಚಿಕೆ ಪ್ರಮಾಣ ಶೇ 14 ಇದ್ದುದು ಶೇ 14.5 ಆಗಲಿದೆ. ಇತರರ ಮತ ಹಂಚಿಕೆ ಪ್ರಮಾಣ ಶೇಕಡಾ 7 ಇದ್ದಿದ್ದು, ಶೇ.8.4ಕ್ಕೆ ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ. ಹಾಗೇ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 18 ರಿಂದ 22 ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಿಜೆಪಿ 13ರಿಂದ 17, ಜೆಡಿಎಸ್ ಹಾಗೂ ಇತರರು ತಲಾ 1 ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಬಿಜೆಪಿಗೆ ಮುಳುವಾಗುತ್ತಾ ಬಂಡಾಯ?
ಕಮಲ ಪಾಳಯಕ್ಕೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಂಡಾಯದ ಕಾರಣಕ್ಕೆ ಸಾಕಷ್ಟು ಅಡ್ಡಿ ಉಂಟುಮಾಡಿದೆ. ಅದರಲ್ಲೂ ಮಧ್ಯ ಕರ್ನಾಟಕದ ಕ್ಷೇತ್ರದಲ್ಲೂ ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗದೆ ಆಕ್ರೋಶ ಹೊರಹಾಕಿದ್ದಾರೆ. ಇದು ಕೂಡ ಚುನಾವಣೆಯಲ್ಲಿ ಎಫೆಕ್ಟ್ ಕೊಡುತ್ತಾ ಎಂಬ ಅನುಮಾನ ಚುನಾವಣಾ ಸಮೀಕ್ಷೆಗಳಿಂದ ಮೂಡುತ್ತಿದೆ. ಹಾಗೇ ಈ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಕೂಡ ತಂತ್ರ ಹೆಣೆಯುತ್ತಿದೆ. ಅದರ ಜೊತೆಗೆ ಮಧ್ಯ ಕರ್ನಾಟಕ ಭಾಗದಲ್ಲಿ ಲಿಂಗಾಯತ ಅಸ್ತ್ರ ಪ್ರಬಲವಾಗಿ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ.
ಕಳೆದ ಬಾರಿಯ ಕ್ಷೇತ್ರಗಳು ಮಿಸ್?
ಒಂದು ಕಡೆ ಕಾಂಗ್ರೆಸ್ ಮಧ್ಯ ಕರ್ನಾಟಕದಲ್ಲಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದ್ದರೆ, ಇನ್ನೊಂದು ಕಡೆ ಬಿಜೆಪಿ ಈ ಬಾರಿ ಕಳೆದ ಬಾರಿ ಗೆದ್ದಿದ್ದ ಕೆಲವು ಕ್ಷೇತ್ರಗಳನ್ನ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ ಕಾಂಗ್ರೆಸ್‌ಗೆ 2023ರ ಚುನಾವಣೆಯಲ್ಲಿ ಮಧ್ಯ ಕರ್ನಾಟಕ ಭಾಗದಲ್ಲಿ ಬಂಪರ್ ಸಿಗುವ ನಿರೀಕ್ಷೆಯನ್ನ ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ವ್ಯಕ್ತಪಡಿಸಿದೆ.
ಒಟ್ನಲ್ಲಿ ಎರಡು ಪಕ್ಷಗಳ ನಡುವೆ ನೇರ ಪೈಪೋಟಿಗೆ ವೇದಿಕೆ ಒದಗಿಸುತ್ತಿದ್ದ ಚನ್ನಗಿರಿ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಜೊತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೂಡ ಚುನಾವಣಾ ಪಗಡೆ ಆಟದಲ್ಲಿ ಸೇರಿದ್ದಾರೆ. ಹಾಗಾದ್ರೆ ಗೆಲುವು ಯಾರಿಗೆ, ಸೋಲು ಯಾರಿಗೆ ಎಂಬುದನ್ನ ಮತದಾರ ಪ್ರಭು ನಿರ್ಧಾರ ಮಾಡಲಿದ್ದಾನೆ. ಮೇ 10ರಂದು ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications