ಬಿಜೆಪಿ ಪ್ರಣಾಳಿಕೆ ಬೋಗಸ್ ಎಂದ ಸಿದ್ದರಾಮಯ್ಯ: ಮೊದಲು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ಎಂದು ಸವಾಲು
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭರ್ಜರಿ ಕೊಡುಗೆಗಳನ್ನು ನೀಡಿದೆ. ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರು ಬೋಗಸ್ ಭರವಸೆಗಳನ್ನು ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ರಾಜ್ಯದ ಜನತೆಗೆ 600 ಭರವಸೆಗಳನ್ನು ನೀಡಿದ್ದರು ಆದರೆ ಈವರೆಗೆ ಅವರು ಕೇವಲ 55 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ ಎಂದು ಹೇಳಿದರು. ಮಂಗಳವಾರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇವೆ, ನಮ್ಮ ಪ್ರಣಾಳಿಕೆ ಅನುಷ್ಠಾನ ಮಾಡುತ್ತೇವೆ. ಈ ಮೊದಲು ನಾವು 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, 5 ಕೆಜಿ ಸಿರಿಧಾನ್ಯ, ಯುಗಾದಿ, ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬಕ್ಕೆ ತಲಾ ಒಂದೊಂದು ಉಚಿತ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಅವರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಸವಾಲಿ ಹಾಕಿದ್ದಾರೆ.
ಉಚಿತ ಸಿಲಿಂಡರ್, ಸಿರಿಧಾನ್ಯ, 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ ನೀಡುವ ಯೋಫಜನೆಗಳಿಗೆ ಸಂಪನ್ಮೂಲಗಳ ಕ್ರೂಢೀಕರಣ ಹೇಗೆ ಮಾಡುತ್ತೀರ ಎನ್ನುವುದನ್ನು ಬಿಜೆಪಿಯವರು ತಿಳಿಸಲಿ. ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಲೆಕ್ಕಾಚಾರವಿಲ್ಲದ್ದು ಎನ್ನುತ್ತಿದ್ದರು, ಈಗ ಬಿಜೆಪಿ ಉಚಿತ ಘೋಷಣೆ ಮಾಡಲು ಯಾವ ಲೆಕ್ಕಾಚಾರ ಹೊಂದಿದ್ದಾರೆ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಮಂಗಳವಾರ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಕಾಂಗ್ರೆಸ್ ಈಗಾಗಲೇ 6 ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್, ಗೃಹಿಣಿಗೆ ಪ್ರತಿ ತಿಂಗಳು 2000 ಹಣ, ಪದವೀಧರ ನಿರುದ್ಯೋಗಿಗಳಿಗೆ 3000 ಹಣ, ಮಹಿಳೆಯರಿಗೆ ಉಚಿತ ಪ್ರಯಾಣ, ಅಂಗಣವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳದ ಭರವಸೆ ನೀಡಿದೆ.
ಹಲವು ಉಚಿತಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮತ್ತಷ್ಟು ಭರಪೂರ ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಜೆಡಿಎಸ್ ಕೂಡ ವರ್ಷಕ್ಕೆ 5 ಉಚಿತ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಯಾವೆಲ್ಲಾ ಕೊಡುಗೆಗಳನ್ನು ನೀಡತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications