ಚುನಾವಣೆ ಫಲಿತಾಂಶ; ಸೋಲು ಕಂಡ ಹಾಲಿ, ಮಾಜಿ ಸ್ಪೀಕರ್‌ಗಳು
ಬೆಂಗಳೂರು, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿದೆ. ಫಲಿತಾಂಶ ಹಲವು ಅಚ್ಚರಿಗಳಿಗೂ ಸಹ ಕಾರಣವಾಗಿದೆ. ಗೆಲ್ಲುತ್ತಾರೆ ಎಂದು ಅಂದಾಜಿಸಿದ್ದ ನಾಯಕರೆಲ್ಲ ಸೋತು ಜನರ ತೀರ್ಪಿಗೆ ತಲೆ ಬಾಗಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರು ಹಾಲಿ ಸ್ಪೀಕರ್ ಮತ್ತು ಮೂವರು ಮಾಜಿ ಸ್ಫೀಕರ್‌ಗಳು ಸೋಲು ಕಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೋಲು ಕಂಡಿದ್ದಾರೆ. ಆದ್ದರಿಂದ ವಿಧಾನಸಭೆ ಮುನ್ನಡೆಸುವವರು ಯಾರು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಈ ಬಾರಿಯ ಚುನಾವಣೆ ಕಣದಲ್ಲಿದಲ್ಲಿ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್‌ಗಳಾದ ರಮೇಶ್ ಕುಮಾರ್, ಕೆ. ಜಿ. ಬೋಪಯ್ಯ, ಜಗದೇಶ್ ಶೆಟ್ಟರ್ ಕಣದಲ್ಲಿದ್ದರು. ಆದರೆ ಎಲ್ಲೂ ಸೋಲು ಕಂಡಿದ್ದಾರೆ.
ಸ್ಪೀಕರ್‌ಗಳ ಸೋಲು; ವಿಧಾನಸಭೆ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. 68175 ಮತಗಳನ್ನು ಪಡೆದು ಅವರು ಸೋಲು ಕಂಡಿದ್ದು, ಕಾಂಗ್ರೆಸ್‌ನ ಭೀಮಣ್ಣ ಟಿ. ನಾಯ್ಕ್ 76887 ಮತಗಳನ್ನು ಪಡೆದು ಕಾಗೇರಿ ಸೋಲಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಣದಲ್ಲಿದ್ದರು. 85020 ಮತಗಳನ್ನು ಪಡೆದ ಅವರು ಜೆಡಿಎಸ್‌ನ ಜಿ. ಕೆ. ವೆಂಕಟಶಿವ ರೆಡ್ಡಿ (95463 ಮತಗಳು) ಸೋಲು ಕಂಡಿದ್ದಾರೆ. 2018ರ ಚುನಾವಣೆಯಲ್ಲಿ ಗೆದ್ದ ಬಳಿಕ ರಮೇಶ್ ಕುಮಾರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಆಗಿ ಕೆಲಸ ಮಾಡಿದ್ದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಗದೀಶ್ ಶೆಟ್ಟರ್ 60775 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಬಿಜೆಪಿಯಲ್ಲಿದ್ದ ಅವರು ಟಿಕೆಟ್ ಕೈತಪ್ಪಿದ ಬಳಿಕ ಕಾಂಗ್ರೆಸ್ ಸೇರಿ ಚುನಾವಣಾ ಕಣಕ್ಕಿಳಿದಿದ್ದರು. ಬಿಜೆಪಿಯ ಮಹೇಶ್ ಟೆಂಗಿನಕಾಯಿ 95064 ಮತಗಳನ್ನು ಪಡೆದು ಶೆಟ್ಟರ್ ಸೋಲಿಸಿದ್ದಾರೆ. ಜಗದೀಶ್ ಶೆಟ್ಟರ್ 2008ರಲ್ಲಿ ಬಿಜೆಪಿ ಸರ್ಕಾರ ಬಂದಾಗ ವಿಧಾನಸಭೆ ಸ್ಪೀಕರ್ ಆಗಿದ್ದರು.
ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ 79500 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಎ. ಎಸ್. ಪೊನ್ನಣ್ಣ 83791 ಮತಗಳನ್ನು ಪಡೆದು ಕೆ. ಜಿ. ಬೋಪಯ್ಯ ಸೋಲಿಸಿದ್ದಾರೆ.












Click it and Unblock the Notifications