ಬಂಡಾಯದಲ್ಲಿ ಬೇಯುತ್ತಿರುವ ಬಿಜೆಪಿ: ಜಠಿಲವಾಗುತ್ತಲೇ ಇದೆ ಟಿಕೆಟ್ ಹಂಚಿಕೆ ಪ್ರಕ್ರಿಯೆ- ಎಲ್ಲೆಲ್ಲಿ ಅಸಮಾಧಾನ ಸ್ಪೋಟ? ತಿಳಿಯಿರಿ
ಬೆಂಗಳೂರು, ಏಪ್ರಿಲ್ 06: ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Election 2023 ) ಮೇ ತಿಂಗಳಲ್ಲಿ ನಡೆಯಲಿದೆ. ಮೇ 10 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೂರು ದಿನಗಳ ಬಳಿಕ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಜೆಡಿಎಸ್ ( JDS ) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ( Congress ) ಎರಡು ಪಟ್ಟಿಗಳನ್ನು ಬಿಡುಗಡೆ ಮಾಡುವ ಮೂಲಕ 166 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ, ಆಡಳಿತಾರೂಢ ಬಿಜೆಪಿ ( BJP ) ಇನ್ನೂ ಪಟ್ಟಿಯನ್ನು ಬಿಡುಗಡೆ ಮಾಡದಿರುವುದರ ಬಗ್ಗೆ ಚರ್ಚೆ ಎದ್ದಿದೆ.
ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ನಾಯಕತ್ವಕ್ಕೆ ಕಗ್ಗಂಟಾಗಿದೆ ಎಂದು ಹೇಳಲಾಗುತ್ತಿದೆ. ಇದು ಸವಾಲಾಗಿ ಪರಿಣಮಿಸುತ್ತಿರುವುದರಿಂದ ಬಿಜೆಪಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.

ಈ 40 ಸ್ಥಾನಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯು ಏಪ್ರಿಲ್ 20 ರ ವರೆಗೆ ಮುಂದುವರೆಯುವ ಸಾಧ್ಯತೆಯೂ ಇದೆ. ಇದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒಳಗೊಂಡ 22 ಸದಸ್ಯರ ಉನ್ನತ ಮಟ್ಟದ ಸಮಿತಿಯು ಬುಧವಾರ ತನ್ನ ಎರಡು ದಿನಗಳ ಸಭೆಯನ್ನು ಮುಕ್ತಾಯಗೊಳಿಸಿದ್ದು, 124 ಕ್ಷೇತ್ರಗಳಿಗೆ ತಲಾ 2-3 ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ಗುಬ್ಬಿ, ಬೈಲಹೊಂಗಲ, ಅಥಣಿ, ಕುಂದಗೋಳದಂತಹ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೆ ಆಯ್ಕೆಯಾಗದವರಿಂದ ಬಂಡಾಯದ ಭೀತಿ ಎದುರಾಗಿದೆ. ಮೂಲಗಳ ಪ್ರಕಾರ, ಈ ವಾರಾಂತ್ಯಕ್ಕೆ ಬಿಜೆಪಿಯ ಮೊದಲ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

'ಅಥಣಿಯಂತಹ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಹಾಲಿ ಶಾಸಕರು ಟಿಕೆಟ್ ಪಡೆಯುವ ಸಾಧ್ಯತೆಯಿದೆ. ಅಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರು ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಲಕ್ಷ್ಮಣ್ ಸವದಿ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ವಿಳಂಬವಾಗಬಹುದು' ಎಂದು ಮೂಲಗಳು ತಿಳಿಸಿವೆ. ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಪರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಪ್ರಮುಂಡರಾದ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ನಡುವೆ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡಿವೆ.
ಕೇಂದ್ರ ನಾಯಕತ್ವದ ನಿರ್ದೇಶನಕ್ಕೆ ಅನುಗುಣವಾಗಿ, ರಾಜ್ಯ ಬಿಜೆಪಿ ಘಟಕವು ತನ್ನದೇ ಆದ ಶಾಸಕರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಕನಿಷ್ಠ ಇಬ್ಬರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಬೊಮ್ಮಾಯಿ ಕ್ಷೇತ್ರವಾದ ಶಿಗ್ಗಾವಿಯಲ್ಲೂ ಇಬ್ಬರ ಹೆಸರು ಶಿಫಾರಸು ಮಾಡಲಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷದ ಹಿಡಿತದಲ್ಲಿರುವ ಭಾಗಗಳಲ್ಲಿ ಎರಡು ಹೆಸರುಗಳನ್ನು ಸೂಚಿಸುವ ಹಿಂದೆ ಮಹತ್ವದ ಕಾರಣವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈಗಿರುವ ಹಾಲಿ ಶಾಸಕರು ಹೆಚ್ಚಿನ ಮಟ್ಟದ ಅಧಿಕಾರ ವಿರೋಧಿ ಅಲೆಯನ್ನು ಎದುರಿಸುತ್ತಿದ್ದರೆ, ಅಂತವರಿಗೆ ಟಿಕೆಟ್ ಕೈತಪ್ಪಬಹುದು ಎಂದು ಹೇಳಲಾಗುತ್ತಿದೆ. ಅಥವಾ, ಹಾಲಿ ಶಾಸಕರು ಕ್ಷೇತ್ರವನ್ನು ಬದಲಾಯಿಸಲು ನಿರ್ಧರಿಸಿದರೆ, ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷದಲ್ಲಿ ಪರ್ಯಾಯ ಹೆಸರು ಲಭ್ಯವಿರಬೇಕು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಹಾಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಎಸ್ ಎ ರವೀಂದ್ರನಾಥ್ ಅವರು ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಪಕ್ಷವು ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಶಾಸಕರಾದ ನೆಹರು ಓಲೇಕಾರ, ಮಾಡಾಳ್ ವಿರೂಪಾಕ್ಷಪ್ಪ ಮತ್ತು ಎಂಪಿ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿರುವ ಹಾವೇರಿ, ಚನ್ನಗಿರಿ ಮತ್ತು ಮೂಡಿಗೆರೆ ಕ್ಷೇತ್ರಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.
ಈ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯ ಹೊಸ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಕ್ಷೇತ್ರಗಳ ಟಿಕೆಟ್ ಘೋಷಣೆ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.











Click it and Unblock the Notifications