Pratap Simha: ಮತ್ತೊಮ್ಮೆ ವರುಣಾದಲ್ಲಿ ಸಿದ್ದು ಪ್ರಚಾರ: ಆ ಭಯ ಇರಬೇಕು ಸಿದ್ದರಾಮಯ್ಯನವರೇ! ಎಂದು ಟಾಂಗ್ ಕೊಟ್ಟ ಪ್ರತಾಪ್ ಸಿಂಹ
ಮೈಸೂರು,ಏಪ್ರಿಲ್22: ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಭರ್ಜರಿ ಸಿದ್ದತೆ ಹಾಗೂ ರೋಡ್ ಶೋಗಳನ್ನ ನಡೆಸಿದ್ದು, ಜಿದ್ದಾಜಿದ್ದಿನ ಕ್ಷೇತ್ರವಾದ ವರುಣಾ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನ ತವರು ಕ್ಷೇತ್ರದಲ್ಲೇ ಸೋಲಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿದ್ದು, ಲಿಂಗಾಯತ ಸಮುದಾಯದ ಹಿರಿಯ ನಾಯಕ ವಿ ಸೋಮಣ್ಣ ಅವರನ್ನ ಕಣಕ್ಕಿಳಿಸಿದ್ದು, ವರುಣಾ ವಿಧಾನಸಭಾ ಕ್ಷೇತ್ರ ರಣಕಣವಾಗಿ ಬದಲಾಗಿದೆ.

ವರುಣಾದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಈಗ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿಗಳ ಪ್ರಚಾರಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗು ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೆ! pic.twitter.com/BnIqPhy1eb
— Pratap Simha (@mepratap) April 22, 2023
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ವರುಣಾ ಕ್ಷೇತ್ರದಲ್ಲೇ ಚುನಾವಣೆ ನಿಲ್ಲುತ್ತೇನೆ, ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಹೋಗಿದ್ದರು. ಆದರೆ, ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ವರುಣಕ್ಕೆ ಓಡಿ ಬಂದರು, ಇವತ್ತು ಮತ್ತೆ ಬಂದಿದ್ದಾರೆ, ಮುಂದಿನ ವಾರ ಇಲ್ಲೇ ಇರುತ್ತಾರಂತೆ. ಸಿದ್ದರಾಮಯ್ಯನವರೇ ಆ ಭಯ ಇರಬೇಕು ಎಂದು ಟ್ವೀಟ್ ಮೂಕಲ ಸಿದ್ದರಾಮಯ್ಯ ವಿರುದ್ದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಇನ್ನೂ ಈ ಕುರಿತು ಶನಿವಾರ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದ ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರಿಗೆ ಭಯ ಕಾಡ್ತಿದೆ.. ಆ ಭಯ ಇರಬೇಕು ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ.
ವರುಣಾ ಚುನಾವಣಾ ಪ್ರಚಾರದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ವರುಣಾ ಕ್ಷೇತ್ರದಲ್ಲಿ ನಾಮಪತ್ರ ಮಾತ್ರ ಸಲ್ಲಿಸಲು ಮಾತ್ರ ಬರುತ್ತೇನೆ. ಒಂದು ದಿನವೂ ಪ್ರಚಾರ ಮಾಡುವುದಿಲ್ಲ. ನನ್ನ ಮಗ ಯತೀಂದ್ರ ಎಲ್ಲ ನೋಡಿಕೊಳ್ಳುತ್ತಾರೆ. ಯಾರೇ ಎದುರಾಳಿಯಾದರು ವರುಣಾದಲ್ಲಿ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ವರುಣಾದಿಂದ ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಿದ್ದು, ಇದೀಗ ಸಿದ್ದರಾಮಯ್ಯನವರು ವರುಣಾದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಈಗ ಇದೇ ವಿಚಾರಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರ ಪ್ರಚಾರದ ಕುರಿತು ವ್ಯಂಗ್ಯವಾಡಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಕೆ ದಿನ ಬೃಹತ್ ಸಮಾವೇಶ ನಡೆಸಿದ್ದ ಸಿದ್ದರಾಮಯ್ಯ ಅವರು ಇದೆ ನನ್ನ ಕೊನೆಯ ಚುನಾವಣೆ. ನನ್ನ ತವರು ಕ್ಷೇತ್ರದಿಂದ ನಾನು ಕೊನೆಯ ಬಾರಿಗೆ ಸ್ಪರ್ಧೆ ನಡೆಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಜೊತೆಗೆ ಅವರ ಮೊಮ್ಮಗ ಧವನ್ ರಾಕೇಶ್ ಕಾಣಿಸಿಕೊಂಡಿದ್ದು, ಧವನ್ ರಾಕೇಶ್ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.
ಇನ್ನೂ ನಾಮಪತ್ರ ಸಲ್ಲಿಕೆಯ ಬಳಿಕ ಶನಿವಾರ ವರುಣಾಗೆ ಆಗಮಿಸಿರುವ ಸಿದ್ದರಾಮಯ್ಯ ಇಡೀ ದಿನ ಒಟ್ಟು 16 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರವನ್ನ ನಡೆಸಲಿದ್ದು, ಮುಂದಿನ ವಾರ ಕೂಡ ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಯತೀಂದ್ರ ಕ್ಷೇತ್ರ ಬಿಟ್ಟುಕೊಟ್ಟಿದ್ದು, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸುಲಭವಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಜಾತಿ ಲೆಕ್ಕಾಚಾರವನ್ನ ಹಾಕಿಕೊಂಡಿದ್ದು, ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ವಿ ಸೋಮಣ್ಣ ಕಣಕ್ಕಿಳಿಸಿದೆ. ಅಲ್ಲದೇ ವರುಣಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸೋಮಣ್ನ ಪರವಾಗಿ ಹಲವು ಬಿಜೆಪಿ ಕಲಿಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ.












Click it and Unblock the Notifications