ಚುನಾವಣಾ ಹೊತ್ತಲಿ ಹಲವು ಶಾಸಕರಿಂದ ನೀತಿ ಸಂಹಿತೆ ಉಲ್ಲಂಘನೆ; ಮತ್ತೊಬ್ಬ ಶಾಸಕರ ವಿರುದ್ದ ಕೇಳಿ ಬಂತು ಆರೋಪ
ಬೆಂಗಳೂರು,ಏಪ್ರಿಲ್1: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. 2023 ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ.
ಇನ್ನು, ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ಪ್ರಕಟಿಸಿದ್ದು, ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣೆಗೆ ರಾಜಕೀಯ ಕಾರ್ಯತಂತ್ರ ಜೋರಾಗಿದೆ.

ಇನ್ನೂ ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಂದರೆ ನಾಯಕರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ಸಂಹಿತೆಗೆ ಬದ್ಧರಾಗಿರಬೇಕು. ಆದರೆ, ಚುನಾವಣೆಗೆ ಅಬ್ಬರ ಪ್ರಚಾರದ ವೇಳೆ ರಾಜಕಾರಣಿಗಳು ಪದೇ ಪದೇ ನೀತಿ ಸಂಹಿತೆಯನ್ನ ಉಲ್ಲಂಘನೆ ಮಾಡುತ್ತಿದ್ದು, ಹಲವು ರಾಜಕಾರಣಿಗಳ ವಿರುದ್ದ ದೂರು ದಾಖಲಾಗಿದೆ.
ಇದೀಗ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇತ್ತೀಚೆಗೆ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಅದರ ಉದ್ಘಾಟನೆಯನ್ನು ನೀತಿ ಸಂಹಿತೆ ಜಾರಿಯಾದಾಗ ನೆರವೇರಿಸಲಾಗಿದೆ. ಶಾಸಕ ಕೃಷ್ಣಪ್ಪನವರು ತರಾತುರಿಯಲ್ಲಿ ಗೌಪ್ಯವಾಗಿ ಬಸ್ ನಿಲ್ದಾಣ ಉದ್ಘಾಟಿಸಿದ್ದಾರೆ ಎಂದು ಬಾಬು ರೆಡ್ಡಿ ಎಂಬುವರು ಚುನಾವಣಾ ಅಧಿಕಾರಿಯೂ ಆದ ಬೆಂಗಳೂರು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಇದೀಗಾ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ಎಂ.ಪಿ.ಕುಮಾರಸ್ವಾಮಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕುರಿತು ದೂರು ದಾಖಲು ಮಾಡಲಾಗಿದೆ. ತಮ್ಮ ನಿವಾಸದಲ್ಲಿ ಕಾರ್ಯಕ್ರಮ ಆಯೋಜಿಸಿ ಚೆಕ್ ವಿತರಣೆ ಹಿನ್ನೆಲೆಯಲ್ಲಿ ದೂರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂಡಿಗೆರೆ ತಾಲೂಕು ಚುನಾವಣಾ ಅಧಿಕಾರಿ ಪಿ.ರಾಜೇಶ್ ಅವರಿಂದ ದೂರು ದಾಖಲಿಸಿಕೊಳ್ಳಲಾಗಿದೆ.
ಇನ್ನೂ ನೀತಿ ಸಂಹಿತೆ ಜಾರಿಯಾದ ದಿನದಿಂದಲೂ ಹಲವು ನಾಯಕರು ನೀತಿ ಸಂಹಿತೆಯನ್ನ ಉಲ್ಲಂಘನೆ ಮಾಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ವಿರುದ್ದ ದೂರು ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಎಂದರೇನು?
ಚುನಾವಣೆ ಬಂದಾಗಲೆಲ್ಲಾ ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು ಇದ್ದೆ ಇರುತ್ತದೆ. ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳನ್ನು ನೀತಿ ಸಂಹಿತೆ ಎಂದು ಹೇಳಲಾಗುತ್ತದೆ. ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸೂಚಿಸಿದ ನಿಯಮಗಳ ಪಟ್ಟಿಯಾಗಿದೆ. ಈ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಲ್ಲಿ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಆಯೋಗದಿಂದ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ.












Click it and Unblock the Notifications