Next CM of Karnataka: ಸಿದ್ದರಾಮಯ್ಯ ಮುಂದಿನ ಸಿಎಂ ಎಂದ ಮತದಾರರ, ಎಬಿಪಿ ಸಮೀಕ್ಷೆ
ಬೆಂಗಳೂರು, ಮಾರ್ಚ್. 30: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಪಕ್ಷಗಳು ಸಜ್ಜಾಗುತ್ತಿದ್ದು, ಚುನಾವಣಾ ಆಯೋಗ ಈಗಾಗಲೇ ಚುನಾವಾಣೆಗೆ ದಿನಾಂಕ ಘೋಷಿಸಿದೆ. ಇದರ ಬೆನ್ನಲ್ಲೆ ಹಲವು ಟಿವಿ ಚಾನೆಲ್, ಪತ್ರಿಕೆಗಳು ಮತ್ತು ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮಯದಾರರು ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು ಎಂದು ಬಯಸಿದ್ದಾರೆ.
ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯು ವಿವಿಧ ಜಾತಿ , ಸಮುದಾಯಗಳ ಜನರ ಮನಸ್ಸಿನಲ್ಲಿ ಇಣುಕಿ ನೋಡುವ ಪ್ರಯತ್ನ ಮಾಡಿದೆ. ಈ ಮೂಲಕ ಮುಖ್ಯಮಂತ್ರಿ ಸ್ಥಾನದ ಉನ್ನತ ಆಯ್ಕೆಯನ್ನು ಇಟ್ಟಿದ್ದು, ಸಮೀಕ್ಷೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಸ್ಪಷ್ಟ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 39.1 ರಷ್ಟು ಜನರು ಸಿದ್ದರಾಮಯ್ಯ ಅವರನ್ನು ಸಿಎಂ ಆಗಬೇಕೆಂದು ಬಯಸಿದ್ದಾರೆ.

ಶೇಕಡಾ 39.1 ರಷ್ಟು ಜನರು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಆಗಬೇಕೆಂದು ಬಯಸಿದ್ದರೆ, ಶೇಕಡಾ 31.1 ರಷ್ಟು ಜನರು ಇನ್ನೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವವರನ್ನು ಆಯ್ಕೆ ಮಾಡಿದ್ದಾರೆ. 21.4 ರಷ್ಟು ಮಂದಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಹುದ್ದೆಗೆ ಅರ್ಹರು ಎಂದು ಪರಿಗಣಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಬಹುಮತವಿದೆ. ಆದರೆ, ಕಾಂಗ್ರೆಸ್‌ನಲ್ಲಿ ಪ್ರಬಲ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೇವಲ 3.2 ಪ್ರತಿಶತದಷ್ಟು ಜನರು ತಮ್ಮ ಆದ್ಯತೆಯ ಸಿಎಂ ಎಂದು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ದಂಡೇ ಇದೆ.

ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಗೆಲುವು ಎಂದು ಬಹುಪಾಲು ಮತದಾರರು ಭವಿಷ್ಯ ನುಡಿದಿದ್ದಾರೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 115 ರಿಂದ 127 ಸ್ಥಾನಗಳನ್ನು ಗೆಲ್ಲಲಿದೆ, ಭಾರತೀಯ ಜನತಾ ಪಕ್ಷ (ಬಿಜೆಪಿ) 68 ರಿಂದ 80 ಸ್ಥಾನಗಳನ್ನು ಮತ್ತು ಜನತಾ ದಳ (ಜಾತ್ಯತೀತ) 23 ರಿಂದ 35 ಸ್ಥಾನಗಳನ್ನು ಪಡೆಯಲಿದೆ ಎಂದು ಬಹಿರಂಗವಾಗಿದೆ.
ಬಿಜೆಪಿ ಸರ್ಕಾರದ ಕಾರ್ಯವೈಖರಿ ಕುರಿತು ಮಾತನಾಡಿದ ಶೇ.50.5ರಷ್ಟು ಮಂದಿ 'ಕಳಪೆ' ಎಂದು ಹೇಳಿದರೆ, ಶೇ.27.7ರಷ್ಟು ಮಂದಿ ಮಾತ್ರ 'ಒಳ್ಳೆಯದು' ಎಂದಿದ್ದಾರೆ. ಇದಲ್ಲದೆ, ಶೇಕಡಾ 57.1 ರಷ್ಟು ಪ್ರತಿಕ್ರಿಯಿಸಿದವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಭಾರೀ ಕೋಪಗೊಂಡಿದ್ದಾರೆ. ಹೀಗಾಗಿ ಅದನ್ನು ಬದಲಾಯಿಸಲು ಬಯಸಿದ್ದಾರೆ.
ಸುಮಾರು 46.9 ಪ್ರತಿಶತ ಪ್ರತಿಕ್ರಿಯಿಸಿದವರು ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯಿಂದ ಸಂತೋಷವಾಗಿಲ್ಲ. ಆದರೆ, ಕೇವಲ 26.8 ಪ್ರತಿಶತ ಜನರು ಅವರ ಆಡಳಿತ 'ಒಳ್ಳೆಯದು' ಎಂದು ಒಪ್ಪಿಕೊಂಡಿದ್ದಾರೆ. ಅಭಿಪ್ರಾಯ ಸಂಗ್ರಹದ ಪ್ರಕಾರ, ಶೇಕಡಾ 29.1 ರಷ್ಟು ಜನರು ನಿರುದ್ಯೋಗವನ್ನು ದೊಡ್ಡ ಸಮಸ್ಯೆ ಎಂದು ಭಾವಿಸಿದರೆ, ಶೇಕಡಾ 21.5 ರಷ್ಟು ಜನರು ವಿದ್ಯುತ್, ನೀರು ಮತ್ತು ರಸ್ತೆಗಳು ಪ್ರಮುಖ ಸಮಸ್ಯೆ ಎಂದು ಭಾವಿಸಿದ್ದಾರೆ.
ಶೇಕಡಾ 30.8 ಜನ "ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಹಿಜಾಬ್ ವಿವಾದದಂತಹ ಸಮಸ್ಯೆಗಳು" ಕರ್ನಾಟಕ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದ್ದಾರೆ. 24.6 ರಷ್ಟು ಜನರು "ಧಾರ್ಮಿಕ ಧ್ರುವೀಕರಣ" ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, 2024 ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತ್ತೊಂದು ಹಣಾಹಣಿಗೆ ವೇದಿಕೆಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ತನ್ನ ಕಠಿಣ ಸವಾಲನ್ನು ಎದುರಿಸಲಿದ್ದು, ಬಹುಮತ ಪಡೆಯುತ್ತೇವೆ ಎನ್ನುತ್ತಿದೆ. ಆದರೆ, ಇದು ಸುಲಭ ಸಾಧ್ಯವಲ್ಲ.












Click it and Unblock the Notifications