ಟಿಕೆಟ್ ಹಂಚಿಕೆಯ ಅಸಮಾಧಾನ: ಬಂಡಾಯದ ಬೆಂಕಿಗೆ ತಲೆಕೆಳಗಾಯಿತಾ ಬಿಜೆಪಿ ಲೆಕ್ಕಾಚಾರ ?
ಮೈಸೂರು, ಏಪ್ರಿಲ್ 15: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಇದುವರೆಗೆ ಆಗಿರುವ ಬೆಳವಣಿಗೆಗಿಂತ ಮುಂದೆ ಆಗುವ ಬೆಳವಣಿಗೆ ಮತ್ತು ಅದು ಬೀರುವ ಪರಿಣಾಮಗಳು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತಿದೆ. ಅದರಲ್ಲೂ ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ಬೆಂಕಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣದಿರುವುದರಿಂದ ಮುಂದೇನು ಎಂಬ ಚಿಂತೆ ನಿಷ್ಠಾವಂತ ಬಿಜೆಪಿಗರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಚುನಾವಣೆ ಸಂದರ್ಭ ಟಿಕೆಟ್ ಹಂಚಿಕೆ ವೇಳೆ ಎಲ್ಲ ಪಕ್ಷಗಳಲ್ಲೂ ಅಸಮಾಧಾನಗಳು ಸರ್ವೆ ಸಾಮಾನ್ಯವಾಗಿದ್ದು, ಅಸಮಾಧಾನಿತರು ಸ್ವಪಕ್ಷ ಬಿಟ್ಟು ಬೇರೆ ಪಕ್ಷದತ್ತ ಮುಖ ಮಾಡುವುದು ಅಥವಾ ಬಂಡಾಯವಾಗಿ ಕಣಕ್ಕಿಳಿಯುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈ ಬಾರಿ ಅದು ಮೂರು ಪಕ್ಷಗಳಲ್ಲಿ ಇದ್ದರೂ ಅತಿಹೆಚ್ಚು ಬಿಜೆಪಿಯಲ್ಲಿ ಕಂಡು ಬಂದಿದೆ. ಅಷ್ಟೇ ಅಲ್ಲದೆ ಬಂಡಾಯದ ಬೆಂಕಿ ಬಿಜೆಪಿಗೆ ಬಿಸಿ ಮುಟ್ಟಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ಆಪರೇಷನ್ ಕಮಲದ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಎಳೆದು ತಂದು ಪಕ್ಷಕ್ಕೆ ಸೇರಿಸಿಕೊಂಡಿದ್ದ ಬಿಜೆಪಿ ಇದೀಗ ಟಿಕೆಟ್ ಸಿಗದ ಅಸಮಾಧಾನಿತರು ಪಕ್ಷ ಬಿಟ್ಟು ಬೇರೆ ಪಕ್ಷದತ್ತ ಮುಖ ಮಾಡಿರುವುದರಿಂದ ಮುಂದೇನು ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ. ಘಟಾನುಘಟಿ ನಾಯಕರೇ ಬಿಜೆಪಿಗೆ ಗುಡ್ ಬೈ ಹೇಳುತ್ತಿರುವುದರಿಂದ ಮುಂದೆ ರಾಜ್ಯದಲ್ಲಿ ಬಿಜೆಪಿ ಕತೆ ಏನಾಗಬಹುದು ಎಂಬ ಚರ್ಚೆಗಳು ಶುರುವಾಗಿದೆ.
ಹಿರಿಯರಿಗೆ ಸಿಗದ ಗೌರವ
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿರುವುದು. ಉಳಿದಂತೆ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಮೆರೆಯುತ್ತಿದ್ದು ಅವು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹತ್ತಿರ ಬಿಟ್ಟುಕೊಂಡಿಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕರ್ನಾಟಕವೇ ಪ್ರವೇಶದ್ವಾರವಾಗಿದೆ.

ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಕರ್ನಾಟಕದಲ್ಲಿ ಬೆಳೆದು ಬಂದ ರೀತಿಯೂ ರೋಚಕವೇ. ಇವತ್ತು ಅಧಿಕಾರ ಹಿಡಿಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎನ್ನುವುದಾದರೆ ಅದರ ಹಿಂದೆ ರಾಜ್ಯದ ಹಿರಿಯ ನಾಯಕರ ಸಾಕಷ್ಟು ಶ್ರಮವಿರುವುದನ್ನು ತಳ್ಳಿ ಹಾಕುವಂತಿಲ್ಲ. ಚುನಾವಣೆ ಸಮಯದಲ್ಲಿ ರಾಜ್ಯದ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ.
ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯೋಗ ಮಾಡಲಾಗುತ್ತದೆ. ಗುಜರಾತ್ ಮಾದರಿಯನ್ನು ತರಲಾಗುತ್ತದೆ ಎಂಬಿತ್ಯಾದಿ ಮಾತುಗಳು ಹೊರಬಂದಿತ್ತು. ಆದರೆ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹಿರಿಯರು, ಗೆಲ್ಲುವ ಸಾಮರ್ಥ್ಯ ವಿರುವ ನಾಯಕರನ್ನೇ ಹೊರಗಿಡಲಾಗಿತ್ತು. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಯಾವ ರೀತಿಯ ಲೆಕ್ಕಾಚಾರವನ್ನು ಮಾಡಿತ್ತೋ ಗೊತ್ತಿಲ್ಲ. ಆದರೆ ಆಗಿದ್ದೇ ಬೇರೆ.
ಫಲಕೊಡದ ಹೈಕಮಾಂಡ್ ನಿರ್ಧಾರ
ಕಳೆದೊಂದು ವರ್ಷದಿಂದ ಕಾಂಗ್ರೆಸ್ ಆಡಳಿತರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ಮಾಡುತ್ತಾ ಬಂದಿದೆ. ಅದರಲ್ಲೂ 40 ಪರ್ಷೆಂಟ್ ಆರೋಪ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿತ್ತಲ್ಲದೆ, ಬಿಜೆಪಿ ನಾಯಕರು ಮುಜುಗರ ಮಾಡುವಂತೆ ಮಾಡಿತ್ತು. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಕೆಲಸವನ್ನು ರಾಜ್ಯದ ಮುಖ್ಯ ಮಂತ್ರಿಯಾಗಲೀ, ಹೈಕಮಾಂಡ್ ಮಾಡಲಿಲ್ಲ. ಬದಲಿಗೆ ತಳ್ಳಿ ಹಾಕುತ್ತಲೇ ಬರಲಾಯಿತು.
ಅದರ ಪರಿಣಾಮಗಳು ಜನ ಬಿಜೆಪಿ ನಾಯಕರನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಜತೆಗೆ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಗಳು ಅದರಲ್ಲೂ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಕಡೆಗಣಿಸಿರುವುದು, ಗೌರವಯುತವಾಗಿ ನಡೆಸಿಕೊಳ್ಳದೆ ಬದಿಗೆ ತಳ್ಳಿರುವುದು ಸ್ವತಃ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಇದರ ಫಲಾಫಲಗಳು ಹೇಗಿರಲಿವೆ ಎಂಬುದು ಮುಂದೆ ಗೊತ್ತಾಗಲಿದೆ.
ರಾಜ್ಯದಲ್ಲಿ ಪ್ರಯೋಗಗಳು ನಡೆಯಲ್ಲ
ಬಿಜೆಪಿಯಲ್ಲಿರುವ ಅಸಮಾಧಾನಿತರು ಕಾಂಗ್ರೆಸ್ ಹಾಗೂ ಜೆಡಿಎಸ್ ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ನಾಮಪತ್ರ ಸಲ್ಲಿಕೆ ಕೊನೆಯ ದಿನದವರೆಗೂ ಬೆಳವಣಿಗೆಗಳು ನಡೆಯಲಿದ್ದು, ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಿಂದಲೇ ಪಕ್ಷಕ್ಕೆ ಹೊಡೆತ ಬಿದ್ದರೂ ಅಚ್ಚರಿಪಡಬೇಕಾಗಿಲ್ಲ. ಕರ್ನಾಟಕದ ಬಿಜೆಪಿ ಮೇಲೆ ಏನೇ ಪ್ರಯೋಗ ಮಾಡಿದರೂ ನಾಯಕರು ಸಹಿಸಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿದ್ದ ಹೈಕಮಾಂಡ್‌ಗೆ ಈಗ ಬಿಸಿ ಮುಟ್ಟಿದೆ ಅದರ ಪರಿಣಾಮ ಏನಾಗಲಿದೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ.











Click it and Unblock the Notifications