Karnataka Election: 100% ಬಿಜೆಪಿಗೆ 108 ಸ್ಥಾನ ಖಚಿತ; ಬಿಎಸ್‌ವೈ ಭೇಟಿ ಬಳಿಕ ಮುರುಗೇಶ್ ನಿರಾಣಿ ಹೇಳಿಕೆ
ಬುಧವಾರ, ಮೇ 10ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಗಮನ ಶನಿವಾರ, ಮೇ 13ರಂದು ಪ್ರಕಟವಾಗಲಿರುವ ಫಲಿತಾಂಶದ ಮೇಲೆ ನೆಟ್ಟಿದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಜಯ ಗಳಿಸುವವರು ಯಾರು ಎಂಬ ಲೆಕ್ಕಾಚಾರ ಶುರುವಾಗಿದೆ.
ಮುಂದಿನ ಐದು ವರ್ಷಗಳ ಕಾಲ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲ ಒಂದು ಕಡೆಯಾದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಮಗೆ ಬಹುಮತ ಸಿಗಲಿದೆ ಎಂಬ ಅತೀವ ಆತ್ಮವಿಶ್ವಾಸದಲ್ಲಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ, "ಬೂತ್ ಮಟ್ಟದ ವರದಿ ಪ್ರಕಾರ, ಶೇ.100ರಷ್ಟು ಬಿಜೆಪಿ ಕನಿಷ್ಠ 108 ಸ್ಥಾನಗಳನ್ನು ಗೆಲ್ಲಲಿದೆ. ಕನಿಷ್ಠ 35 ಕ್ಷೇತ್ರಗಳಲ್ಲಿ 50:50 ಇದೆ," ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಮುರುಗೇಶ್ ನಿರಾಣಿ, "ಗರಿಷ್ಠ 120ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ನಮ್ಮ ನಾಯಕರು ಜೆಡಿಎಸ್ ಪಕ್ಷದ ಜತೆ ಚರ್ಚೆ ಮಾಡಿಲ್ಲ. ಬಹುಮತ ಬರುವ ವಿಶ್ವಾಸ ಇರುವುದರಿಂದ ಈ ಪ್ರಶ್ನೆಯೇ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಕೆಟ್ಟ ಹೆಸರು ಬಂದಿಲ್ಲ," ಎಂದು ಹೇಳಿದ್ದಾರೆ.
ಗೆಲ್ಲುವ ಪಕ್ಷೇತರ ಅಭ್ಯರ್ಥಿಗಳ ಮೇಲೆ ಬಿಜೆಪಿ ನಾಯಕರ ಕಣ್ಣು
ನಾಳೆ (ಶನಿವಾರ, ಮೇ 13) ಕರ್ನಾಟಕ ವಿಧಾನಸಭೆ ಫಲಿತಾಂಶ ಪ್ರಕಟವಾಗಲಿದ್ದು, ಗೆಲ್ಲುವ ಪಕ್ಷೇತರ ಅಭ್ಯರ್ಥಿಗಳ ಮೇಲೆ ಬಿಜೆಪಿ ನಾಯಕರ ಕಣ್ಣಿಟ್ಟಿದ್ದಾರೆ. ಆಡಳಿತರೂಢ ಬಿಜೆಪಿಯು ಈಗ ಗೆಲ್ಲಬಹುದಾದ ಸಂಭಾವ್ಯ ಪಕ್ಷೇತರ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿಕೊಂಡಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಕೆಲವರ ಜೊತೆ ನೇರ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಬಿಜೆಪಿಯ ಸ್ಥಳಿಯ ನಾಯಕರಿಗೂ ಸೂಚನೆ ನೀಡಲಾಗಿದೆ.

ರಾಜಾಹುಲಿ ಬಿಎಸ್‌ವೈ ನಿವಾಸದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಬಿಜೆಪಿ ಪಕ್ಷದ ಅಭ್ಯರ್ಥಿಗಳು ಪಕ್ಕಾ ಗೆಲ್ಲುವ ಕ್ಷೇತ್ರಗಳು ಮತ್ತು 50:50 ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳ ಬಗ್ಗೆ ಮಾಜಿ ಸೆಇಂ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಭಾರೀ ಚರ್ಚೆ ನಡೆಸಲಾಗಿದೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುವ ಪಕ್ಷೇತರರನ್ನು ಸಂಪರ್ಕ ಮಾಡುವ ಬಗ್ಗೆಯೂ ಚರ್ಚಿಸಲಾಗಿದೆ.
ಇದೇ ವೇಳೆ ಅಖಂಡ ಶ್ರೀನಿವಾಸಮೂರ್ತಿ, ಮಾಡಾಳು ಮಲ್ಲಿಕಾರ್ಜುನ, ಗೂಳಿಹಟ್ಟಿ ಶೇಖರ್ ಸೇರಿದಂತೆ ಸಂಭಾವ್ಯ ಗೆಲುವಿನ ಪಕ್ಷೇತರರನ್ನು ಸಂಪರ್ಕಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಬಸವರಾಜ ಬೊಮ್ಮಾಯಿಗೆ ಬಿಗ್ ಟಾಸ್ಕ್
ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ನಾಯಕರು ರಾಜಕೀಯ ಚಟುವಟಿಕೆ ಆರಂಭಿಸಿದ್ದು, ಮತ್ತೊಮ್ಮೆ ಸರ್ಕಾರ ರಚನೆಗೆ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಮತ್ತೆ ಸಿಎಂ ಹುದ್ದೆಯಲ್ಲಿ ಮುಂದುವರೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಿದು ಕಠಿಣ ಸಮಯವಾಗಿದೆ. ಸ್ವತಂತ್ರ ಅಥವಾ ಬೇರೆ ಪಕ್ಷಗಳ ಶಾಸಕರನ್ನು ಒಟ್ಟುಗೂಡಿಸಿಕೊಂಡು ಸರ್ಕಾರ ರಚನೆಗೆ ಬಸವರಾಜ ಬೊಮ್ಮಾಯಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications