ಕಾಂಗ್ರೆಸ್ ಪಟ್ಟಿ: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕೆ.ಗೋಪಾಲ ಪೂಜಾರಿ ಸ್ಪರ್ಧೆ
ಬೆಂಗಳೂರು, ಮಾರ್ಚ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿದ್ದು, ಬಹು ನಿರೀಕ್ಷಿತ ಕಾಂಗ್ರೆಸ್ಸಿನ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಕೊನೆಗೂ ಕೆಪಿಸಿಸಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯ ಗೆಲುವಿನ ಲೆಕ್ಕಾಚಾರ ಹಾಕಿರುವ ಬಹುತೇಕ ಈ ಹಿಂದೆ ಟಿಕೆಟ್ ನೀಡಿದ್ದ ಅಭ್ಯರ್ಥಿಗಳಿಗೆ ಈ ಬಾರಿಯೂ ಮಣೆ ಹಾಕಲಾಗಿದೆ.
ಸದ್ಯ ಬಿಜೆಪಿ ತೆಕ್ಕೆಯಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕೆ. ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಮೊದಲು ಕಾಂಗ್ರೆಸ್ ಕೈಯಲ್ಲೇ ಇದ್ದ ಬೈಂದೂರು ಅಧಿಕಾರ 1994ರಲ್ಲಿ ಬಿಜೆಪಿಯ ಪಾಲಾಗಿತ್ತು. 1998ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ ಕೆ. ಗೋಪಾಲ ಪೂಜಾರಿ ಎಜಿಪಿಯಿಂದ ಸ್ಪರ್ಧಿಸಿ ಜಯಗಳಿಸಿದರು. ಬೈದೂರು ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಅಧ್ಯಾಯ ಆರಂಭಿಸಿದ್ದ ಕೆ. ಗೋಪಾಲ ಪೂಜಾರಿ 1999 ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು.

ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ. ಗೋಪಾಲ ಪೂಜಾರಿಗೆ 2008ರಲ್ಲಿ ಬಿಜೆಪಿ ಸೋಲಿನ ರುಚಿ ತೋರಿಸಿ ಬಿಜೆಪಿ ಅಭ್ಯರ್ಥಿ ಕೆ. ಲಕ್ಷ್ಮೀನಾರಾಯಣ ವಿರುದ್ಧ ಕೆ. ಗೋಪಾಲ ಪೂಜಾರಿ ಸೋಲು ಕಂಡರು. ಮತ್ತೆ 2013ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದಲೇ ಸ್ಫರ್ಧಿಸಿದ್ದ ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಮತ್ತೆ ಸೋಲು ಕಂಡರು.
ಸೋಲಿನ ಬಳಿಕ ಕಂಗೆಡದ ಕೆ. ಗೋಪಾಲ ಪೂಜಾರಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾ 2023ರ ಚುನಾವಣೆಯ ಸಿದ್ಧತೆ ಆರಂಭಿಸಿದ್ದರು. ಸದ್ಯ ನಿರೀಕ್ಷಿಸಿದಂತೆ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಉಡುಪಿಯ ಎಲ್ಲಾ ಕ್ಷೇತ್ರಕ್ಕಿಂತ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಉತ್ತಮವಾಗಿದೆ. ಮಾಜಿ ಶಾಸಕ ಗೋಪಾಲ ಪೂಜಾರಿಯವರ ಬಗ್ಗೆ ಜನರಿಗೆ ಅನುಕಂಪವಿದ್ದು, ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಗೋಪಾಲ ಪೂಜಾರಿ ಗೆಲುವಿನ ಲೆಕ್ಕಾಚಾರ
ಇನ್ನು ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಹಾಲಿ ಶಾಸಕರನ್ನು ಬದಲಾವಣೆ ಮಾಡಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶಾಸಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅವರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಜೋರಾಗಿದ್ದು, ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕೊಡುವಂತೆ ಬಹುತೇಕ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸುಕುಮಾರ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಹಾಗೂ ಹೊಸ ಮುಖಕ್ಕೆ ಅವಕಾಶ ನೀಡಿದರೂ ಎರಡೂ ಅಂಶಗಳು ಕಾಂಗ್ರೆಸ್ ಗೆಲುವಿಗೆ ಸಹಾಯವಾಗಲಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಈ ಬಾರಿ ತಮ್ಮ ಕೈತಪ್ಪಿರುವ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications