ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ: ಪುತ್ರನಿಗೆ ಟಿಕೆಟ್ ಕೊಡಿ ಎಂದ ಸಚಿವರು
ಬೆಂಗಳೂರು, ಏಪ್ರಿಲ್ 09: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ ನಂತರ ಅವರ ಸ್ಪರ್ಧೆ ವಿಚಾರವಾಗಿ ಒಂದಲ್ಲ ಒಂದು ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಅವರ ವಿರುದ್ಧ ಯಾರೂ ನಿಲ್ಲುತ್ತಾರೆ ಎಂಬುದರ ಕುತೂಹಲ ಹೆಚ್ಚಾಗಿದೆ.
ಸಿದ್ದರಾಮಯ್ಯನವರು ವರುಣಾ ವಿಧಾನಸಭಾಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಅವರ ವಿರುದ್ಧ ಬಿಜೆಪಿಯಿಂದ ವಸತಿ ಸಚಿವ ವಿ.ಸೋಮಣ್ಣ ಅವರು ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಇದುವರೆಗೂ ಅಧಿಕೃತವಾಗಿ ಬಿಜೆಪಿಯು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸೋಮವಾರ ಏಪ್ರಿಲ್ 10ರಂದು ಬಿಡುಗಡೆಗೊಳಿಸುವುದಾಗಿ ಖದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಈ ಮಧ್ಯೆ ಭಾನುವಾರ ಬಿಜೆಪಿಯಲ್ಲಿ ಒಂದಷ್ಟು ದಿಢೀರ್ ಬೆಳವಣಿಗೆ ನಡೆದಿದ್ದು, ದೆಹಲಿಯಲ್ಲಿ ಮಾತನಾಡಿದ ವಿ.ಸೋಮಣ್ಣ ಅವರು ತಮ್ಮ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ವರುಣಾದಲ್ಲಿ ನನ್ನ ಸ್ಪರ್ಧೆ ಮಾತು ಕೇವಲ ವದಂತಿ ಎನ್ನುವ ಮೂಲಕ ಹಲವು ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ನನ್ನ ಸ್ಪರ್ಧೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ನನಗೆ ವರುಣಾ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿಲ್ಲ ಎಂದು ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮತ್ತೆ ನಾವು ಒಟ್ಟಿಗೆ ರಾಜಕೀಯಕ್ಕೆ ಬಂದವರು. ರಾಜ್ಯದ ಮುಖ್ಯಮಂತ್ರಿಗಳಾಗಿ ಅವರು ಹಲವು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾರು ನಿಲ್ಲುತ್ತಾರೆ ಬಿಡುತ್ತಾರೆ ಎಂಬದುಕ್ಕಿಂತ ಇತಿಹಾಸ ನೋಡಬೇಕಿದೆ. ಅಲ್ಲದೇ ಬಿಜೆಪಿ ಯಾರನ್ನು ನಿಲ್ಲಿಸುತ್ತೋ ಅವರು ಕಣಕ್ಕಿಳಿಯುತ್ತಾರೆ. ಅದು ಸಾಂಕೇತಿಕವಾಗಿ ನಡೆಯುತ್ತಿರುತ್ತದೆ. ನಾನು ವರುಣಾದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಪುತ್ರನಿಗೆ ಟಿಕೆಟ್ ನೀಡುವಂತೆ ಸೋಮಣ್ಣ ಮನವಿ
ಕೇಂದ್ರ ಹೈಕಮಾಂಡ್ ನಾಯಕರಲ್ಲಿ ಈ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿರುವುದಾಗಿ ಸೋಮಣ್ಣ ತಿಳಿಸಿದರು. ಈ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ ಅಂತಲೂ ಹೇಳಿದರು.
ಪಕ್ಷದ ಹಿರಿಯರಾದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗಿನ ಮುನಿಸಿಲ್ಲ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರು ಆಕಾಶವಾದರೆ ನಾನು ನಕ್ಷತ್ರ. ನಕ್ಷತ್ರ ಯಾವಾಗಲೊ ಒಮ್ಮೆ ಮಿಂಚಿ ಮರೆಯಾಗುತ್ತದೆ. ಅವರೊಂದಿಗೆ ಹೋಲಿಕೆ ಸಲ್ಲದು. ಯಡಿಯೂರಪ್ಪನವರನ್ನು ನಾನು ತುಂಬಾ ಗೌರವಿಸುತ್ತೇವೆ ಎಂದು ತಿಳಿಸಿದರು.
ದೆಹಲಿಯಲ್ಲಿರುವ ವಸತಿ ಸಚಿವ ವಿ.ಸೋಮಣ್ಣನವರು ಪುತ್ರನಿಗಾಗಿ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ದೂರವಾಣಿ ಮೂಲಕ ಅಮಿತ್ ಶಾ ಅವರಿಗೆ ಕರೆ ಮಾಡಿ ಮಗನ ಟಿಕೆಟ್ ವಿಚಾರವಾಗಿ ಕೆಲ ಕಾಲ ಚರ್ಚಿಸಿದ್ದಾರೆ. ಯಾವುದೇ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿದ ಪಕ್ಷದಲ್ಲಿ ಪುತ್ರ ಅರುಣ್ ಸೋಮಣ್ಣನಿಗೂ ನೀಡುವಂತೆ ಕೋರಿಕೊಂಡಿದ್ದೇನೆ. ಒಂದು ವೇಳೆ ಅಪ್ಪ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದರೆ ನನಗೆ ನನಗೆ ಟಿಕೆಟ್ ಬೇಡ. ನನ್ನ ಮಗ ಅರುಣ್ ಗೆ ಕೊಡಿ ಎಂದು ಅಮಿತ್ ಶಾಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಟಿಕೆಟ್ ಬೇಡ ಎಂದಿರುವ ವಿ.ಸೋಮಣ್ಣ ಅವರ ಮಾತಿಗೆ ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನೀವು ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿದು ಪಕ್ಷ ಅಧಿಕಾರಕ್ಕೆ ತರಬೇಕು. ಅರುಣ್ ಸೋಮಣ್ಣ ಕುರಿತು ಪಕ್ಷ ನಿರ್ಧಾರ ಮಾಡುತ್ತದೆ. ಬಿಜೆಪಿ ನಿಮ್ಮ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಸೋಮವಾರ ಬಿಜೆಪಿ ಪಟ್ಟಿ ಬಿಡುಗಡೆಯಾದ ಮೇಲೆ ಇನ್ನೊಂದಿಷ್ಟು ಮಾಹಿತಿಗಳು ಸಿಗಲಿವೆ.












Click it and Unblock the Notifications