ಚುನಾವಣಾ ಎಫೆಕ್ಟ್: ಖಾಸಗಿ ಬಸ್‌ಗಳ ಜೊತೆಗೆ ಸರ್ಕಾರಿ ಬಸ್‌ಗಳಲ್ಲೂ ದರ ಏರಿಕೆ, ಮತದಾರರಿಗೆ ಬರೆ
ಬೆಂಗಳೂರು, ಮೇ, 09: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಜನರು ಮತದಾನ ಮಾಡಲು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಒಂದೆಡೆ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದರೆ, ಇನ್ನೊಂದೆಡೆ ಇದೇ ಸೂಕ್ತ ಸಮಯ ಎಂದು ಖಾಸಗಿ ಬಸ್‌ಗಳ ಜೊತೆ ಸರ್ಕಾರಿ ಬಸ್‌ಗಳು ಕೂಡ ದರ ಹೆಚ್ಚಿಸಿದೆ.
ಮತದಾನ ಮಾಡಲು ಬುಧವಾರ ವೇತನ ಸಹಿತ ರಜೆ ಇರುವ ಕಾರಣ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಚುನಾವಣೆ ಕಾರ್ಯಕ್ಕಾಗಿ 10,000ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಾಗಿ ಬಸ್‌ಗಳ ಅಭಾವ ಎದುರಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆಯಿಂದಲೇ ಜನ ಊರುಗಳತ್ತ ತೆರಳುತ್ತಿದ್ದು, ಬಸ್ ಕೊರತೆ ನೀಗಿಸಲು ಸದ್ಯ ಅಂತರ್ ಜಿಲ್ಲೆ ಪ್ರಯಾಣಕ್ಕೆ ಬಿಎಂಟಿಸಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಶಿವಮೊಗ್ಗ, ಹೊಸದುರ್ಗ, ಕೂಡ್ಲಿಗೆ, ಚಿತ್ರದುರ್ಗ ಹಾಗೂ ದಾವಣಗೆರೆಗೆ ಸೇರಿದಂತೆ ಇತರ ಜಿಲ್ಲೆಗೆ ಬೆಂಗಳೂರಿನಿಂದ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಸರ್ಕಾರಿ ಬಸ್‌ನಲ್ಲಿಯೇ ದರ ಹೆಚ್ಚಿಸಲಾಗಿದೆ. ಮತದಾನ ಮಾಡಲು ತೆರಳುತ್ತಿರುವ ಜನರಿಗೆ ಸಾರಿಗೆ ಇಲಾಖೆ ಬರೆ ದರ ಹೆಚ್ಚಿಸಿ ಬರೆ ಎಳೆದಿದೆ.
ತುಮಕೂರು ಜಿಲ್ಲೆಯ ಹುಳಿಯಾರು, ಚಿಕ್ಕನಾಯಕನಹಳ್ಳಿ, ತುಮಕೂರು ನಗರಕ್ಕೆ 150, 170 ರೂಪಾಯಿಂದ ಒಮ್ಮೆಲೆ 250 ರೂಪಾಯಿಗೆ ಒಂದೇ ದರ ನಿಗದಿ ಮಾಡಲಾಗಿದೆ. ಇದೇ ರೀತಿ ಅನೇಕ ಜಿಲ್ಲೆಗಳ ಪ್ರಯಾಣಕ್ಕೂ ದರ ಏರಿಕೆ ಮಾಡಲಾಗಿದೆ. ಸಾರಿಗೆ ಇಲಾಖೆ ಈ ನೀತಿ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

'ಖಾಸಗಿ ಬಸ್‌ಗಳಲ್ಲಿ ಹೆಚ್ಚು ದುಡ್ಡು ವಸೂಲಿ ಮಾಡುತ್ತಾರೆ ಅಂತ ನಾವು ಕಷ್ಟಪಟ್ಟು ಸರ್ಕಾರಿ ಬಸ್ ಬರಲಿ ಎಂದು ಸಂಜೆಯಿಂದ ಕಾದು ಈಗ ಹತ್ತಿದ್ದೇವೆ. ಆದರೆ ಇವರು ಕೂಡ ಖಾಸಗಿ ಬಸ್ ತರ ನಮ ಬಳಿ ದುಡ್ಡು ಕಿತ್ತರೆ ಓಟು ಹಾಕೋಕೆ ಯಾರು ಹೋಗುತ್ತಾರೆ. ಸರ್ಕಾರ ವೋಟ್ ಹಾಕಿ ಅಂತ ಹೇಳುತ್ತಾರೆ. ಆದರೆ ಹೋಗುವವರಿಗೆ ಒಂದು ಬಸ್ ಕೂಡ ಇಲ್ಲ. ಇರುವ ಬಸ್ಸಿನಲ್ಲಿ ದುಡ್ಡು ಜಾಸ್ತಿ ಮಾಡಿದ್ದಾರೆ ' ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications