ರಹಸ್ಯ ಸಭೆ ನಡೆಸಿದ ಕಾಂಗ್ರೆಸ್ ನಾಯಕರು : ಲಿಂಗಾಯತ ಅಸ್ತ್ರಕ್ಕೆ ಪ್ರತಿತಂತ್ರಕ್ಕೆ ಪ್ಲ್ಯಾನ್
ಕಾಂಗ್ರೆಸ್ ನಾಯಕರು ಬುಧವಾರ ತಡರಾತ್ರಿಯವರೆಗೂ ದಿಢೀರ್ ರಹಸ್ಯ ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಬೆಳಗಿನ ಮೂರು ಗಂಟೆಯವರೆಗೂ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ಹಲವು ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಲಿಂಗಾಯತ ವಿರೋಧಿ ಹೇಳಿಕೆಯನ್ನು ಪ್ರಮುಖ ದಾಳವಾಗಿಸಿಕೊಂಡಿದೆ, ಬಿಜೆಪಿ ನಾಯಕರ ಈ ತಂತ್ರವನ್ನು ಯಾವ ರೀತಿ ಎದುರಿಸಬೇಕು ಎನ್ನುವುದರ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಲಿಂಗಾಯತ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳದೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಈಗಾಗಲೇ ಪ್ರಚಾರ ಮಾಡುತ್ತಿದೆ. ಬಿಜೆಪಿ ಹಲವು ಪ್ರಮುಖರಿಗೆ ಟಿಕೆಟ್ ನೀಡದೇ ಇರುವುದನ್ನೇ ಅಸ್ತ್ರವಾಗಿಸಿಕೊಂಡಿದ್ದು, ಲಿಂಗಾಯತ ಮತಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ. ಬಿಜೆಪಿ ಲಿಂಗಾಯತ ನಾಯಕರಿಗೆ ಅವಮಾನ ಮಾಡುತ್ತಿದೆ ಎನ್ನುವುದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಿಂಬಿಸಲು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಚರ್ಚಿಸಿದ್ದಾರೆ.
ಕ್ಷೇತ್ರಗಳಲ್ಲಿ ಉಳಿದಿರುವ ಪ್ರಮುಖ ನಾಯಕರು
ಈ ಬಾರಿ ಕಾಂಗ್ರೆಸ್ ಸಾಕಷ್ಟು ಪರಿಣಾಮಕಾರಿಯಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಆದರೂ ಕಾಂಗ್ರೆಸ್‌ನ ಕೆಲವು ನಾಯಕರು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಬಿಜೆಪಿ ಕಾಂಗ್ರೆಸ್ ಮೇಲೆ ಮಾಡುವ ಆರೋಪಗಳಿಗೆ ಕೇವಲ ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯಂತಹ ಪ್ರಮುಖ ನಾಯಕರು ಮಾತ್ರ ಉತ್ತರ ಕೊಡುತ್ತಿದ್ದು, ಇತರೆ ನಾಯಕರು ಅಷ್ಟಾಗಿ ಮಾತಾಡುತ್ತಿರುವುದು ಕಾಣುತ್ತಿಲ್ಲ.
ಹಿರಿಯ ನಾಯಕರು ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೇ ತೊಡಗಿಸಿಕೊಳ್ಳುತ್ತಿರುವುದರಿಂದ ಬಿಜೆಪಿ ಮಾಡುವ ಎಲ್ಲಾ ಆರೋಪಗಳಿಗೂ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಇದನ್ನು ಗಮನಿಸಿರುವ ಕಾಂಗ್ರೆಸ್ ನಾಯಕರು ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಮಟ್ಟದ ನಾಯಕರು ಸಕ್ರಿಯವಾಗಿದ್ದರು, ಇನ್ನೂ ಕೆಲವು ಪ್ರಮುಖ ನಾಯಕರು ತಮ್ಮನ್ನು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಸ್ವಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದು, ಗೆಲುವಿನ ಕಡೆ ಗಮನ ನೀಡಿದ್ದಾರೆ. ಜಿಲ್ಲೆಯ ಜವಾಬ್ದಾರಿಯನ್ನು ಹೊತ್ತಿರುವ ಕೆಲವು ಮುಖಂಡರು ಕೂಡ ಸ್ವ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.
ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ, ಹಿರಿಯ ನಾಯಕರೂ ಆದ, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ರಮೇಶ್ ಕುಮಾರ್, ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್ ಸೇರಿದಂತೆ ಮುಂತಾದವರು ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ಮಾಡುತ್ತಿದ್ದು, ಬೇರೆ ಕ್ಷೇತ್ರಗಳಲ್ಲಿ ಹೋಗಿ ಮತಬೇಟೆ ನಡೆಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಇತರೆ ಪ್ರಮುಖ ನಾಯರಕು ಮಾತ್ರ ರಾಜ್ಯದ ವಿವಿಧ ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಿಗಿಸಿಕೊಂಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇತರರು ವಿವಿಧ ಕ್ಷೇತ್ರಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ.












Click it and Unblock the Notifications