Karnataka Election 2023: ಕ್ಷೇತ್ರಕ್ಕೆ ಪ್ರವೇಶವಿಲ್ಲ ಅಂದ್ರೂ ಗೆಲ್ತಾರಾ ಈ ಇಬ್ಬರು ಅಭ್ಯರ್ಥಿಗಳು?
ಕರ್ನಾಟಕ ವಿಧಾನಸಭೆ ಚುನಾವಣೆ 2023ಯಲ್ಲಿ ಎರಡು ಕ್ಷೇತ್ರಗಳು ವಿಭಿನ್ನ ಕಾರಣಕ್ಕೆ ಭಾರಿ ಕುತೂಹಲ ಕೆರಳಿಸಿವೆ. ಧಾರವಾಡ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಈಗ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಧಾರವಾಡ ನಗರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶಿಸದಂತೆ ಕೋರ್ಟ್ ನಿರ್ಬಂಧ ಹೇರಿದ್ದರೆ, ಬಳ್ಳಾರಿ ನಗರಕ್ಕೆ ಪ್ರವೇಶಿಸದಂತೆ ಜನಾರ್ಧನ ರೆಡ್ಡಿಯವರಿಗೆ ನಿರ್ಬಂಧ ವಿಧಿಸಲಾಗಿದೆ.
ಬಳ್ಳಾರಿ ನಗರಕ್ಕೆ ತಮಗೆ ಪ್ರವೇಶ ಇಲ್ಲದ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ತಮ್ಮ ಪತ್ನಿ ಲಕ್ಷ್ಮಿ ಅರುಣಾರನ್ನು ಕಣಕ್ಕಿಳಿಸಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಇವರಿಬ್ಬರೂ ಗೆಲುವಿನ ನಗೆ ಬೀರುತ್ತಾರಾ ಎನ್ನುವ ಕುತೂಹಲ ಮೂಡಿದೆ.

ಕುಲಕರ್ಣಿ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಬಂಧ ಇರುವ ಕಾರಣ ಅವರ ಪತ್ನಿ ಶಿವಲೀಲಾ ನಾಮಪತ್ರ ಸಲ್ಲಿಸಿದ್ದಾರೆ. ಕುಲಕರ್ಣಿ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ ಎನ್ನುವ ದೃಢ ನಂಬಿಕೆಯೊಂದಿಗೆ ನಮಗೆ ಬೆಂಬಲ ನೀಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ಮತ ಕೇಳುತ್ತಿದ್ದೇನೆ ಎಂದು ಹೇಳಿದರು.
ವಿಡಿಯೋ-ಫೋನ್ ಕರೆ ಮೂಲಕ ಮನವಿ
ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಬಂಧ ಇದ್ದರೂ ವಿನಯ್ ಕುಲಕರ್ಣಿ ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ಜನಗಳನ್ನು ಸಂಪರ್ಕಿಸುತ್ತಿದ್ದಾರೆ. ವಿಡಿಯೋ ಮೂಲಕ ಸಂದೇಶವನ್ನು ಹಂಚಿಕೊಂಡಿದ್ದು, ನಿಮಗಾಗಿ ಮತ್ತು ನನ್ನ ಕ್ಷೇತ್ರಕ್ಕಾಗಿ ಸುತ್ತಾಡುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ ಶಕ್ತಿ ನೀವೆ ಎಂದು ಮನವಿ ಮಾಡಿದರು. 2016ರ ಜೂನ್‌ನಲ್ಲಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಕುಲಕರ್ಣಿ ಅವರನ್ನು 2020ರ ನವೆಂಬರ್ ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ನ್ಯಾಯವ್ಯಾಪ್ತಿಯ ನ್ಯಾಯಾಲಯದ ಅನುಮತಿಯಿಲ್ಲದೆ ಧಾರವಾಡಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂಬ ಷರತ್ತಿನ ಮೇಲೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತು. ಬೆಂಗಳೂರಿನ ನ್ಯಾಯವ್ಯಾಪ್ತಿಯ ವಿಶೇಷ ನ್ಯಾಯಾಲಯವು ಅವರ ಪ್ರವೇಶ ಕೋರಿಕೆಯನ್ನು ತಿರಸ್ಕರಿಸಿತ್ತು, ನಂತರ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು, ಅಲ್ಲಿ ಅವರ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಶುಕ್ರವಾರ ವಜಾಗೊಳಿಸಿದರು.
ಬಳ್ಳಾರಿಯಲ್ಲಿ ರೆಡ್ಡಿಗೆ ಜನಾಶೀರ್ವಾದ ಸಿಗುತ್ತಾ?
ಬಳ್ಳಾರಿಯ ಮಾಜಿ ಗಣಿ ಉದ್ಯಮಿ ಜನಾರ್ಧನ ರೆಡ್ಡಿ ಅವರಿಗೆ ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ವೈಎಸ್‌ಆರ್ ಕಡಪ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಬಿಜೆಪಿಯ ಮಾಜಿ ಸಚಿವ ಜನಾರ್ಧನ ರೆಡ್ಡಿ ಸದ್ಯ ಬಿಜೆಪಿ ತೊರೆದು ತಮ್ಮದೇ ಆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಪಕ್ಷ ಕಟ್ಟುವ ಮೂಲಕ ರಾಜ್ಯ ರಾಜಕಾರಣಕ್ಕೆ ಧುಮುಕಿದ್ದಾರೆ.

ಜನಾರ್ಧನ ರೆಡ್ಡಿ ಹೊಸ ಪಕ್ಷ ಕಟ್ಟಿದರು ಅವರ ಸಹೋದರರಾದ ಜಿ ಕರುಣಾಕರ ರೆಡ್ಡಿ ಮತ್ತು ಜಿ ಸೋಮಶೇಖರ ರೆಡ್ಡಿ ಬಿಜೆಪಿಯಲ್ಲೇ ಉಳಿದಿದ್ದು, ಕ್ರಮವಾಗಿ ಬಳ್ಳಾರಿ ನಗರ ಮತ್ತು ಹರಪನಹಳ್ಳಿಯಿಂದ ಸ್ಪರ್ಧೆ ಮಾಡಿದ್ದಾರೆ. ಬಳ್ಳಾರಿ ನಗರದಲ್ಲಿ ಸಹೋದರ ಕರುಣಾಕರ ರೆಡ್ಡಿ ವಿರುದ್ಧವೇ ಜನಾರ್ಧನ ರೆಡ್ಡಿಯವರ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ದಿನವೇ ಪತಿ ಬರದ ಕಾರಣ ಲಕ್ಷ್ಮಿ ಅರುಣಾ ಕಣ್ಣಿರಾಕಿದ್ದರು.
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಆರಂಭಿಸಿದ್ದ ಸದ್ಯ ಅರ್ಧಕ್ಕೆ ನಿಂತಿರುವ, ರಿಂಗ್ ರೋಡ್, ವಿಮಾನ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕುಡಿಯುವ ನೀರಿನ ಯೋಜನೆ ಜಾರಿ ಮಾಡಲು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಎಲ್ಲೆಲ್ಲಿ ಗೆಲ್ಲುವ ಅವಕಾಶ ಇದೆಯೋ ಅಲ್ಲಿ ಮಾತ್ರ ಗಮನ ಇಟ್ಟಿರುವುದಾಗಿ ಹೇಳಿದ್ದಾರೆ. 20 ರಿಂದ 28 ಸ್ಥಾನಗಳಲ್ಲಿ ಗೆಲ್ಲುವುದು ನನ್ನ ಗುರಿ, ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಡುತ್ತಿದ್ದೇನೆ ಎಂದು ಅವರು ಹೇಳಿದರು. ಜನಾರ್ಧನ ರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.












Click it and Unblock the Notifications