ಖಾಸಗಿ ಶಾಲೆಗಳ ಮಾರಾಟದ ಹಿಂದಿದೆ ಕರಾಳ ಸತ್ಯ: ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿವೆಯಾ ಬಜೆಟ್ ಶಾಲೆಗಳು?

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಅಥವಾ ವಿಲೀನಗೊಳ್ಳುತ್ತಿರುವ ಸುದ್ದಿಗಳು ಆಗಾಗ ಕೇಳಿ ಬರುತ್ತವೆ. ಆದರೆ ಇದೀಗ ರಾಜ್ಯದ ಶಿಕ್ಷಣ ವಲಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆಯೊಂದು ನಡೆಯುತ್ತಿದೆ.

ಖಾಸಗಿ ಶಾಲೆಗಳು ಎಂದಾಕ್ಷಣ ಕೇವಲ ಲಾಭಕೋರತನ, ಸುಲಿಗೆ ಎಂಬ ಭಾವನೆ ಸಮಾಜದಲ್ಲಿದೆ. ಆದ್ರೆ, ವಾಸ್ತವದಲ್ಲಿ ಎಲ್ಲ ಖಾಸಗಿ ಶಾಲೆಗಳು ಹಾಗಲ್ಲ. ಕೇವಲ ಸೇವಾ ಉದ್ದೇಶದಿಂದ, ಕಡಿಮೆ ಶುಲ್ಕ ಪಡೆದು, ಗ್ರಾಮೀಣ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅತ್ಯುತ್ತಮ ಮೌಲ್ಯಯುತ ಶಿಕ್ಷಣ ನೀಡುವಂತಹ ನೂರಾರು ಬಜೆಟ್ ಶಾಲೆಗಳು ನಮ್ಮಲ್ಲಿವೆ. ಆದರೆ, ಇಂದು ಇಂತಹ ಪ್ರಾಮಾಣಿಕ, ಸಾಮಾನ್ಯ ಶಾಲೆಗಳು ಕೂಡ ಮುಚ್ಚಿ ಹೋಗುತ್ತಿವೆ.

Karnataka Education Crisis Are Budget Private Schools Becoming Victims of Official Corruption

ಆದರೆ, ಪ್ರವೇಶಾತಿಯಲ್ಲಿ ಗಣನೀಯ ಕುಸಿತ, ಗಗನಕ್ಕೇರುತ್ತಿರುವ ನಿರ್ವಹಣಾ ವೆಚ್ಚ, ಶಾಲಾ ನವೀಕರಣ ನಿಯಮಗಳ ನೆಪದಲ್ಲಿ ನಡೆಯುವ ಅಧಿಕಾರಿಗಳ ಕಿರುಕುಳ ಹಾಗೂ ಹಳ್ಳಿ-ತಾಲೂಕು ಮಟ್ಟಕ್ಕೂ ಕಾಲಿಡುತ್ತಿರುವ ಬೃಹತ್ ಕಾರ್ಪೊರೇಟ್ ಶಾಲೆಗಳ ಪೈಪೋಟಿ ಹೀಗೆ ಈ ಸಾಲು ಸಾಲು ಸಂಕಷ್ಟಗಳಿಂದಾಗಿ ಇಂದು ಇಂತಹ ಸಣ್ಣ ಸಣ್ಣ ಶಾಲೆಗಳ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ.

ಇದರ ಪರಿಣಾಮವಾಗಿ ರಾಜ್ಯದ 200ಕ್ಕೂ ಹೆಚ್ಚು ಬಜೆಟ್ ಶಾಲೆಗಳು ಅನಿವಾರ್ಯವಾಗಿ ಬಾಗಿಲು ಮುಚ್ಚುತ್ತಿವೆ ಅಥವಾ ಶಿಕ್ಷಣ ಮಾಫಿಯಾಗಳಿಗೆ ಮಾರಾಟವಾಗುತ್ತಿವೆ. ಹೀಗಾಗಿ ಶಿಕ್ಷಣವು ಕೇವಲ ರಿಯಲ್ ಎಸ್ಟೇಟ್ ಕುಳಗಳು ಮತ್ತು ರಾಜಕಾರಣಿಗಳ ಕಮರ್ಷಿಯಲ್ ಬಿಸಿನೆಸ್ ಆಗಿ ಬದಲಾಗುತ್ತಿದ್ದು, ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದ ಶಿಕ್ಷಣ ಶಾಶ್ವತವಾಗಿ ದೂರವಾಗುವ ಭೀತಿ ಎದುರಾಗಿದೆ.

ಬಜೆಟ್ ಶಾಲೆಗಳ ಮಾರಾಟ: ಕಾರ್ಪೊರೇಟ್ ಶಾಲೆಗಳ ಪೈಪೋಟಿಯೇ ಪ್ರಮುಖ ಕಾರಣ

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಪ್ರಸ್ತುತ ಎದುರಿಸುತ್ತಿರುವ ಅತಿದೊಡ್ಡ ಸವಾಲೆಂದರೆ ದೊಡ್ಡ ಬ್ರ್ಯಾಂಡ್‌ಗಳ ಕಾರ್ಪೊರೇಟ್ ಶಾಲೆಗಳ ಅಬ್ಬರ. ಕೇವಲ ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹೈ-ಫೈ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಈಗ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ಲಗ್ಗೆ ಇಡುತ್ತಿವೆ.

ಬೃಹತ್ ಕ್ಯಾಂಪಸ್, ಎಸಿ ಕೊಠಡಿಗಳು, ಶಾಲಾ ಬಸ್ ಸೇವೆ ಹಾಗೂ ಆಕರ್ಷಕ ಮಾರ್ಕೆಟಿಂಗ್ ತಂತ್ರಗಳ ಮೂಲಕ ಈ ಸಂಸ್ಥೆಗಳು ಪೋಷಕರನ್ನ ಸುಲಭವಾಗಿ ಸೆಳೆಯುತ್ತಿವೆ. ಇದರ ನೇರ ಪರಿಣಾಮ ಸ್ಥಳೀಯ ಶಾಲೆಗಳ ಮೇಲಾಗಿದ್ದು, 100ರಿಂದ 200 ವಿದ್ಯಾರ್ಥಿಗಳನ್ನ ಹೊಂದಿರುವ ಸಣ್ಣ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗುತ್ತಿದೆ.

Karnataka Education Crisis Are Budget Private Schools Becoming Victims of Official Corruption

ವಿದ್ಯಾರ್ಥಿಗಳೇ ಇಲ್ಲದೆ ಶಿಕ್ಷಕರ ವೇತನ ಹಾಗೂ ನಿರ್ವಹಣಾ ವೆಚ್ಚ ಭರಿಸಲಾಗದೆ, ಶಾಲೆಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವುದು, ಲೀಸ್ ಅಥವಾ ಬಾಡಿಗೆಗೆ ನೀಡುವುದು, ಇಲ್ಲವೇ ಲಾಭ ಹಂಚಿಕೆ ಆಧಾರದ ಮೇಲೆ ಬೇರೆ ಬೃಹತ್ ಸಂಸ್ಥೆಗಳಿಗೆ ಆಡಳಿತವನ್ನು ವಹಿಸುವ ಅನಿವಾರ್ಯ ಮಾರ್ಗಗಳನ್ನ ಆಡಳಿತ ಮಂಡಳಿಗಳು ಕಂಡುಕೊಂಡಿವೆ.

ನವೀಕರಣದ ಹೆಸರಲ್ಲಿ ಲಂಚದ ಸುಲಿಗೆ: ಲೋಕೇಶ್ ತಾಳಿಕಟ್ಟೆ ಆರೋಪ

ಖಾಸಗಿ ಶಾಲೆಗಳ ಒಕ್ಕೂಟದ (ಕೃಪಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರ ಪ್ರಕಾರ, ಶಾಲೆಗಳು ಮುಚ್ಚಲು ಕೋವಿಡ್ ಕಾರಣವೇ ಅಲ್ಲ. ಬದಲಾಗಿ, ಸರ್ಕಾರ ತಂದಿರುವ ಅವೈಜ್ಞಾನಿಕ ಹಾಗೂ ಕಠಿಣ ನಿಯಮಗಳು. 10 ವರ್ಷಗಳಿಗೊಮ್ಮೆ ಮಾಡಬೇಕಿದ್ದ ಮಾನ್ಯತೆ ನವೀಕರಣದ ನಿಯಮಗಳನ್ನು ಇದೀಗ ತೀರಾ ಬಿಗಿಗೊಳಿಸಲಾಗಿದೆ. ನವೀಕರಣಕ್ಕೆ ಅಗ್ನಿಶಾಮಕ ದಳದ ಪ್ರಮಾಣಪತ್ರ (Fire Safety) ಹಾಗೂ ಲೋಕೋಪಯೋಗಿ ಇಲಾಖೆಯಿಂದ (PWD) ಕಟ್ಟಡ ಸುರಕ್ಷತಾ ಪ್ರಮಾಣಪತ್ರ ತರುವುದು ಕಡ್ಡಾಯ. ಆದರೆ, ಈ ಪ್ರಮಾಣಪತ್ರಗಳನ್ನು ಪಡೆಯಲು ಲಕ್ಷಾಂತರ ರೂಪಾಯಿ ಲಂಚ ನೀಡಬೇಕಾದ ಅನಿವಾರ್ಯತೆ ಶಾಲೆಗಳ ಮುಂದಿದೆ.

"ಅಗ್ನಿಶಾಮಕ ದಳದ ಪ್ರಮಾಣಪತ್ರಕ್ಕೆ ಕನಿಷ್ಠ 2 ರಿಂದ 3 ಲಕ್ಷ ರೂ. ಹಾಗೂ PWD ಇಂಜಿನಿಯರ್‌ಗಳಿಗೆ ಭಾರಿ ಮೊತ್ತದ ಲಂಚ ನೀಡದಿದ್ದರೆ ಫೈಲ್‌ಗಳು ಮುಂದಕ್ಕೆ ಹೋಗುವುದಿಲ್ಲ. ಕೇವಲ 500-600 ರೂ. ಶುಲ್ಕ ವಿಧಿಸಿ ಹಳ್ಳಿಗಳಲ್ಲಿ ಮತ್ತು ಸ್ಲಂಗಳಲ್ಲಿ ಶಾಲೆ ನಡೆಸುವ ಆಡಳಿತ ಮಂಡಳಿಗಳು ಲಕ್ಷಗಟ್ಟಲೆ ಲಂಚ ಎಲ್ಲಿಂದ ತರಬೇಕು?" ಎಂದು ಕೇಳುತ್ತಾರೆ ಲೋಕೇಶ್‌.

ಇದರ ಜೊತೆಗೆ, 30 ವರ್ಷಗಳಿದ್ದ ಲೀಸ್ ಒಪ್ಪಂದವನ್ನು 15 ವರ್ಷಗಳಿಗೆ ಇಳಿಸಿ, ಕಡ್ಡಾಯವಾಗಿ ನೋಂದಣಿ ಮಾಡಿಸಲು ಸೂಚಿಸಲಾಗಿದೆ. ಇದರಿಂದ ಭಾರಿ ಮೊತ್ತದ ಸ್ಟ್ಯಾಂಪ್ ಡ್ಯೂಟಿ ಕಟ್ಟಬೇಕಾದ ಹೊರೆ ಶಾಲೆಯ ಮೇಲಿದೆ. ಜೊತೆಗೆ 3 ಲಕ್ಷ ರೂ.ಗಳನ್ನ ಜಂಟಿ ಖಾತೆಯಲ್ಲಿ ಎಫ್.ಡಿ ಇಡುವ ಕಠಿಣ ನಿಯಮವೂ ಬಜೆಟ್ ಶಾಲೆಗಳ ಕತ್ತು ಹಿಸುಕುತ್ತಿದೆ ಎನ್ನುವುದು ಲೋಕೇಶ್‌ ಅವರ ಅಭಿಪ್ರಾಯ.

ಅಂಕಿ-ಅಂಶಗಳು ಹೇಳುವ ಸತ್ಯ

2025-26ನೇ ಸಾಲಿನ ಶೈಕ್ಷಣಿಕ ವರ್ಷದ ಮಾನ್ಯತೆ ನವೀಕರಣದ ಜಿಲ್ಲಾವಾರು ಅರ್ಜಿಗಳ ವರದಿಯನ್ನ ಗಮನಿಸಿದರೆ ಅಧಿಕಾರಿಗಳ ಕಠಿಣ ನಿಲುವಿನ ಅಸಲಿ ಬಣ್ಣ ಬಯಲಾಗುತ್ತದೆ. ರಾಜ್ಯಾದ್ಯಂತ ಒಟ್ಟು 8,058 ಶಾಲೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೆ, ಅದರಲ್ಲಿ ಬರೋಬ್ಬರಿ 4,969 ಶಾಲೆಗಳ ಅರ್ಜಿಗಳನ್ನ ಸರ್ಕಾರ ತಿರಸ್ಕರಿಸಲಾಗಿದೆ. ಕೇವಲ 3,005 ಶಾಲೆಗಳಿಗೆ ಮಾತ್ರ ಅನುಮೋದನೆ ದೊರೆತಿದೆ. ಅಂದರೆ, ಶೇಕಡಾ 60ಕ್ಕೂ ಹೆಚ್ಚು ಶಾಲೆಗಳು ನವೀಕರಣ ಪಡೆಯಲು ವಿಫಲವಾಗಿವೆ. ಹೀಗಾಗಿ, ದಾರಿ ಕಾಣದ ಸಣ್ಣ ಶಾಲೆಗಳ ಆಡಳಿತ ಮಂಡಳಿಗಳು ಅನಿವಾರ್ಯವಾಗಿ ಶಾಲೆಯನ್ನ ಮುಚ್ಚುತ್ತಿವೆ ಅಥವಾ ಮಾರಾಟಕ್ಕೆ ಇಡುತ್ತಿವೆ.

ಕಾರ್ಪೊರೇಟ್ ಕುಳಗಳ ಪಾಲಾಗುತ್ತಿರುವ ಶಿಕ್ಷಣ ವ್ಯವಸ್ಥೆ

ಒಂದೆಡೆ ಸಣ್ಣ ಶಾಲೆಗಳು ಮುಚ್ಚುತ್ತಿದ್ದರೆ, ಮತ್ತೊಂದೆಡೆ ದೊಡ್ಡ ದೊಡ್ಡ ಕಾರ್ಪೊರೇಟ್ ಶಾಲೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೂ ವಿಸ್ತರಿಸುತ್ತಿವೆ. ಶಿಕ್ಷಣ ಕಾಯ್ದೆಯ ರೂಲ್-4 ರ ಪ್ರಕಾರ ಶಿಕ್ಷಣವು ಲಾಭದಾಯಕವಲ್ಲದ ಅಂದರೆ Non-profitable ಸಂಸ್ಥೆಯಾಗಿರಬೇಕು. ಆದರೆ, ಇಂದು ಶಿಕ್ಷಣವು ರಿಯಲ್ ಎಸ್ಟೇಟ್ ವ್ಯವಹಾರವಾಗಿ ಬದಲಾಗಿದೆ.

ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದು ಸಣ್ಣ ಶಾಲೆಗಳನ್ನು ಖರೀದಿಸಿ, ಪೋಷಕರಿಂದ ಶಾಲಾ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿವೆ. ರಾಜಕಾರಣಿಗಳೇ ಇಂತಹ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದರಿಂದ, ಬಜೆಟ್ ಶಾಲೆಗಳನ್ನ ವ್ಯವಸ್ಥಿತವಾಗಿ ಮುಚ್ಚಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಈ ಎಲ್ಲಾ ಆರೋಪಗಳನ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದಿಂದಲೇ ಖಾಸಗಿ ಶಾಲೆಗಳು ಮುಚ್ಚುತ್ತಿವೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಭ್ರಷ್ಟಾಚಾರದ ಬಗ್ಗೆ ನಿರ್ದಿಷ್ಟ ಆಧಾರಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಕಠಿಣ ಕ್ರಮ ಕೈಗೊಳ್ಳುತ್ತೇವೆ," ಎಂದಿದ್ದಾರೆ.

ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈಗಾಗಲೇ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ, ಸಲ್ಲಿಸಬೇಕಾದ ದಾಖಲೆಗಳ ಸಂಖ್ಯೆಯನ್ನೂ ಇಳಿಕೆ ಮಾಡಲಾಗಿದೆ. ನಿಯಮಗಳನ್ನು ಸರಿಯಾಗಿ ಪಾಲಿಸುವ ಯಾವುದೇ ಶಾಲೆಗಳು ಆತಂಕಪಡುವ ಅಗತ್ಯವಿಲ್ಲ. ನಮ್ಮ ಉದ್ದೇಶ ಖಾಸಗಿ ಶಾಲೆಗಳಿಗೆ ತೊಂದರೆ ಕೊಡುವುದಲ್ಲ, ಬದಲಾಗಿ ಶಿಕ್ಷಣದ ಗುಣಮಟ್ಟ ಕಾಪಾಡುವುದು ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

Karnataka Education Crisis Are Budget Private Schools Becoming Victims of Official Corruption

ಸರ್ಕಾರಿ ಶಾಲೆಗಳ ಸಬಲೀಕರಣ: ಶಿಕ್ಷಣತಜ್ಞ ನಿರಂಜನ್ ಆರಾಧ್ಯ ಅವರ ನಿಲುವು

ಈ ಇಡೀ ಬೆಳವಣಿಗೆಯನ್ನ ಬೇರೆಯದೇ ದೃಷ್ಟಿಕೋನದಿಂದ ವಿಶ್ಲೇಷಿಸುವ ಶಿಕ್ಷಣತಜ್ಞ ನಿರಂಜನ್ ಆರಾಧ್ಯ ಅವರು, "ಶಿಕ್ಷಣ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಲಾಬಿ ಹಾಗೂ ರಾಜಕೀಯ ಹಿತಾಸಕ್ತಿಗಳು ಹೆಚ್ಚಾಗಿವೆ. ಸಣ್ಣ ಶಾಲೆಗಳು ಮುಚ್ಚಿದಾಗ ಆ ಜಾಗವನ್ನು ದೊಡ್ಡ ಸಂಸ್ಥೆಗಳು ಕಬಳಿಸುವ ಹುನ್ನಾರವೂ ಇದರ ಹಿಂದಿದೆ. ಆದರೆ, ಕೇವಲ ಖಾಸಗಿ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕಪಡುವ ಬದಲು, ಸರ್ಕಾರಿ ಶಾಲೆಗಳನ್ನು ಬಲಪಡಿಸುವತ್ತ ಸರ್ಕಾರ ಹೆಚ್ಚಿನ ಗಮನಹರಿಸಬೇಕು" ಎಂದು ಆಗ್ರಹಿಸಿದ್ದಾರೆ. ಕೆಲವು ರಾಜಕೀಯ ನಾಯಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ನೀತಿ ರೂಪಿಸುವಾಗ ಹಿತಾಸಕ್ತಿ ಸಂಘರ್ಷ ಉಂಟಾಗುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿಯೇ ಅತ್ಯುತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಸಿಕ್ಕರೆ ಪೋಷಕರು ಖಾಸಗಿ ಶಾಲೆಗಳತ್ತ ಮುಖಮಾಡುವುದೇ ಇಲ್ಲ ಎಂಬುದು ನಿರಂಜನ್‌ ಅವರ ವಾದ.

ಮುಂದೇನು?

ಸಚಿವರ ಸಮರ್ಥನೆ ಏನೇ ಇದ್ದರೂ, ವಾಸ್ತವದಲ್ಲಿ ಸಾವಿರಾರು ಬಜೆಟ್ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ಸುಳ್ಳಲ್ಲ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿದ್ದ ಇಂತಹ ಶಾಲೆಗಳು ಮುಚ್ಚಿದರೆ, ಅವರು ಎಲ್ಲಿಗೆ ಹೋಗಬೇಕು? ಸರ್ಕಾರಿ ಶಾಲೆಗಳು ಕೂಡ ಮುಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಬಡ ವಿದ್ಯಾರ್ಥಿಗಳಿಗೆ ದುಬಾರಿ ಕಾರ್ಪೊರೇಟ್ ಶಾಲೆಗಳ ಮೆಟ್ಟಿಲು ಹತ್ತುವುದು ಅಸಾಧ್ಯದ ಮಾತು. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ, ಬಜೆಟ್ ಶಾಲೆಗಳಿಗೆ ನಿಯಮಗಳಲ್ಲಿ ವಿನಾಯಿತಿ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಉಳಿಸಬೇಕಿದೆ. ಕೇವಲ ಬಂಡವಾಳಶಾಹಿಗಳ ಕೈಗೆ ಶಿಕ್ಷಣವನ್ನು ಒಪ್ಪಿಸಿದರೆ, ಮುಂದೊಂದು ದಿನ ಶಿಕ್ಷಣ ಬಡವರ ಪಾಲಿಗೆ ಮರೀಚಿಕೆಯಾಗುವುದರಲ್ಲಿ ಸಂದೇಹವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+