ವಿವಿಧ ಜಿಲ್ಲೆಗಳ ಶುಕ್ರವಾರದ ತರಹೇವಾರಿ ಸುದ್ದಿ ಸಂಪುಟ

Posted By:
Subscribe to Oneindia Kannada

ಬೆಂಗಳೂರು, ಜುಲೈ 01 : 'ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ನ್ಯಾಕ್ ಮಾನ್ಯಾತಾ ಸಮಿತಿ 'ಬಿ' ಗ್ರೇಡ್ ಮಾನ್ಯತೆ ನೀಡಿದೆ' ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಆರ್. ನಿರಂಜನ್ ಹೇಳಿದರು. ಕಳೆದೊಂದು ವರ್ಷದಲ್ಲಿ ಅಧ್ಯಯನ, ಅಧ್ಯಾಪನ, ಆಡಳಿತ ಮತ್ತು ಸಂಶೋಧನೆಯಲ್ಲಿ ವಿವಿ ಅನೇಕ ಸಾಧನೆಗಳನ್ನು ಮಾಡಿದೆ.

ನ್ಯಾಕ್ ಮತ್ತು ಸ್ವ-ಅಧ್ಯಯನ ವರದಿ ಮತ್ತು ಭಾರತ ಸರ್ಕಾರದ ಉನ್ನತ ಅಧಿಕಾರಿಗಳ ಮನವೊಲಿಕೆಯಿಂದ ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ (ರೂಸಾ) ಅಡಿಯಲ್ಲಿ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ 20 ಕೋಟಿ ರೂ. ಧನಸಹಾಯ ಮಂಜೂರಾಗಿದೆ.

pro niranjan

ರೈಲ್ವೆ ಮತ್ತು ವೈಮಾನಿಕ ಇಂಜಿನಿಯರ್ ಕೋರ್ಸ್ : 'ರಾಜ್ಯದ ಆಯ್ದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ರೈಲ್ವೆ ಇಂಜಿನಿಯರಿಂಗ್ ಹಾಗೂ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ' ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

basavaraj rayareddy

ಕೊಪ್ಪಳದಲ್ಲಿ ಮಾತನಾಡಿದ ಸಚಿವರು, 'ರಾಜ್ಯದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಜಾರಿಯಲ್ಲಿವೆ. ಆದರೆ ಇದಕ್ಕಾಗಿ ಅಗತ್ಯವಿರುವ ರೈಲ್ವೆ ಇಂಜಿನಿಯರ್‌ ನಮಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ವೈಮಾನಿಕ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದೆ ಇದನ್ನು ಗಮನದಲ್ಲಿಟ್ಟುಕೊಂಡು, ಆಯ್ದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರೈಲ್ವೆ, ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಗಂಭೀರ ಚಿಂತನೆ ನಡೆದಿದೆ' ಎಂದರು.

ಮಂಗಳೂರು : ಬೆಣ್ಗೇರಿ ಎಂಬಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಯುವಕನನ್ನು ಗಂಗೊಳ್ಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಬಾವಿಕಟ್ಟೆಯ ಸೂರಜ್ (19) ಎಂದು ಗುರುತಿಸಲಾಗಿದೆ. ಕೋಟೇಶ್ವರದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿರುವ ಗುಜ್ಜಾಡಿಯ 19 ವರ್ಷದ ಯುವತಿ ಗುರುವಾರ ಬೆಳಗ್ಗೆ ಮನೆಯಿಂದ ಗುಜ್ಜಾಡಿ ಬಸ್ ನಿಲ್ದಾಣಕ್ಕೆ ಬರುತ್ತಿರುವಾಗ ಕಾಡು ಹಾದಿಯಲ್ಲಿ ಸೂರಜ್ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವಿದೆ.

mangaluru news

ಮೈಸೂರು : ಕಾರ್ಮಿಕನೊಬ್ಬ ಚಲಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮದ ಬಳಿ ನಡೆದಿದೆ. ರಾಮನಾಥತುಂಗ ಗ್ರಾಮದ ಸಮೀಪದ ಎ.ಜಿ.ಕೊಪ್ಪಲು ಗ್ರಾಮದ ಯುವಕ ಗಿರೀಶ್ (25) ಮೃತಪಟ್ಟವರು. ಟ್ರಾಕ್ಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನಿಂದ ಕೆಳಕ್ಕೆ ಬಿದ್ದು, ಮೃತಪಟ್ಟಿದ್ದಾನೆ.

mysuru news

ಮೈಸೂರು : ದನ ಸಾಗಿಸುತ್ತಿದ್ದವರ ಬಂಧನ : ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು, ಕಡಿಮೆ ಬೆಲೆಗೆ ರೈತರಿಂದ ಜಾನುವಾರುಗಳನ್ನು ಖರೀದಿಸಿ ಕೇರಳಕ್ಕೆ ಸಾಗಿಸಿ ಕೈತುಂಬಾ ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ.

ಇದೀಗ ಇದೊಂದು ದಂಧೆಯಾಗಿ ಬೆಳೆಯುತ್ತಿದ್ದು, ರಂಜಾನ್ ತಿಂಗಳಾದ ಕಾರಣ ಕೇರಳದ ಕಸಾಯಿಖಾನೆಯಲ್ಲಿ ದನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅಲ್ಲಿಗೆ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಕಡೆಯಿಂದ ದನಗಳನ್ನು ಖರೀದಿಸಿ ಬಳಿಕ ಸಂಪೂರ್ಣ ಮುಚ್ಚಿದಂತಿರುವ ಕ್ಯಾಂಟರ್‌ಗಳಲ್ಲಿ ತುಂಬಿಸಿ ಗಡಿದಾಟಿಸುವ ಕೆಲಸ ಮಾಡಲಾಗುತ್ತಿದೆ.

hd kote news

ಬಹಳಷ್ಟು ಸಾರಿ ಗಡಿಭಾಗದಲ್ಲಿರುವ ಚೆಕ್‍ಪೋಸ್ಟ್‍ನ ಸಿಬ್ಬಂದಿಗಳ ಕಣ್ಣಿಗೆ ಮಣ್ಣೆರಚಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಎಚ್.ಡಿ.ಕೋಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಜಾನುವಾರುಗಳನ್ನು ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿರುವ ಮಾಹಿತಿ ಪಡೆದ ಪ್ರಾಣಿದಯ ಸಂಸ್ಥೆ ಮತ್ತು ಎಚ್.ಡಿ.ಕೋಟೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕ್ಯಾಂಟರ್ ವಾಹನವನ್ನು ತಪಾಸಣೆ ಮಾಡಿದಾಗ ಅದರೊಳಗೆ ಜಾನುವಾರುಗಳಿರುವುದು ಪತ್ತೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka district news digest : News of Kalaburagi, Mysuru, Koppal, Mangaluru.
Please Wait while comments are loading...