RCB: ನೀವು ಪ್ರತಿಯೊಬ್ಬ ಕನ್ನಡಿಗನ ಕನಸು ನನಸಾಗಿಸಿದ್ದೀರಿ: ಐತಿಹಾಸಿಕ ಕಪ್ ಗೆದ್ದ ಆರ್‌ಸಿಬಿಗೆ ಡಿಕೆಶಿ ಅಭಿನಂದನೆ
ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಈ ಐಪಿಎಲ್ ಸೀಸನ್‌ನಲ್ಲಿ ಕೊನೆಗೂ ಐತಿಹಾಸಿಕ ಗೆಲುವು ಸಾಧಿಸಿ, ಈ ಸಲ ಕಪ್ ನಮ್ದೇ ಎಂದಿದೆ. ಕೊನೆಯ ಓವರ್‌ನಲ್ಲೇ ಆರ್‌ಸಿಬಿ ಗೆಲುವಿನ ಸುಳಿವು ಸಿಕ್ಕ ಬೆನ್ನಲ್ಲೇ ಸಂಭ್ರಮಾಚರಣೆಗಳು ಶುರುವಾಗಿದ್ದವು. ಗೆದ್ದ ಸೆಕೆಂಡುಗಳಲ್ಲೇ ಆರ್‌ಸಿಬಿ ಅಭಿಮಾನಿಗಳು ಸ್ಟೇಟಸ್, ಡಿಪಿಗಳಲ್ಲಿ ಆರ್‌ಸಿಬಿಗೆ ಶುಭಾಶಯಗಳ ಸುರಿಮಳೆ ಹರಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಈ ಆರ್‌ಸಿಬಿ ತಂಡದ ಪರ ಸದಾ ನಿಂತು ಬೆನ್ನುತಟ್ಟುತ್ತಿದ್ದರು. ಇದೀಗ ಐತಿಹಾಸಿಕ ಗೆಲುವಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಲ ಕಪ್ ನಮ್ದೇ! ಐಪಿಎಲ್ ಫೈನಲ್‌ನಲ್ಲಿ ಈ ಮರೆಯಲಾಗದ, ಐತಿಹಾಸಿಕ ಗೆಲುವಿಗಾಗಿ ಆರ್‌ಸಿಬಿಗೆ ಭಾರಿ ಅಭಿನಂದನೆಗಳು, 18 ವರ್ಷಗಳ ಉತ್ಸಾಹ, ನಿಷ್ಠೆ ಮತ್ತು ಎಂದಿಗೂ ಬಿಟ್ಟುಕೊಡದಿರುವುದು ಎಲ್ಲದಕ್ಕೂ ಇಂದು ಫಲ ಸಿಕ್ಕಿದೆ. ನೀವು ಪ್ರತಿಯೊಬ್ಬ ಕನ್ನಡಿಗನ ಕನಸನ್ನು ನನಸಾಗಿಸಿದ್ದೀರಿ! ಇದು ಗೆಲುವಿಗಿಂತ ಹೆಚ್ಚಿನದು, ಇದು ಇಡೀ ಆರ್‌ಸಿಬಿ ಸೈನ್ಯಕ್ಕೆ ಭಾವನಾತ್ಮಕ ಕ್ಷಣ. ಕರ್ನಾಟಕ ಹೆಮ್ಮೆಯಿಂದ ಘರ್ಜಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಬರೆದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಆರ್‌ಸಿಬಿ ತಂಡವನ್ನು ಅಭಿನಂದಿಸಿದ್ದಾರೆ. ಚಾಂಪಿಯನ್ಸ್ ಆಫ್ ಹಾರ್ಟ್ ಈಗ ಕಪ್‌ನ ಮಾಲೀಕರು. ಅಭಿನಂದನೆಗಳು ಎಂದಿದ್ದಾರೆ. ಅಶ್ವಿನಿ ಪುನೀತ್‌ರಾಜ್‌ಕುಮಾರ್ ಕೊನೆಗೂ ಈ ಸಲ ಕಪ್ ನಮ್ದೇ, ವರ್ಷಗಳ ಅಚಲ ಬೆಂಬಲ, ಅಂತ್ಯವಿಲ್ಲದ ಘೋಷಣೆಗಳು ಮತ್ತು ನಂಬಿಕೆಯ ನಂತರ, ನಮ್ಮ ಕನಸುಗಳು ನನಸಾಗಿವೆ. ಆರ್‌ಸಿಬಿ ಐಪಿಎಲ್2025 ಚಾಂಪಿಯನ್‌ಗಳು. ನಮ್ಮ ತಂಡ, ನಮ್ಮ ಗೆಲುವು, ನಮ್ಮ ಆರ್‌ಸಿಬಿ ವರ್ಷಗಳ ನಿರೀಕ್ಷೆ ಹಾಗೂ ನಂಬಿಕೆ ಮತ್ತು ಅಳಲಿನ ನಂತರ ಇಂದು ಕನಸು ನನಸಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ: ಹೆಚ್‌ಡಿಕೆ
ಐತಿಹಾಸಿಕ ಗೆಲುವಿಗೆ ಆರ್‌ಸಿಬಿಗೆ ಅಭಿನಂದನೆಗಳು ವಿರಾಟ್ ಕೊಹ್ಲಿ ಅವರಿಗೆ ವಿಶೇಷ ನಮನಗಳು, ನಿಮ್ಮ ಉತ್ಸಾಹ, ಸ್ಥಿತಿಸ್ಥಾಪಕತ್ವ ಮತ್ತು ನಾಯಕತ್ವವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಪ್ರತಿ ಋತುವಿನಲ್ಲಿ RCB ಜೊತೆ ನಿಂತ ಪ್ರತಿಯೊಬ್ಬ ನಿಷ್ಠಾವಂತ ಅಭಿಮಾನಿಗೂ ಈ ಗೆಲುವು ಸಲ್ಲುತ್ತದೆ. ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ಡಾಲಿ ಧನಂಜಯ್, ನಮ್ದೇ ನಮ್ದೇ ನಮ್ದೇ ಎಂದಿದ್ದಾರೆ. ನಮ್ಮ ತಂಡಕ್ಕೆ ಅಭಿನಂದನೆಗಳು, ಆರ್‌ಸಿಬಿ ಈ ಸಲ ಕಪ್ ನಮ್ದೆ ಎಂದು ರಚಿತಾ ರಾಮ್ ಟ್ವೀಟ್ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಾಗ ಬೆಂಗಳೂರಿನೆಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು.
ತೆಲುಗು ನಟ ಅಲ್ಲು ಅರ್ಜುನ್ ಕೂಡ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಕನ್ನಡದಲ್ಲೇ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೊನೆಗೂ ಈ ಸಲ ಕಪ್ ನಮ್ದೆ ಕೊನೆಗೂ, ನಾವು 18 ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೆವು. ಆರ್‌ಸಿಬಿಗೆ ದೊಡ್ಡ, ದೊಡ್ಡ ಅಭಿನಂದನೆಗಳು ಎಂದು ಅಲ್ಲು ವಿಶ್ ಮಾಡಿದ್ದಾರೆ.












Click it and Unblock the Notifications