BJPvsRSS: ಬಿಎಸ್‌ವೈ ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು 'ಸಂತೋಷ ಕೂಟ' ಪಣ
ಬೆಂಗಳೂರು, ಜೂನ್ 30: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ( BS Yediyurappa ) ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು 'ಸಂತೋಷ ಕೂಟ' ಪಣ ತೊಟ್ಟಿದೆ ಎಂದು ಕಾಂಗ್ರೆಸ್ ಟ್ವೀಟಿಸಿದೆ. ಈ ಮೂಲಕ ಬಿಜೆಪಿ ( BJP ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ( BL Santosh ) ವಿರುದ್ಧ ಪರೋಕ್ಷ ವಾಗ್ದಾಳಿ ನಡಸಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'BSY ಬ್ರಿಗೇಡ್‌ನವರ ಈ ಪ್ರಶ್ನೆ ಸಮಂಜಸ ಅಲ್ಲವೇ? ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಹಿನಾಯವಾಗಿ ಮಾತನಾಡುತ್ತಿದ್ದವರ ವಿರುದ್ಧ ಒಂದೇ ಒಂದು ನೋಟಿಸ್ ನೀಡದ ಬಿಜೆಪಿ ಪಕ್ಷ ಸಂತೋಷ ಕೂಟದ ವಿರುದ್ಧ ಮಾತನಾಡಿದ 24 ಗಂಟೆಯೊಳಗೆ ನೋಟಿಸ್ ನೀಡಲಾಗಿದೆ. BSY ಅಂದರೆ ಅಷ್ಟೊಂದು ತಾತ್ಸಾರವೇ? ಪಂಚೆ ಸಂತೋಷರ ಮೇಲೆ ಅಷ್ಟೊಂದು ಪ್ರೀತಿಯೇ ಬಿಜೆಪಿ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಬಿಜೆಪಿಯ ಅಂತರಂಗದ ಸತ್ಯಗಳನ್ನು ನಾವು ಮೊದಲೇ ಹೇಳಿದ್ದೆವು, ಈಗ ಅವರ ಬಾಯಲ್ಲೇ ಹೊರಬರುತ್ತಿದೆ. ಬಸವರಾಜ ಬೊಮ್ಮಾಯಿ ಅವರು #PuppetCM ಆಗಿದ್ದರು ಎಂದಿದ್ದೆವು. ಬೊಮ್ಮಾಯಿಯವರ ಕೈ ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಹೇಳಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ.
'ನಳೀನ್ ಕುಮಾರ್ ಕಟೀಲ್, ನಾಮಕವಸ್ಥೆಯ ಅಸಮರ್ಥ ಅಧ್ಯಕ್ಷರು ಎಂದಿದ್ದೆವು. ಕಟೀಲ್ ಸಂತೋಷ ಕೂಟದ ಕೈಗೊಂಬೆ ಎಂದಿದ್ದಾರೆ' ಎಂದು ತಿಳಿಸಿದೆ.
ಬಿಎಸ್ ಯಡಿಯೂರಪ್ಪ ಅವರ ಪದಚ್ಯುತಿ ಹಿಂದೆ ಸಂತೋಷ ಕೂಟದ ಆಟವಿದೆ ಎಂದಿದ್ದೆವು. ಇದೇ ವಿಷಯವನ್ನು ಇಂದು ಬಿಜೆಪಿಗರು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.

ವಲಸಿಗರನ್ನು ಬಿಜೆಪಿ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದೆವು. ಈಶ್ವರಪ್ಪ ಈಗ ಹಾಗೆಯೇ ಮಾತಾಡಿದ್ದಾರೆ ಎಂದೂ ಆರೋಪಿಸಿದೆ.
'ಈಗ #BJPvsRSS ಆಟ ಶುರುವಾಗಿದೆ. ಪಂಚೆ ಪಡೆ ಗೆಲ್ಲುವುದೋ, BSY ಬ್ರಿಗೇಡ್ ಗೆಲ್ಲುವುದೋ ಕಾಲವೇ ಉತ್ತರಿಸಲಿದೆ. ಬಿಜೆಪಿಯ 'ಫಟಿಂಗ ಪಂಚೆ'ಯ ವಿರುದ್ಧ ಮಾತನಾಡಿದ್ದೇ ತಡ ರೇಣುಕಾಚಾರ್ಯರಿಗೆ 24 ಗಂಟೆಯೊಳಗೆ ನೋಟಿಸ್ ಜಾರಿಯಾಗಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಆದರೆ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು ಬಹಿರಂಗವಾಗಿಲ್ಲ, ನೋಟಿಸ್ ತೋರಿಸಿದರೆ 10 ಲಕ್ಷ ಬಹುಮಾನ ಘೋಷಿಸಿದ್ದಾರೆ ಯತ್ನಾಳ್. ಪಂಚೆ ಪಡೆಯ ಮಾತುಗಳು ಪಕ್ಷ ವಿರೋಧಿ ಎಸಿಕೊಳ್ಳುವುದಿಲ್ಲವೇ ಚುನಾವಣೆ ಮುಗಿದ ನಂತರವೂ BSY ಬ್ರಿಗೇಡ್‌ನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ನಳೀನ್ ಕುಮಾರ್ ಕಟೀಲ್? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಡಿಯರ್ ಬಿಜೆಪಿ, ನೋಟಿಸ್ ಬಹಿರಂಗಪಡಿಸಿ 10 ಲಕ್ಷ ಬಹುಮಾನ ಪಡೆಯಿರಿ. ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ BSY ಬ್ರಿಗೇಡ್ ಗೆ ಮಾತ್ರವೇ? ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಎಂಪಿ ಪ್ರತಾಪ್ ಸಿಂಹರಿಗೆ ಶಿಸ್ತುಕ್ರಮದ ನೋಟಿಸ್ ಇಲ್ಲ.
'BSY ವಿರುದ್ಧ ಅಬ್ಭರಿಸಿದ್ದ ಯತ್ನಾಳರಿಗೆ ನೋಟಿಸ್ ಇಲ್ಲ. ನಿರಾಣಿ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಹಾಗೂ BSY ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications