ಮತ್ತೊಂದು ಪಾದಯಾತ್ರೆ ಸುಳಿವು ಕೊಟ್ಟ ಕಾಂಗ್ರೆಸ್ ನಾಯಕರು!
ಬೆಂಗಳೂರು, ಜನವರಿ 24; ಕೋವಿಡ್ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ 4 ದಿನಕ್ಕೆ ಮೊಟಕುಗೊಳಿಸಿರುವ ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತೊಂದು ಪಾದಪಾತ್ರೆ ಸುಳಿವು ಕೊಟ್ಟಿದ್ದಾರೆ. ರಾಮನಗರದಲ್ಲಿ ಸ್ಥಗಿತಗೊಂಡಿರುವ ಪಾದಯಾತ್ರೆಯನ್ನು ಸಹ ಕಾಂಗ್ರೆಸ್ ಪೂರ್ಣಗೊಳಿಸಲಿದೆ.
ಸೋಮವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮೇಕೆದಾಟು ಪಾದಯಾತ್ರೆ ಮಾದರಿಯಲ್ಲಿ ಹೋರಾಟ ಮಾಡಲಾಗುತ್ತದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಯುತ್ತಿದೆ" ಎಂದರು.
"ಮಹದಾಯಿ ಯೋಜನೆ ಜಾರಿಗೊಳಿಸುವ ಒತ್ತಾಯದ ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿಯೂ ಹೋರಾಟ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಸಿದ್ದರಾಮಯ್ಯ ಹೇಳಿದರು.

"ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಉದ್ದೇಶದಿಂದ ವಾರಾಂತ್ಯ ಕರ್ಫ್ಯೂ ಜಾರಿಗೆ ತರಲಾಯಿತು. ನಮ್ಮ ಪಕ್ಷದ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಬಸವರಾಜ ಬೊಮ್ಮಾಯಿ, ಆರ್. ಅಶೋಕಗೆ ಕೋವಿಡ್ ಸೋಂಕು ತಗುಲಿದ್ದು ನಮ್ಮ ಪಾದಯಾತ್ರೆಯಿಂದನಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಜನವರಿ 9ರಂದು ಮೇಕೆದಾಟುವಿನ ಸಂಗಮದಿಂದ 11 ದಿನಗಳ ಪಾದಯಾತ್ರೆ ಆರಂಭಿಸಿದ್ದರು. ಪಾದಯಾತ್ರೆ 4 ದಿನ ಪೂರ್ಣಗೊಳಿಸಿ ರಾಮನಗರ ತಲುಪಿತ್ತು.
ಆದರೆ ಕೋವಿಡ್ ಕಾರಣದಿಂದಾಗಿ ಪಾದಯಾತ್ರೆ ರಾಮನಗರದಲ್ಲಿ ಸ್ಥಗಿತಗೊಂಡಿತು. ಒಟ್ಟು 160 ಕಿ. ಮೀ. ಪಾದಯಾತ್ರೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ತಲುಪಬೇಕಿತ್ತು. ಆದರೆ ಜನವರಿ 13ರಂದು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಡಿಎಂಕೆ ಸರ್ಕಾರ ಕ್ಯಾತೆ ತೆಗೆದಿದೆ. ಮಹದಾಯಿ ಯೋಜನೆಗೆ ಗೋವಾದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಮಹಾರಾಷ್ಟ್ರದ ಶಿವಸೇನೆ, ಎನ್‌ಸಿಪಿ ಮೈತ್ರಿಕೂಟ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಎಂ. ಬಿ. ಪಾಟೀಲ್ ಹೇಳಿಕೆ; ಜಲಸಂಪನ್ಮೂಲ ಇಲಾಖೆಯ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್ ಮಹದಾಯಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. "ಮಹದಾಯಿ ಯೋಜನೆಯಲ್ಲಿ 3.9 ಟಿಎಂಸಿ ಅಡಿ ನೀರು ಸಾಕಾಗುವುದಿಲ್ಲ. ನಮಗೆ 7.5 ಟಿಎಂಸಿ ನೀರು ಸಿಗಬೇಕು. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಹೇಳಿದ್ದಾರೆ.
"ಮಹದಾಯಿ ಯೋಜನೆಯಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳ ಪ್ರಶ್ನೆ ಇದೆ. ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಖಾನಾಪುರಕ್ಕೆ 5 ಟಿಎಂಸಿಯಾದರೂ ನೀರು ಸಿಗುವಂತೆ ಆಗಬೇಕು" ಎಂದು ಒತ್ತಾಯಿಸಿದರು.
"ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅಧಿಕೃತ ನಿಲುವು ತೆಗೆದುಕೊಂಡಿದ್ದಾರೆ. ಪಕ್ಷದ ಮಟ್ಟದಲ್ಲಿ ಎಲ್ಲವನ್ನು ಚರ್ಚಿಸಲಾಗುತ್ತದೆ" ಎಂದು ಎಂ. ಬಿ. ಪಾಟೀಲ್ ಹೇಳಿದರು.
"ಗೋವಾ ರಾಜ್ಯದವರು ಮಹದಾಯಿ ಯೋಜನೆಗೆ ರಾಜಕೀಯ ಕಾರಣಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ. ತಮ್ಮ ವಿರೋಧದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಅವರಿಗೂ ಗೊತ್ತಿದೆ. ರಾಜ್ಯದ ನಿಲುವುಗಳ ರೀತಿ ಪಕ್ಷದ ನಿಲುವುಗಳಂತೆಯೇ ಬೇರೆ-ಬೇರೆಯಾಗಿರುತ್ತದೆ. ಮಹದಾಯಿ ನೀರು ಪಡೆಯಲು ಗೋವಾ, ಮಹಾರಾಷ್ಟ್ರದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ" ಎಂದು ಎಂ. ಬಿ. ಪಾಟೀಲ್ ಸ್ಪಷ್ಟಪಡಿಸಿದರು.
"ಗೋವಾದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಆದರೆ ನೀರಿನ ವಿಚಾರದಲ್ಲಿ ನಾವು ಯಾವುದೇ ರೀತಿಯಲ್ಲೂ ರಾಜಿ, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ" ಎಂದು ಎಂ. ಬಿ. ಪಾಟೀಲ್ ತಿಳಿಸಿದರು.











Click it and Unblock the Notifications