'ಇಂಡಿಯಾ'ಗಾಗಿ ಕಾಂಗ್ರೆಸ್ ಸರ್ಕಾರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಿದೆ: ಬಿಜೆಪಿ
ಬೆಂಗಳೂರು, ನವೆಂಬರ್ 01: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇದೆ. ಮೊನ್ನೆಯಷ್ಟೇ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ರಾಜ್ಯಕ್ಕೆ ಮತ್ತೆ ನಿರ್ದೇಶಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಸರ್ಕಾರದ ಅಸಮರ್ಥತೆಯಿಂದ ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದೆ.
ಬುಧವಾರ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿರುವ ಕರ್ನಾಟಕ ಬಿಜೆಪಿಯು 'ಕರ್ನಾಟಕ ವಿರೋಧಿ ಕಾಂಗ್ರೆಸ್ ಸರ್ಕಾರದ ಅಸಮರ್ಥ ನಡೆಯಿಂದಾಗಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ ಎಂದು ಕಾವೇರಿ ನೀರು ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದೆ.

I.N.D.I. A ಮೈತ್ರಿಕೂಟಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕದ್ದು ಮುಚ್ಚಿ ಕಳ್ಳತನದಿಂದ ಕಾವೇರಿ ನೀರು ಹರಿಬಿಡುತ್ತಿರುವುದರಿಂದ ಕೃಷ್ಣ ರಾಜ್ ಸಾಗರ್ (KRS) ನಲ್ಲಿ ಕಾವೇರಿ ನೀರು ಖಾಲಿ ಆಗಿದೆ ಎಂದು ಗಂಭೀರ ಆರೋಪ ಮಾಡಿದೆ.
ಬೆಳೆ ಬೆಳೆಯದಂತೆ ದಿಗ್ಭಂಧನ: ಬಿಜೆಪಿ ಕಿಡಿ
ಕರ್ನಾಟಕದ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ದಿಗ್ಭಂಧನ ಹಾಕಿರುವ ತುಘಲಕ್ ಸರ್ಕಾರ ಬೆಂಗಳೂರಿಗರ ಕುಡಿಯುವ ನೀರಿಗೂ ಸಂಕಷ್ಟ ತಂದಿಟ್ಟಿದೆ ಎಂದು, ಬರಗಾಲ, ಕುಡಿಯುವ ನೀರಿನ ತಾತ್ವಾರ ಕುರಿತು ಬಿಜೆಪಿ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ಕರ್ನಾಟಕದಲ್ಲಿ ಬರಗಾಲ ತಾಂಡವವಾಡುತ್ತಿದೆ. ಈ ಸಂಬಂಧ ಇದೇ ಸರ್ಕಾರ 196 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿದೆ. ಇತ್ತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿರ್ವಹಣಾ ಸಮಿತಿಗಳು ಪ್ರತಿ ಬಾರಿಯು 15 ದಿನಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸುತ್ತಲೇ ಇವೆ. ಇದೆಲ್ಲ ನೋಡಿದರೆ ಸುಪ್ರಿಂ ಕೋರ್ಟ್‌ನಲ್ಲಿ, ಪ್ರಾಧಿಕಾರ-ಸಮಿತಿಗಳ ಮುಂದೆ ಕರ್ನಾಟಕ ಸೂಕ್ತ ವಾದ ಮಾಡಿಲ್ಲ ಎಂದು ಈ ಹಿಂದೆ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದವು.
ಹಿಂಗಾರು ಬಿತ್ತನೆಗೆ ನೀರಿಲ್ಲ
ಇದೀಗ ರಾಜ್ಯದಲ್ಲಿ ಹಿಂಗಾರು ಮಳೆ ಸಹ ನಿರೀಕ್ಷೆಯಂತೆ ಆಗಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಬಹುತೇಕ ಜಮೀನುಗಳಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಯೇ ಆಗಿಲ್ಲ. ಇತ್ತ ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ರೈತರ ತೊಂದರೆ ಅನುಭವಿಸುತ್ತಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟ 100 ಅಡಿಗಿಂತಲೂ ಕಡಿಮೆ ಆಗಿದೆ. ಒಳಹರಿವು ಇಲ್ಲದಾಗಿದೆ. ಇದೇ ವೇಳೆ ತಮಿಳುನಾಡಿಗೆ ಇದೇ ನವೆಂಬರ್ 1ರಿಂದ ಪ್ರತಿ ದಿನ 2,600 ಕ್ಯೂಸೆಕ್ಸ್ ನಂತೆ 15 ದಿನಗಳ ಕಾಲ ನೀರುಹರಿಸುವಂತೆ ಆದೇಶಿಸಲಾಗಿದೆ. ಇದು ತೀವ್ರ ಬರಕ್ಕೆ ತುತ್ತಾಗಿರುವ ಕಾವೇರಿ ಜಲಾನಯನ ಪ್ರದೇಶಗಳ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.












Click it and Unblock the Notifications