ನಾಪತ್ತೆಯಾಗಿರುವ ಬಿಜೆಪಿ ನಾಯಕರ ಪಟ್ಟಿ ನೀಡಿದ ಕಾಂಗ್ರೆಸ್: ಕುತೂಹಲ ಮೂಡಿಸಿದ ಟ್ವೀಟ್
ಬೆಂಗಳೂರು, ಆಗಸ್ಟ್ 21: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡದೇ ಇರುವುದು ಕಾಂಗ್ರೆಸ್‌ನ ವ್ಯಂಗ್ಯಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, ಕರ್ನಾಟಕದಲ್ಲಿ ಬಿಜೆಪಿ ಈಗ ಅನಾಥ ಶಿಶು ಎಂದು ಟೀಕಿಸಿದೆ.
'ಬಿಜೆಪಿ ಈಗ ಅನಾಥ ಶಿಶು. ಪಕ್ಷದಲ್ಲಿ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಪಕ್ಷವನ್ನು ಮುನ್ನಡೆಸಲಾಗದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ. ಹೈಕಮಾಂಡ್ ಕರ್ನಾಟಕದ ಬಿಜೆಪಿಯತ್ತ ತಿರುಗಿಯೂ ನೋಡುತ್ತಿಲ್ಲ. ವಾರಕ್ಕೊಮ್ಮೆ ಬರುತ್ತಿದ್ದ ಉಸ್ತುವಾರಿ ಅರುಣ್ ಸಿಂಗ್ ನಾಪತ್ತೆ. ತಿಂಗಳಿಗೊಮ್ಮೆ ಬರುತ್ತಿದ್ದ ಜೆಪಿ ನಡ್ಡಾ ನಾಪತ್ತೆ. ಚುನಾವಣೆಗಾಗಿ ಬರುತ್ತಿದ್ದ ಅಮಿತ್ ಶಾ, ಮೋದಿಯೂ ಕಣ್ಮರೆಯಾಗಿದ್ದಾರೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ಅಧಿಕಾರವಿದ್ದಾಗ ಇವರೆಲ್ಲಾ ಎಟಿಎಂನಲ್ಲಿನ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದರಾ? ಅಧಿಕಾರವಿಲ್ಲದ ರಾಜ್ಯ ಬಿಜೆಪಿ ಈಗ ಹೈಕಮಾಂಡ್ ನಾಯಕರಿಗೆ ಹಾಲು ಕರೆಯದ ಗೊಡ್ಡೆಮ್ಮೆಯಂತಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಮುಖಂಡರನ್ನು ಉಚ್ಛಾಟಿಸುವ ಮೂಲಕ ಬಿಜೆಪಿ ತನ್ನ ಆಂತರಿಕ ಕಲಹ ಇದೆ ಎಂಬ ಸರ್ಟಿಫಿಕೇಟಿಗೆ ಅಧಿಕೃತವಾಗಿ ಮುದ್ರೆ ಒತ್ತಿದೆ. ಇದೇ ರೀತಿ ಪ್ರಭು ಚೌವಾನ್‌ರಿಗೆ ಕಾಟ ಕೊಡುತ್ತಿರುವ ಭಗವಂತ ಖೂಬಾರನ್ನು, ಬೊಮ್ಮಾಯಿಯವರ ಮೇಲೆ ಆರೋಪಿಸಿದ್ದ ಪ್ರತಾಪ್ ಸಿಂಹರನ್ನು, ಬಿಎಸ್‌ವೈ ಮೇಲೆ ಕಿಡಿ ಕಾರಿದ ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ?' ಎಂದು ಕೆಪಿಸಿಸಿ ಕೇಳಿದೆ.
'ಬಿಜೆಪಿ ಶಾಸಕರು ತಮ್ಮ ಗೋಳು ಹೇಳಿಕೊಳ್ಳಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ದೂರು ನೀಡಲು ಒಬ್ಬ ಸಮರ್ಥ ಅಧ್ಯಕ್ಷನಿಲ್ಲ. ಎತ್ತಿ ಮೂಲೆಗೆಸೆಯಲ್ಪಟ್ಟಿದ್ದ ಬಿಎಸ್‌ವೈ ಅವರೇ ಶಾಸಕರ ಸಭೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಅಸಮಾದಾನಿತರ ನೋವು ಕೇಳಲು ನಳೀನ್ ಕುಮಾರ್ ಕಟೀಲ್ ಅವರಿಗೆ ಸಮರ್ಥ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ? ರಾಜ್ಯದ ಬಿಜೆಪಿಯ ಬಗ್ಗೆ ಹೈಕಮಾಂಡಿಗೆ ಈ ಮಟ್ಟಿನ ತಾತ್ಸಾರ, ತಿರಸ್ಕಾರ ಇರುವುದೇಕೆ?ಬಹುಶಃ ಅಮಿತ್ ಶಾ ಅವರಿಗೆ ಕರ್ನಾಟಕದ ಬಿಜೆಪಿ ಘಟಕವನ್ನು ವಿಸರ್ಜಿಸಿಬಿಡುವ ಚಿಂತನೆ ಇರಬಹುದೇನೋ' ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ.
ಯಶವಂತಪುರ ಶಾಸಕ ಎಚ್‌ಟಿ ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. ಇದು ಬಿಜೆಪಿ ನಾಯಕರನ್ನು ಕಂಗೆಡಿಸಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವ ಬಿಜೆಪಿಗೆ ಹಿನ್ನೆಡೆಯೆಂದೇ ಹೇಳಬಹುದು.












Click it and Unblock the Notifications