ಇಷ್ಟಕ್ಕೂ ಗೋಡ್ಸೆವಾದಿಗಳಿಗೆ ಗಾಂಧಿ ಪ್ರತಿಮೆ ಬಳಿ ಏನು ಕೆಲಸ?
ಬೆಂಗಳೂರು, ಸೆಪ್ಟೆಂಬರ್ 27: ಕಾವೇರಿ ನೀರಿಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಈ ಪ್ರತಿಭಟನೆ ಕುರಿತು ಕಾಂಗ್ರೆಸ್ ಕಿಡಿಕಾರಿದ್ದು, ಇಷ್ಟಕ್ಕೂ ಗೋಡ್ಸೆವಾದಿಗಳಿಗೆ ಗಾಂಧಿ ಪ್ರತಿಮೆ ಬಳಿ ಏನು ಕೆಲಸ? ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸುತ್ತಿರುವುದು ಯಾರ ವಿರುದ್ಧ? ಎಂದು ಪ್ರಶ್ನಿಸಿದ್ದು, ಚುನಾವಣೆಗೆ ಮೂರು ದಿನಕ್ಕೊಮ್ಮೆ ಕರ್ನಾಟಕಕ್ಕೆ ಬಂದು ರೋಡ್ ಶೋ ಮಾಡಿ, ಕಾವೇರಿ ವಿಚಾರಕ್ಕೆ ಮಾತ್ರ ಕಣ್ಮುಚ್ಚಿ, ಬಾಯ್ಮುಚ್ಚಿ ಕುಳಿತಿರುವ ಮೋದಿ ವಿರುದ್ಧವೇ? ಎಂದು ಪ್ರಶ್ನಿಸಿ ಕುಟುಕಿದೆ.

ಕರ್ನಾಟಕಕ್ಕೆ ಅನ್ಯಾಯವಾಗುವ ರೀತಿ ನೀರು ಬಿಡುಗಡೆ ಮಾಡಲು ಹೇಳಿದ ಕಾವೇರಿ ನಿರ್ವಹಣಾ ಪ್ರಧಿಕಾರದ ವಿರುದ್ಧವೇ? ಕಾವೇರಿಯ ವಸ್ತು ಸ್ಥಿತಿ ಅರಿಯಲು ತಜ್ಞರ ಸಮಿತಿಯನ್ನು ಕಳಿಸದೆ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಸರ್ಕಾರದ ವಿರುದ್ಧವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ಸರಕಾರ: ಎಚ್.ಡಿ.ಕುಮಾರಸ್ವಾಮಿ
ಇನ್ನೂ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡಿ,
ನಾಡಿಗೆ ದ್ರೋಹ ಬಗೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಮೈತ್ರಿ ಸರಕಾರ ಇದ್ದಾಗ ಉತ್ತಮ ಆಡಳಿತ ನೀಡಿದ್ದನ್ನು ನೆನಪಿಸಿಕೊಂಡರು.
ನಮ್ಮ ನಾಡಿನ ರೈತರ ಕುರಿತು ಈ ಸರಕಾರ ನಿರ್ಲಕ್ಷ್ಯ ತೋರಿದೆ. ಸರಕಾರ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಎಡವಿದೆ. ಇದು ಖಂಡನೀಯ ಎಂದು ತಿಳಿಸಿದರು. ಹಿಂದಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರಕಾರದ ನಮ್ಮ ತೀರ್ಮಾನದಿಂದ ಕರ್ನಾಟಕಕ್ಕೆ ಹೆಚ್ಚು ನೀರು ಲಭಿಸಿದೆ ಎಂದು ತಿಳಿಸಿದರು.
ನೀರಿನ ಲಭ್ಯತೆಗೆ ಅನುಗುಣವಾಗಿ ಕಾವೇರಿ ನೀರು ಬಿಡುವ ಕುರಿತು ನಿರ್ಧಾರ ಆಗಬೇಕು. ಪ್ರಾಧಿಕಾರದ ಮುಂದೆ ವಾಸ್ತವಾಂಶಗಳನ್ನು ಇಟ್ಟು ಎರಡೂ ರಾಜ್ಯಗಳಿಗೆ ಅನ್ಯಾಯ ಆಗದಂತೆ ಪರಿಹಾರ ಲಭಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಣ್ಣತನವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಜವಾಬ್ದಾರಿಯಲ್ಲಿ ಸರಕಾರ ವಿಫಲವಾಗಿದೆ ಎಂದು ನುಡಿದರು. ಇದು ರೈತರ ಬದುಕಿನ ಪ್ರಶ್ನೆ ಎಂದು ತಿಳಿಸಿದರು.
ಸರ್ವಪಕ್ಷ ಸಭೆಯ ಸಲಹೆ ಕಡೆಗಣನೆ: ಡಿ.ವಿ.ಸದಾನಂದಗೌಡ
ಈ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಸರ್ವಪಕ್ಷ ಸಭೆಯ ಸಲಹೆಗಳನ್ನು ರಾಜ್ಯ ಸರಕಾರ ಪಾಲಿಸದೆ ಕಡೆಗಣಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಕಾನೂನು ತಂಡಕ್ಕೆ ಸರಿಯಾದ ಮಾಹಿತಿ ಕೊಡುತ್ತಿಲ್ಲವೇ? ಅಥವಾ ಕಾನೂನು ಹೋರಾಟ ತಂಡವು ಸರಿಯಾಗಿ ಪ್ರತಿಪಾದನೆ ಮಾಡುತ್ತಿಲ್ಲವೇ? ಇಲ್ಲವಾದರೆ ಇಂಥ ಕೆಟ್ಟ ತೀರ್ಪು ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರವು ಇನ್ನಾದರೂ ಎಚ್ಚತ್ತುಕೊಳ್ಳಲಿ. ಜನರ ಜೀವನದಲ್ಲಿ ಚೆಲ್ಲಾಟ ಆಡದಿರಿ. ಜನಜೀವನದಲ್ಲಿ ರಾಜಕಾರಣವನ್ನು ಬೆರೆಸದಿರಿ ಎಂದು ಅವರು ಎಚ್ಚರಿಕೆ ನೀಡಿದರು. ಬೆಂಗಳೂರಿನಂಥ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆದರೆ, ಅದರಿಂದ ರಾಜ್ಯ ಮಾತ್ರವಲ್ಲದೆ ದೇಶಕ್ಕೇ ತೊಂದರೆ ಆಗಲಿದೆ. ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.












Click it and Unblock the Notifications