ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು! ಬಿಜೆಪಿಯಲ್ಲಿ ಕಬಡ್ಡಿ ರಾಜಕಾರಣ
ಕರ್ನಾಟಕ ಬಿಜೆಪಿ ಒಡೆದ ಮನೆಯಾಗಿದ್ದು ಎರಡು ಬಣಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ರಾಜ್ಯದಲ್ಲಿ ಬಿಜೆಪಿ ಅನ್ನುವುದು ಹೆಸರಿಗಷ್ಟೇ ಇದ್ದು, ಕೆಜೆಪಿ ಹಿಡಿತ ಜೋರಾಗಿದೆ ಎಂದು ಹೇಳಿದೆ.
ರಾಜ್ಯ ಬಿಜೆಪಿ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಅಸಮಾಧಾನ ಇದೆ ಎಂದು ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ. ಹೈಕಮಾಂಡ್ ಕೂಡ ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಿದೆ.

ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು ಎಂದಿರುವ ಕಾಂಗ್ರೆಸ್, ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ, ಸಂತೋಷ ಕೂಟ vs ಬಿಎಸ್ ಯಡಿಯೂರಪ್ಪ ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಬಿಎಸ್‌ವೈ ಕೂಟದ ಮೇಲುಗೈ! ಆಗುತ್ತದೆ ಎಂದು ಹೇಳಿದೆ.
ಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್2 ಎಂದು ಸ್ವತಃ ಬಿಜೆಪಿ ನಾಯಕರೇ ರೊಚ್ಚಿಗೆದ್ದಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದು, ಬಿಎಸ್‌ವೈ ಬೆಂಬಲಿಗರಿಗೆ ಬಿಜೆಪಿಯಲ್ಲಿ ಅಧಿಕಾರ ಸಿಕ್ಕಿದೆ ಎಂದು ಹೇಳಿದೆ.
ಬಿಎಸ್‌ವೈ ವಿರೋಧಿಗಳು ಮೂಲೆಗುಂಪು
ಹೈಕಮಾಂಡ್ ನಾಯಕರು ಕರ್ನಾಟಕ ಬಿಜೆಪಿ ಪಕ್ಷವನ್ನು ನಿವಾಳಿಸಿ ಬಿಸಾಡಿದ್ದಾರೆ, ಪದಾಧಿಕಾರಿಗಳ ನೇಮಕದಲ್ಲಿ ಹಿರಿಯರನ್ನು, ಬಿಎಸ್ ಯಡಿಯೂರಪ್ಪ ವಿರೋಧಿ ಬಣದವರನ್ನು ಮೂಲೆಗುಂಪು ಮಾಡಿ ಕೆಜೆಪಿಯನ್ನು ರಚಿಸಿದ್ದಾರೆ ಎಂದು ಹೇಳಿದೆ.
ವಿರೋಧ ಪಕ್ಷದ ನಾಯಕ,ರಾಜ್ಯಾಧ್ಯಕ್ಷ ನೇಮಕಕ್ಕೆ ಇದ್ದ ವಿರೋಧದ ಬೆಂಕಿ ಆರುವ ಮುನ್ನವೇ ಪದಾಧಿಕಾರಿಗಳ ನೇಮಕದ ಮತ್ತೊಂದು ಬೆಂಕಿ ಬಿದ್ದಿದ್ದು, ಬಿಜೆಪಿ ಉರಿದು ಭಸ್ಮವಾಗುವುದೊಂದೆ ಬಾಕಿ ಇದೆ ಎಂದು ಹೇಳಿದೆ.
ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು!
— Karnataka Congress (@INCKarnataka) December 25, 2023
ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ,
ಸಂತೋಷ ಕೂಟ vs BSY ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ BSY ಕೂಟದ ಮೇಲುಗೈ!
ಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್2 ಎಂದು ಸ್ವತಃ ಬಿಜೆಪಿ ನಾಯಕರೇ…
ಬಿಜೆಪಿ ಷಡ್ಯಂತ್ರ
ಇತ್ತೀಚಿನ ಬಿಜೆಪಿಗರ ಪ್ರಚೋದನಾತ್ಮಕ ಹೇಳಿಕೆಗಳನ್ನು ಗಮನಿಸಿದರೆ ಲೋಕಸಭೆ ಚುನಾವಣೆಗೆ ಬಿಜೆಪಿ ಕೋಮು ಸಂಘರ್ಷದ ಮೂಲಕ ನೆಲ ಹದ ಮಾಡಿಕೊಳ್ಳಲು ಷಡ್ಯಂತ್ರ ರೂಪಿಸಿದಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಮ್ಮ ಸರ್ಕಾರ ಅಂತಹ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ, ಹದ್ದು ಮೀರಿದರೆ ಮುಲಾಜಿಲ್ಲದೆ ಕಡಿವಾಣ ಹಾಕಲಾಗುವುದು ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ. ಹಿಜಾಬ್ ನಿಷೇಧ ವಾಪಸ್ ಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನಂತರ ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ.












Click it and Unblock the Notifications