ಹೋರಾಟಗಾರರ ತ್ಯಾಗದಿಂದ ನಿಜಾಮರ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ...
ಕಲಬುರಗಿ: ಹೋರಾಟಗಾರರ ತ್ಯಾಗದಿಂದ ನಿಜಾಮರ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ವಿಮೋಚನೆಗೆ ರಣಕಹಳೆ ಮೊಳಗಿತ್ತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕಲ್ಯಾಣ ಕರ್ನಾಟಕ ವಿಮೋಚನೆ ಹೋರಾಟವನ್ನು ಈ ಮೂಲಕ ಸಿಎಂ ಸಿದ್ದರಾಮಯ್ಯ ನೆನೆದರು, ಕಲಬುರಗಿಯಲ್ಲಿ ನೆರವೇರಿದೆ ಕಲ್ಯಾಣ ಕರ್ನಾಟಕ ದಿನಾಚರಣೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಿನ್ನೆಲೆಯಲ್ಲಿ, ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಕಲ್ಯಾಣ ಕರ್ನಾಟಕ ವಿಮೋಚನೆ ಅಮೃತ ಮಹೋತ್ಸವ & ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ತ ಜನತೆಗೆ ಸಿಎಂ ಹೃತ್ಪೂರ್ವಕ ಶುಭಾಶಯ ಕೋರಿದರು.

ಅಭಿವೃದ್ಧಿ ಸಂಕಲ್ಪ ಇನ್ನಷ್ಟು ಬಲಪಡಿಸಿದೆ
ಹಾಗೇ ಈ ವೇಳೆ ಅಭಿವೃದ್ಧಿಯ ಮಾತನ್ನು ಪುನರ್ ಪ್ರಸ್ತಾಪ ಮಾಡಿದ ಸಿಎಂ, ಇಂತಹ ವಿಶೇಷ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಧನ್ಯತೆ ಭಾವ ಮೂಡಿಸಿದೆ. ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಸಂಕಲ್ಪವನ್ನೂ ಇನ್ನಷ್ಟು ಬಲಪಡಿಸಿದೆ ಎಂದರು. ಹಾಗೇ ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟವನ್ನು ಸಿಎಂ ಮೆಲುಕು ಹಾಕಿದರು.
ಕಲ್ಯಾಣ ಕರ್ನಾಟಕ ವಿಮೋಚನೆ ಹೋರಾಟ
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ. ರಮಾನಂದ ತೀರ್ಥರೊಂದಿಗೆ ಅಪ್ಪಾರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಸೇರಿ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನೆ ಹೊಂದಬೇಕಾದ್ರೆ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಆ ಸಂದರ್ಭದಲ್ಲಿ ಸರ್ವಶ್ರೀ ಸರದಾರ ಶರಣಗೌಡ ಇನಾಂದಾರ, ರಾಜಾ ವೆಂಕಟಪ್ಪ ನಾಯಕ, ದತ್ತಾತ್ರೇಯ ಅವರಾದಿ, ಅಳವಂಡಿ ಶಿವಮೂರ್ತಿಸ್ವಾಮಿ, ಮಟಮಾರಿ ನಾಗಪ್ಪಾ, ನಾರಾಯಣರಾವ ಕಾನಿಹಾಳ, ರಾಮಚಂದ್ರ ವೀರಪ್ಪ, ಎ.ವಿ. ಪಾಟೀಲ್, ಆರ್.ವಿ. ಬಿಡ್ಡಪ್ಪ, ಹಕ್ಕಿಕತರಾವ್ ಚಿಟಗುಪ್ಪಕರ, ಚಂದ್ರಶೇಖರ್ ಪಾಟೀಲ್, ರಾಮಾಚಾರ, ಡಾ.ಚರ್ಚಿಹಾಳ ಮಠ, ಅಮರಸಿಂಹ ರಾಠೋಡ ಸೇರಿದಂತೆ ಲಕ್ಷಾಂತರ ಹೋರಾಟಗಾರರು ನಿಜಾಮನ ವಿರುದ್ದ ಸೆಡ್ಡು ಹೊಡೆದು ನಿಂತರು ಎಂದು ಹೋರಾಟಗಾರರನ್ನು ಸಿಎಂ ನೆನಪು ಮಾಡಿಕೊಂಡರು.

ಬಸವಣ್ಣನ ನಾಡಿಗೆ ಸಿಎಂ ನಮನ
ಸ್ವಾಮಿ ರಮಾನಂದ ತೀರ್ಥರು & ಅಸಂಖ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪ ಶಕ್ತಿಯಿಂದ ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ. ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ಹೊಂದಿದ ಪ್ರದೇಶ ಇದಾಗಿದೆ ಎಂದರು.
ಖರ್ಗೆ ನಡೆ ಬಗ್ಗೆ ಸಿಎಂ ಹೆಮ್ಮೆ
ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥವಾದ ಕವಿರಾಜ ಮಾರ್ಗ ನೀಡಿದ ಅಮೋಘವರ್ಷ ನೃಪತುಂಗನ ನಾಡು ಇದಾಗಿದೆ. ಸೂಫಿ-ಸಂತರ ಈ ಬೀಡು, ಕೋಮು ಸೌಹಾರ್ದತೆಗೆ ಹೆಸರುವಾಸಿ. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿಗಳಾದ ಮಾಜಿ ಕೇಂದ್ರ ಸಚಿವರಾಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಸಿಎಂ ದಿ.ಎನ್. ಧರಂಸಿಂಗ್ ಅವರ ಅವಿರತ ಪ್ರಯತ್ನದಿಂದಾಗಿ ಕಲಂ 371ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಸಿಎಂ ನೆನಪು ಮಾಡಿಕೊಂಡರು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ
ಸಂವಿಧಾನದಲ್ಲಿ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. 2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಹೊಸ ವೇಗ ನೀಡುವ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡುವ ಮೂಲಕ ಶತಮಾನಗಳಿಂದ ಹಿಂದುಳಿದ ಈ ಭಾಗದ ಜನರ ಬದುಕಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು ಎಂದರು ಸಿಎಂ.
ಗ್ಯಾರಂಟಿ ಯೋಜನೆಗಳ ಪ್ರಸ್ತಾಪ
ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ & ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶವನ್ನ ಅಕ್ಷರಶಃ ಅಳವಡಿಸಿಕೊಂಡ ನಮ್ಮ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ದಿನವೇ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಾತ್ವಿಕ ಅನುಮೋದನೆ ನೀಡಿ 100 ದಿನ ಅವಧಿಯಲ್ಲಿ ಪ್ರಮುಖ 4 ಗ್ಯಾರಂಟಿ ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆರ್ಥಿಕತೆ ಪಾಠ ಹೇಳಿದ ಸಿಎಂ
ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಸರಮಾಲೆಯಿಂದ ತತ್ತರಿಸಿದ ನಾಡಿನ ಜನತೆಗೆ ನೇರ ಹಣ ವರ್ಗಾವಣೆ ಮಾಡುವ Univarsal Basic Income ಎಂಬ ಹೊಸ ಪರಿಕಲ್ಪನೆಯ ಅಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯು ಉತ್ತಮಗೊಳ್ಳುತ್ತದೆ. ಇದನ್ನು ಈಗಾಗಲೇ ಜಾರಿಗೊಂಡಿರುವ ನಮ್ಮ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಾರಿಗೆ ನಿಗಮಕ್ಕೆ ಗ್ಯಾರಂಟಿ ಶಕ್ತಿ
ರಾಜ್ಯದಾದ್ಯಂತ 4 ಸಾರಿಗೆ ನಿಗಮದ ಬಸ್ಸುಗಳಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ & ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕ ಸರ್ಕಾರವು 4,000 ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಪ್ಟೆಂಬರ್ 5ರ ವರೆಗೆ ದಿನನಿತ್ಯ 6.75 ಲಕ್ಷದಂತೆ 587.36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಪ್ರಯಾಣದ ವೆಚ್ಚದ ಪೈಕಿ 93.48 ಕೋಟಿ ರೂ. ನಿಗಮಕ್ಕೆ ಸರ್ಕಾರ ಭರಿಸಿದೆ. ಇದರಿಂದ ಕೆಕೆಆರ್‌ಟಿಸಿ ನಿಗಮಕ್ಕೂ ಆರ್ಥಿಕ ಶಕ್ತಿ ಬಂದಿದೆ ಎಂದಿದ್ದಾರೆ ಸಿಎಂ.
ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂಪಾಯಿ ಸೌಲಭ್ಯ ಲಭಿಸಲಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗೆ ಸರ್ವೋದಯ ಸಮಾಜ ನಿರ್ಮಾಣಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಜಾತಿ-ಧರ್ಮ ರಹಿತವಾದ ಸರ್ವ ಜನಾಂಗದ ಅಭಿವೃದ್ಧಿಯೇ ನಮ್ಮ ಸರ್ಕಾರದ ಧ್ಯೇಯವಾಗಿದ್ದು, ಇದುವೇ ಕರ್ನಾಟಕ ಮಾದರಿ ಆಡಳಿತದ ಪರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
-
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಇಂದಿನಿಂದ SSLC ಪರೀಕ್ಷೆ: 8.66 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಹಾರೈಕೆ; ಆತಂಕಬೇಡ ಎಂದ ಸರ್ಕಾರ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ












Click it and Unblock the Notifications