ಪತ್ರಕರ್ತರ ಕುಟುಂಬಕ್ಕೆ ವಿಶೇಷ ಸವಲತ್ತು: ಸಿದ್ದರಾಮಯ್ಯ ಸಿಹಿಸುದ್ದಿ
ಸಿಎಂ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದ್ದಾರೆ. ಪತ್ರಕರ್ತರಿಗೆ ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೂ ವಿಶೇಷ ಸವಲತ್ತು ನೀಡುವ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರಿನಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಅವರು ಪತ್ರಕರ್ತರಿಗೆ ವಿಶೇಷ ಭರವಸೆಯೊಂದನ್ನು ನೀಡಿದ್ದಾರೆ.
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಪತ್ರಕರ್ತರ ಮಾಸಾಶನವನ್ನೂ 3 ಸಾವಿರದಿಂದ 12 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ. ವಸ್ತುಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹೆಗಳ ಪತ್ರಿಕೋದ್ಯಮ ಬಹಳ ಅಪಾಯಕಾರಿ. ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ ಎಂದು ಕಿವಿಮಾತು ಹೇಳಿದ್ದಾರೆ.
ಧ್ವನಿ ಇಲ್ಲದವರ ಪರವಾಗಿ ಪತ್ರಿಕೆಗಳು ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೀಳು ಎಂಬ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಢ್ಯದ ಸುದ್ದಿಗಳನ್ನು, ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬಾರದು ಎಂದು ಸಲಹೆ ಕೊಟ್ಟಿದ್ದಾರೆ.

ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಇದು ಅವಕಾಶ, ಸವಾಲು ಎರಡೂ ಆಗಿದೆ. ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಆಗ ಹಕ್ಕು-ಕರ್ತವ್ಯ ಎರಡೂ ಗೊತ್ತಾಗುತ್ತದೆ. ನಿಮ್ಮದು ಶಕ್ತಿಯುತ ಮಾಧ್ಯಮ. ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ. ಈ ಎಚ್ಚರಿಕೆ ಸದಾ ಇರಬೇಕು.
ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದವರು ಸಿದ್ಧಾರ್ಥ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನವನ್ನು ಸಿಎಂ ಉದ್ಘಾಟಿಸಿದರು. ಗೃಹ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾದ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 2ರಷ್ಟು ಉದ್ಯೋಗಗಳು ಕ್ರೀಡಾಪಟುಗಳಿಗೆ ಮೀಸಲು ಇಡಲಾಗುವುದು. ಪೊಲೀಸ್, ಅರಣ್ಯ ಇಲಾಖೆ ಸೇರಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಶೇ 3ರಷ್ಟು ಉದ್ಯೋಗ ಕ್ರೀಡಾಪಟುಗಳಿಗೆ ಮೀಸಲು ಇಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಲಿ, ನಾನು ಕೊಡಲು ಸಿದ್ಧನಿದ್ದೇನೆ. ಆದರೆ ಒಲಂಪಿಕ್ ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶಕ್ಕಾಗಿ ಮೆಡಲ್ ತರಬೇಕು, ಇದು ನನ್ನ ಕೋರಿಕೆ. ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯಿತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನಿಸಲಿದೆ ಎಂದಿದ್ದಾರೆ.












Click it and Unblock the Notifications