Nandini Milk: ನಂದಿನಿ ಹಾಲಿನ ದರ ಹೆಚ್ಚಳ 'ಗ್ಯಾರಂಟಿ' ಎಂದ ಸಿದ್ದರಾಮಯ್ಯ
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಶಂಕು ಸ್ಥಾಪನೆ ಬಳಿಕ ಮಾತನಾಡಿದ ಅವರು, ಹಾಲಿನ ದರ ಹೆಚ್ಚಿಸಲಾಗುವುದು, ಹೆಚ್ಚುವರಿ ಹಣವನ್ನು ರೈತರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಹಾಲಿನ ದರ ಹೆಚ್ಚಿಸುವ ಕುರಿತು ಸಭೆ ನಡೆಸಲಾಗುವದು, ಎಲ್ಲ ಸಾಧಕ ಬಾಧಕಗಳನ್ನು ಚರ್ಚೆ ಮಾಡಿದ ಬಳಿಕ ಹಾಲಿನ ದರ ಎಷ್ಟು ಹೆಚ್ಚಿಸಬೇಕು ಎಂದು ನಿರ್ಧಾರ ಮಾಡುವುದಾಗಿ ತಿಳಿಸಿದರು. ದರ ಹೆಚ್ಚಳದ ಲಾಭವನ್ನು ರೈತರಿಗೆ ನೀಡುವುದಾಗಿ ಹೇಳುವ ಮೂಲಕ ಎದುರಾಳಿಗಳ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ರೈತರ ಮಕ್ಕಳು ಎಂದು ಹೇಳಿಕೊಳ್ಳುವ ನಾಯಕರು, 3 ರೂಪಾಯಿ ಹಾಲಿನ ದರ ಹೆಚ್ಚು ಮಾಡಿದರೆ ಬಾಯಿ ಬಡಿದುಕೊಳ್ಳುತ್ತಾರೆ. ನಾವು ರೈತರ ಮಕ್ಕಳು ಎನ್ನುವ ಅವರು ರೈತರ ಮಕ್ಕಳಿಗೆ ಏನಾದರೂ ಕೊಟ್ಟಿದ್ದಾರಾ? ರೈತರಿಗೆ ಏನೂ ಮಾಡದೆ ನಾವು ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಒಕ್ಕಲಿಗ ನಾಯಕರಿಗೆ ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ಆಗಿರಲಿಲ್ಲ, ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು. ಮಾಗಡಿಯ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡಲಿದೆ. ಶಾಸಕ ಬಾಲಕೃಷ್ಣರಿಗೆ ಸಚಿವರಾಗುವ ಅರ್ಹತೆ ಇದೆ, ಆದರೆ ಸಂಪುಟದಲ್ಲಿ ಸಿಎಂ ಸೇರಿ 34 ಜನರಿಗೆ ಮಾತ್ರ ಅವಕಾಶ ಇದೆ ಎಂದು ಹೇಳಿದರು.
ಮಾಗಡಿ ಶಾಸಕ ಮಂತ್ರಿಯಾಗದೇ ಇದ್ದರೂ ಅಭಿವೃದ್ಧಿ ಕೆಲಸದಲ್ಲಿ ಮುಂದಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಈ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಾರೆ, ಹಾಗಾದರೆ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂಪಾಯಿ ಹೇಗೆ ಬಂತು ಎಂದ ಅವರು, ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.
ಬೆಂಗಳೂರು ಕಟ್ಟಿ ಬೆಳೆಸಿದ ಕೆಂಪೇಗೌಡರು ಮಾಗಡಿಯವರು. ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿದವರೇ ಅವರು, ಅವರು ಹುಟ್ಟಿ ಬೆಳೆದ ಮಾಗಡಿ ಕೂಡ ಅಭಿವೃದ್ಧಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹೆಚ್ಚುವರಿ ಹಾಲು ಕಡಿತ?
2024ರ ಜೂನ್ ತಿಂಗಳಿನಲ್ಲಿ ಹಾಲಿನ ದರವನ್ನು 2 ರೂಪಾಯಿಗಳಷ್ಟು ಹೆಚ್ಚಳ ಮಾಡಿತ್ತು. ಆದರೆ 50 ಎಂಎಲ್ ಹಾಲು ಹೆಚ್ಚಿಗೆ ನೀಡುತ್ತಿದ್ದು ಹೆಚ್ಚುವರಿ ಹಣ ಪಡೆಯುತ್ತಿರುವುದಾಗಿ ಸರ್ಕಾರ ಸ್ಪಷ್ಟನೆ ಕೊಟ್ಟಿತ್ತು. ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಹೆಚ್ಚುವರಿ ಹಾಲನ್ನು ವ್ಯರ್ಥ ಮಾಡದೆ, ಲಾಭವನ್ನು ರೈತರಿಗೆ ಕೊಡುವುದಾಗಿ ಕೆಎಂಎಫ್ ತಿಳಿಸಿತ್ತು. ಇದೀಗ ಬೆಲೆಯನ್ನು ಹೆಚ್ಚಿಸುತ್ತಾ ಅಥವಾ ಕೊಡುತ್ತಿರುವ ಹೆಚ್ಚುವರಿ ಹಾಲನ್ನು ಕಡಿತ ಮಾಡುತ್ತಾ ಎನ್ನುವುದು ಪ್ರಶ್ನೆಯಾಗಿದೆ.












Click it and Unblock the Notifications