ಸಹಿ ಸಂಗ್ರಹದ ಮೂಲಕ ಆಖಾಡಕ್ಕಿಳಿದ ರೇಣುಕಾಚಾರ್ಯ: ಟಾರ್ಗೆಟ್ ಯಾರು?
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಏನು ರಾಜಕೀಯ ಹೆಜ್ಜೆಯಿನ್ನುಡುತ್ತಾರೋ ಅದರ ಹಿಂದೆ ಯಡಿಯೂರಪ್ಪನವರ ನೆರಳು ಇರುತ್ತೆ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿಬರುವ ಮಾತು.
"ಪ್ರಶ್ನಾತೀತ ನಾಯಕನೇ ಮುಖ್ಯಮಂತ್ರಿಯಾಗಿದ್ದಾಗ, ಉಪಮುಖ್ಯಮಂತ್ರಿಯ ಹುದ್ದೆಯ ಅವಶ್ಯಕತೆ ಏತಕ್ಕೆ" ಎಂದು ಪ್ರತಿಪಾದಿಸುತ್ತಲೇ ಬರುತ್ತಿರುವ ರೇಣುಕಾಚಾರ್ಯ ಇನ್ನೊಂದು ಹೆಜ್ಜೆಯನ್ನಿಟ್ಟಿದ್ದಾರೆ.
ಬಹಿರಂಗವಾಗಿ ಹೇಳಿಕೆ ನೀಡಬಾರದು ಎನ್ನುವ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರಿಗೆ "ನನಗೆ ಬುದ್ದಿ ಹೇಳಲು ಬರಬೇಡಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದ ರೇಣುಕಾಚಾರ್ಯ ಈಗ ಸಹಿಸಂಗ್ರಹಕ್ಕೆ ಮುಂದಾಗಿದ್ದಾರೆ.
ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಲ್ಪಡುವ, ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ.ಪಿ. ರೇಣುಕಾಚಾರ್ಯ ಅವರ ಈ ನಡೆ, ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ.

ಮೂರು ಜನ ಡಿಸಿಎಂ
ಈಗಾಗಲೇ ಮೂರು ಜನ ಡಿಸಿಎಂಗಳಿದ್ದಾರೆ (ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ). ಇದು ಇಷ್ಟಕ್ಕೇ ಮುಗಿದಿಲ್ಲ. ವಾಲ್ಮೀಕಿ ಸಮುದಾಯದ ಇಬ್ಬರು ಪ್ರಮುಖ ಮುಖಂಡರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಇವರಿಗೂ ಡಿಸಿಎಂ ಹುದ್ದೆ ನೀಡಿದರೆ, ಅದು ನಗೇಪಾಟಲಿಗೆ ಗುರಿಯಾಗುವ ಸಾಧ್ಯತೆಯಿದೆ.

ವಾಲ್ಮೀಕಿ ಸಮುದಾಯದ ಇಬ್ಬರು ಮುಖಂಡರು
ವಾಲ್ಮೀಕಿ ಸಮುದಾಯದ, ಬಿಜೆಪಿಯ ಪ್ರಭಾವೀ ಮುಖಂಡ ಶ್ರೀರಾಮುಲು ಡಿಸಿಎಂ ಹುದ್ದೆಯ ಬಗ್ಗೆ ಈಗಾಗಲೇ ಮಾತನಾಡುತ್ತಿದ್ದಾರೆ. ಇನ್ನು, ಬಿಎಸ್ವೈ ಸರಕಾರ ಬರಲು ಪ್ರಮುಖ ಪಾತ್ರವಹಿಸಿದ್ದ ರಮೇಶ್ ಜಾರಕಿಹೊಳಿ ಕೂಡಾ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ, ಈ ಸಮದಾಯದ ಪೀಠಾಧಿಪತಿಗಳಿಂದಲೂ ಒತ್ತಡ ಹೇರಲಾಗುತ್ತದೆ.

ಸಹಿ ಸಂಗ್ರಹಿಸುತ್ತಿರುವ ರೇಣುಕಾಚಾರ್ಯ
ಇದನ್ನು ತಡೆಯಲು, ರೇಣುಕಾಚಾರ್ಯ, ಬಿಜೆಪಿ ಶಾಸಕರ ಮತ್ತು ಪ್ರಮುಖ ಮುಖಂಡರ ಸಹಿ ಸಂಗ್ರಹಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಕೆಲಸಕ್ಕೆ ಮುಂದಾಗಿರುವ ರೇಣುಕಾಚಾರ್ಯ ಹಲವು ಮುಖಂಡರನ್ನು ಭೇಟಿಯಾಗಿದ್ದಾರೆ ಎನ್ಜುವ ಮಾಹಿತಿಯಿದೆ. ಡಿಸಿಎಂ ಹುದ್ದೆಯನ್ನು ತೆಗೆದುಹಾಕುಲು, ಬಿಜೆಪಿ ವರಿಷ್ಠರಿಗೆ ಒತ್ತಡ ಹೇರುವ ಸಲುವಾಗಿ ರೇಣುಕಾಚಾರ್ಯ ಈ ಕೆಲಸಕ್ಕೆ ಮುಂದಾಗಿದ್ದಾರೆ.

ಯಡಿಯೂರಪ್ಪನವರ ಸರಕಾರ
ಯಡಿಯೂರಪ್ಪನವರ ಸರಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಬೇಕೋ, ಬೇಡವೋ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ರೇಣುಕಾಚಾರ್ಯ, ಬಿಜೆಪಿ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಈ ಹುದ್ದೆ ಬೇಕಾಗಿಯೇ ಇಲ್ಲ ಎಂದು ಹೆಚ್ಚಿನ ಮುಖಂಡರು (ಇದುವರೆಗೆ ಭೇಟಿಯಾದ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಉಪಚುನಾವಣೆಯಲ್ಲಿ ಬಿಜೆಪಿ ಹದಿನೈದರಲ್ಲಿ ಹನ್ನೆರಡು ಕ್ಷೇತ್ರದಲ್ಲಿ ಗೆಲುವು
ಉಪಚುನಾವಣೆಯಲ್ಲಿ ಬಿಜೆಪಿ ಹದಿನೈದರಲ್ಲಿ ಹನ್ನೆರಡು ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಈ ಗೆಲುವಿನ ಶ್ರೇಯಸ್ಸು ಮುಖ್ಯಮಂತ್ರಿಗಳಿಗೆ ಸಲ್ಲಬೇಕು ಎಂದು ಹೇಳುತ್ತಿರುವ ರೇಣುಕಾಚಾರ್ಯ, ಸಮರ್ಥ ಸಿಎಂ ಇರಬೇಕಾದರೆ, ಡಿಸಿಎಂ ಅವಶ್ಯಕತೆ ಇಲ್ಲ ಎಂದು ವಾದಿಸಿಕೊಂಡು ಬರುತ್ತಿದ್ದಾರೆ. ರೇಣುಕಾಚಾರ್ಯ ಅವರ ಈ ನಡೆ, ಮುಂದಿನ ದಿನಗಳಲ್ಲಿ ಹೇಗೆ ತಿರುವು ಪಡೆದುಕೊಳ್ಲಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications