ಕಮಲ್-ಕುಮಾರಸ್ವಾಮಿ ಭೇಟಿ: ಕಾವೇರಿ ಸೇರಿ ಹಲವು ವಿಷಯ ಚರ್ಚೆ
Recommended Video

ಬೆಂಗಳೂರು, ಜೂನ್ 04: ಮಕ್ಕಳ್ ನಿಧಿ ಮಯಂ ಪಕ್ಷದ ಸಂಸ್ಥಾಪಕ, ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಆದ ಕಮಲ್‌ಹಸನ್ ಅವರು ಕಾವೇರಿ ವಿವಾದ ಸೇರಿದಂತೆ ಹಲವು ರಾಜಕೀಯ ವಿಚಾರಗಳನ್ನು ಪರಸ್ಪರ ಚರ್ಚೆ ಮಾಡಿದ್ದಾರೆ.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಮಲ್ ಹಾಸನ್ ಅವರು ಅತ್ಯುತ್ತಮ ಕಲಾವಿದ ಜೊತೆಗೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿರುವ ರಾಜಕಾರಣಿ ಎಂದು ಹೊಗಳಿದ್ದಾರೆ.

ತಮಿಳುನಾಡು-ಕರ್ನಾಟಕ ಉತ್ತಮ ಬಾಂಧವ್ಯ ಹೊಂದಬೇಕು, ಕಾವೇರಿ ವಿವಾದ ಸೂಕ್ತ ರೀತಿಯಲ್ಲಿ ಬಗೆಹರಿಯಬೇಕು, ಎರಡೂ ರಾಜ್ಯಗಳ ನಡುವೆ ಬ್ರಾತೃತ್ವ ಭಾವ ಇರಬೇಕು ಎಂಬ ವಾದವನ್ನು ಕಮಲ್ ಹೊಂದಿದ್ದಾರೆ ಎಂದರು. ಕಾವೇರಿ ವಿವಾದ ಬಗೆಹರಿಸಲು ತಮಿಳುನಾಡು ಸರ್ಕಾರದೊಂದಿಗೆ ಮಾತನಾಡಲು ಸಿದ್ಧವಿರುವುದಾಗಿಯೂ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.
ಚರ್ಚೆಯ ವೇಳೆ ವಿವಾದಕ್ಕೆ ಈಡಾಗಿರುವ ರಜನೀಕಾಂತ್ ಅವರ 'ಕಾಲಾ' ಚಿತ್ರದ ಬಗ್ಗೆ ಮಾತನಾಡಿಲ್ಲ ಎಂದ ಅವರು, ಸಿನಿಮಾಕ್ಕಿಂತಲೂ ಗಂಭೀರವಾದ ಹಲವು ವಿಷಯಗಳನ್ನು ಇಬ್ಬರೂ ಚರ್ಚೆ ಮಾಡಿದೆವು ಎಂದರು.












Click it and Unblock the Notifications