ಡಿಕೆಶಿ ಸಿಎಂ ಆಸೆಗೆ ಅಡ್ಡಿಯಾಯ್ತು ಶಾಸಕರ ಸಂಖ್ಯಾಬಲ: ಸಿದ್ದು ಹಿಂದೆ ನಿಂತ ಉತ್ತರ ಕರ್ನಾಟಕದ ಘಟಾನುಗಟಿಗಳು- ಇನ್‌ಸೈಡ್ ಸ್ಟೋರಿ
ಬೆಂಗಳೂರು, ಮೇ 16: ಪಕ್ಷದ 135 ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನನ್ನು ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಧಿಕಾರ ನೀಡುವ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇದಾದ ಬಳಿಕವೂ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸದಾಗಿ ಚುನಾಯಿತರಾದ ಬಹುತೇಕ ಶಾಸಕರು ಅವರನ್ನೇ ತಮ್ಮ ಆಯ್ಕೆ ಎಂದು ಹೆಸರಿಸಿದ್ದಾರೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡುವುದನ್ನು ಮುಂದೂಡಿದ್ದರು. ಶಿವಕುಮಾರ್ ಅವರ ಸಹೋದರ ಮತ್ತು ಲೋಕಸಭಾ ಸಂಸದ ಡಿ ಕೆ ಸುರೇಶ್ ಅವರು ಮಲ್ಲಿಕಾರ್ಜು ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಮಂಗಳವಾರ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಕೇಂದ್ರ ನಾಯಕತ್ವವು ಶಿವಕುಮಾರ್ ಅವರ ಮನವೊಲಿಸಲು ಇನ್ನೂ ಸಾಧ್ಯವಾಗಿಲ್ಲ. ಸೋಮವಾರ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಕ್ಕಾಗಿ ಆರೋಗ್ಯದ ಕಾರಣವನ್ನು ನೀಡಿದ್ದ ಶಿವಕುಮಾರ್ ಮಂಗಳವಾರ ರಾಷ್ಟ್ರ ರಾಜಧಾನಿಗೆ ತಲುಪಿದ್ದಾರೆ.
ಖರ್ಗೆ ಅವರು ಕಳುಹಿಸಿದ ಮೂವರು ವೀಕ್ಷಕರು ಮತ್ತು ರಾಜ್ಯದ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಸೋಮವಾರ ಭೇಟಿ ಮಾಡಿದರು. ಎಐಸಿಸಿ ಸಂಘಟನೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರೊಂದಿಗೂ ವೀಕ್ಷಕರು ಸಭೆ ನಡೆಸಿದರು.
ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಶಾಸಕರ ನಡುವೆ ನಡೆಸಿದ ರಹಸ್ಯ ಮತದಾನದ ಫಲಿತಾಂಶವನ್ನು ಖರ್ಗೆ ಅವರಿಗೆ ತಿಳಿಸಿದರು.

ಸಿದ್ದರಾಮಯ್ಯಗೆ ಬಹುತೇಕರ ಬೆಂಬಲ
ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ಆಯ್ಕೆ ಎಂದು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕರು ತಮ್ಮ ಆಯ್ಕೆಯ ಒಂದು ಹೆಸರನ್ನು ಬರೆಯಲು ಹೇಳಲಾಗಿತ್ತು. ಅವರ ಆದ್ಯತೆಯ ಪ್ರಕಾರ ಒಂದಕ್ಕಿಂತ ಹೆಚ್ಚು ಹೆಸರನ್ನು ಬರೆಯಲೂ ಸಹ ಅವಕಾಶ ನೀಡಲಾಗಿತ್ತು. ಕೇವಲ 'ಹೈಕಮಾಂಡ್' ನಿರ್ಧಾರವನ್ನು ಕೈಗೊಳ್ಳಬೇಕೆಂದು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗಿತ್ತು.
ರಾಜ್ಯ ಪಕ್ಷದ ಮೂಲಗಳ ಪ್ರಕಾರ, ಶಾಸಕರ ವೈಯಕ್ತಿಕ ಅಭಿಪ್ರಾಯಗಳನ್ನು ಕೇಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವೀಕ್ಷಕರನ್ನು ಒತ್ತಾಯಿಸಿದ ನಂತರ 135 ಶಾಸಕರ ಪೈಕಿ 90 ಮಂದಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಶಿವಕುಮಾರ್ ಪರ ಇರುವ ಶಾಸಕರ ಗುಂಪು ಆಯ್ಕೆಯನ್ನು ಹೈಕಮಾಂಡ್‌ಗೆ ಬಿಟ್ಟಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆಯೊಳಗೆ ಪಕ್ಷ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. 'ವೀಕ್ಷಕರು ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ರಾಜ್ಯದ ಎಲ್ಲ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದು, ಆ ಬಳಿಕ ಕಾಂಗ್ರೆಸ್ ಅಧ್ಯಕ್ಷರು ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದರು.

ತಮ್ಮ ಬಳಿ ಸಂಖ್ಯಾಬಲವಿದೆ ಎಂಬ ವಿಶ್ವಾಸದಲ್ಲಿರುವ ಸಿದ್ದರಾಮಯ್ಯ ಸಂಜೆ ವೇಳೆಗೆ ದೆಹಲಿ ತಲುಪಿದ್ದಾರೆ. ಅವರ ಆಪ್ತ ಬೆಂಬಲಿಗರು ಎಂದು ಕರೆಯಲ್ಪಡುವ ಶಾಸಕರಾದ ಎಂ ಬಿ ಪಾಟೀಲ್, ಆರ್ ವಿ ದೇಶಪಾಂಡೆ, ಜಮೀರ್ ಅಹಮದ್, ಕೆ ಜೆ ಜಾರ್ಜ್, ಅಶೋಕ್ ಪಟ್ಟಣ ಮತ್ತು ಬೈರತಿ ಸುರೇಶ್ ಸಹ ಬೆಂಬಲ ಸೂಚಿಸಲು ದೆಹಲಿ ತಲುಪಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಬಳಿ ಸಂಖ್ಯಾಬಲ ಇಲ್ಲ ಎಂದು ಒಪ್ಪಿಕೊಂಡಿರುವ ಶಿವಕುಮಾರ್, ಪಕ್ಷ 135 ಸ್ಥಾನಗಳನ್ನು ಗೆಲ್ಲಲು ಅವರ ಶ್ರಮವೇ ಕಾರಣ ಎಂದು ಒತ್ತಿ ಹೇಳಿದರು. ಕಷ್ಟದ ಸಮಯದಲ್ಲಿ ರಾಜ್ಯ ಘಟಕದ ನಾಯಕತ್ವವನ್ನು ವಹಿಸಿಕೊಂಡಿದ್ದೇನೆ. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದರು. ಇದು ಅವರಿಗೆ ಪುರಸ್ಕಾರ ನೀಡುವ ಸಮಯವಾಗಿದೆ ಎಂದು ಸೂಚಿಸಿದರು.
'ನಾನು ಒಂಟಿ ಮನುಷ್ಯ. ನನ್ನ ಬಳಿ ಸಂಖ್ಯೆಗಳಿಲ್ಲ. ನನ್ನ ಕಡೆಯ ಸಂಖ್ಯೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಇಲ್ಲಿ ವ್ಯಕ್ತಿಗಳ ಆರಾಧನೆಗಾಗಿ ಅಲ್ಲ, ಆದರೆ ಪಕ್ಷಕ್ಕಾಗಿ ಇದ್ದೇನೆ. ನನ್ನೊಂದಿಗೆ ಪಕ್ಷದ 135 ಶಾಸಕರಿದ್ದಾರೆ. ನಾನು ಪಕ್ಷದ ರಾಜ್ಯಾಧ್ಯಕ್ಷ. ಅವರೆಲ್ಲರನ್ನು ಒಂದೇ ಸಮನಾಗಿ ನೋಡುವುದೇ ನನ್ನ ಆಶಯ' ಎಂದು ಹೇಳಿದ್ದಾರೆ.

'ನನ್ನ ಬಳಿ ಯಾವುದೇ ವೈಯಕ್ತಿಕ ಸಂಖ್ಯೆ ಇಲ್ಲ. ಸಂಖ್ಯೆ ಏನೇ ಇರಲಿ, ಅದು ಕಾಂಗ್ರೆಸ್ ಸಂಖ್ಯೆ. ಸೋನಿಯಾ ಗಾಂಧಿ ಅವರು ನನ್ನನ್ನು ನೇಮಕ ಮಾಡುವಾಗ ನಾನು ಭರವಸೆ ನೀಡಿದ್ದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದುಕೊಡುವುದು ನನ್ನ ಗುರಿಯಾಗಿತ್ತು. ಉದಯಪುರ, ರಾಯ್‌ಪುರದಲ್ಲಿ (ಎಐಸಿಸಿ ಅಧಿವೇಶನ) ನಡೆದ ಸಮಾವೇಶದಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಮತ್ತು ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸುವ ಭರವಸೆ ನೀಡಿದ್ದೇವು. ಅದನ್ನೇ ನಾವು ಮಾಡಿ ಮುಗಿಸಿದ್ದೇವೆ' ಎಂದು ಹೇಳಿದರು.
ಇತರರ ಸಂಖ್ಯಾಬಲದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ನನ್ನ ಶಕ್ತಿ 135. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ನನ್ನ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ಪಕ್ಷ 135 ಸ್ಥಾನಗಳನ್ನು ಗೆದ್ದಿದೆ ಅವರು ಹೇಳಿದರು.
'ನಾನು ಯಾವುದೇ ಹಕ್ಕು ಅಥವಾ ಯಾವುದಕ್ಕೂ ಉತ್ತರಿಸಲು ಬಯಸುವುದಿಲ್ಲ. ನಾನು ಒಂಟಿ ಮನುಷ್ಯ, ನಾನು ಒಂದು ವಿಷಯದಲ್ಲಿ ನಂಬುತ್ತೇನೆ, ಧೈರ್ಯವಿರುವ ಒಬ್ಬ ವ್ಯಕ್ತಿ ಬಹುಮತ ಪಡೆಯುತ್ತಾನೆ. ನಾನು ಅದನ್ನು ಸಾಬೀತುಪಡಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ಭವಿಷ್ಯದ ಸಮಯದಲ್ಲಿ, ಅದನ್ನು ನಾನು ಬಹಿರಂಗಪಡಿಸುತ್ತೇನೆ' ಎಂದು ಅವರು ತಿಳಿಸಿದರು.

ಸಿಎಲ್‌ಪಿ ಭಾನುವಾರ ಒಂದೇ ಸಾಲಿನ ನಿರ್ಣಯವನ್ನು ಅಂಗೀಕರಿಸಿದ್ದು, ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿದೆ ಎಂದು ಸೂಚಿಸಿದ ಡಿಕೆಶಿ, 'ನನ್ನ ನಾಯಕತ್ವದಲ್ಲಿ 135 ಶಾಸಕರು ಗೆದ್ದಿದ್ದಾರೆ. ಅವರೆಲ್ಲರೂ ಒಂದೇ ಧ್ವನಿಯಲ್ಲಿ ಈ ವಿಷಯವನ್ನು ಹೇಳಿದ್ದಾರೆ' ಎಂದು ತಿಳಿಸಿದರು
'ಗಾಂಧೀಜಿ ಒಂದು ಮಾತನ್ನು ಹೇಳಿದರು. ನೀವು ಸೋತಾಗ ಧೈರ್ಯಶಾಲಿಯಾಗಿರಿ ಮತ್ತು ನೀವು ಗೆದ್ದಾಗ ದೊಡ್ಡ ಹೃದಯದಿಂದಿರಿ. ನಮ್ಮ 15-16 ಶಾಸಕರು ಪಕ್ಷವನ್ನು ತೊರೆದಾಗ (2019 ರಲ್ಲಿ), ನಾವು ಸಮ್ಮಿಶ್ರ ಸರ್ಕಾರವನ್ನು ಹೊಂದಿದ್ದಾಗ ಮತ್ತು ಅದನ್ನು ಕಳೆದುಕೊಂಡಾಗ, ನಾನು ನನ್ನ ಹೃದಯವನ್ನು ಕಳೆದುಕೊಳ್ಳಲಿಲ್ಲ. ಧೈರ್ಯದಿಂದ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡೆ' ಎಂದು ಹೇಳಿದರು.
ಬಹುತೇಕ ಕಾಂಗ್ರೆಸ್ ಶಾಸಕರ ಬೆಂಬಲವಿದೆ ಎಂದು ಸಿದ್ದರಾಮಯ್ಯ ಪಾಳಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಮುಖ್ಯಸ್ಥರು, ಇತರರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
'ನನಗೆ ಯಾವುದೇ ಶಾಸಕರಿಲ್ಲ ಮತ್ತು ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗುತ್ತಿಲ್ಲ. ಕಾಂಗ್ರೆಸ್ ಜೊತೆ 135 ಶಾಸಕರಿದ್ದಾರೆ. ಯಾರು ಬೇಕಾದರೂ ಶಾಸಕರನ್ನು ಕರೆದುಕೊಂಡು ಹೋಗಲಿ. ನಾನು ಯಾರನ್ನೂ ನನ್ನೊಂದಿಗೆ ಕರೆದುಕೊಂಡು ಹೋಗುವುದಿಲ್ಲ. ನನಗೆ ಯಾರ ಬೆಂಬಲವೂ ಬೇಕಾಗಿಲ್ಲ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ' ಎಂದು ಅವರು ತಿಳಿಸಿದರು.
'ನೀವೆಲ್ಲರೂ ನನ್ನನ್ನು ಬಂಡೆ ಎಂದು ಕರೆದಿದ್ದೀರಿ. ಬಂಡೆಯನ್ನು ಪ್ರಾರ್ಥಿಸಬಹುದು ಅಥವಾ ನಾಶಪಡಿಸಬಹುದು ಎಂದು ನಾನು ಹೇಳಿದ್ದೇನೆ. ನೀವು ಬಂಡೆಯಿಂದ ನಿಮಗೆ ಬೇಕಾದುದನ್ನು ಮಾಡುತ್ತೀರಿ, ನೀವು ಅದನ್ನು ಮುರಿದು ಕಂಬ, ಪ್ರತಿಮೆ ಅಥವಾ ಕಲ್ಲುಗಳನ್ನು ಮಾಡಬಹುದು. ನೀವು ನನಗೆ ಏನು ಬೇಕಾದರೂ ಮಾಡಿಕೊಳ್ಳಿ, ವಿಧಾನಸೌಧದ ಮೆಟ್ಟಿಲು ಹತ್ತೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಅವರು ಯಾವ ರೀತಿಯಲ್ಲಿ ಬೇಕಾದರೂ ನನ್ನನ್ನು ಬಳಸಿಕೊಳ್ಳಲಿ' ಎಂದರು.
'ನನಗೆ ಸಮಯದ ಅರಿವಿದೆ. ನನಗೆ ತಾಳ್ಮೆ ಇದೆ. ಅದರ ವಿರುದ್ಧ ಹೋರಾಡಲು ನಾನು ಸಿದ್ಧನಿದ್ದೇನೆ. ನಾವು ನಮ್ಮ ಶಸ್ತ್ರಾಗಾರದಲ್ಲಿ ಎಲ್ಲಾ ತಂತ್ರಗಳನ್ನು ಯಶಸ್ವಿಯಾಗಿ ಬಳಸಿದ್ದೇವೆ' ಎಂದು ಅವರು ಹೇಳಿದರು.
ಗುರುವಾರದೊಳಗೆ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಸೂಚಿಸಿದ್ದರೂ, ಶಿವಕುಮಾರ್ ಅವರ ಜೊತೆ ಸಮಾಲೋಚಿಸಿದ ನಂತರವಷ್ಟೇ ಅಧಿಕೃತ ಘೋಷಣೆ ಮಾಡಲಾಗುವುದು.
224 ಸದಸ್ಯ ಬಲದ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದರೆ, ಆಡಳಿತಾರೂಢ ಬಿಜೆಪಿ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜನತಾ ದಳ (ಜಾತ್ಯತೀತ) ಕ್ರಮವಾಗಿ 66 ಮತ್ತು 19 ಸ್ಥಾನಗಳನ್ನು ಗಳಿಸಿದೆ.












Click it and Unblock the Notifications