ಸರ್ಕಾರಿ ಶಾಲೆ ದತ್ತು ಪಡೆಯದಿದ್ದರೆ ಖಾಸಗಿ ಶಾಲೆಗಳ ಶುಲ್ಕಕ್ಕೆ ಬೀಳಲಿದೆ ಕಡಿವಾಣ: ಸಿಎಂ ಡಿಕೆ.ಶಿವಕುಮಾರ್ ಖಡಕ್ ಎಚ್ಚರಿಕೆ
ನಗರಗಳಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ಒಂದನ್ನಾ ರವಾನಿಸಿದ್ದಾರೆ. ವರ್ಷಕ್ಕೆ 50,000 ರೂಪಾಯಿಗಿಂತ ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನ ದತ್ತು ಪಡೆಯಬೇಕು.
ಒಂದು ವೇಳೆ ಸರ್ಕಾರದ ಈ ಸೂಚನೆಯನ್ನ ಪಾಲಿಸದಿದ್ದರೆ, ಆಯಾ ಶಾಲೆಗಳು ವಿದ್ಯಾರ್ಥಿಗಳ ಮೇಲೆ ವಿಧಿಸುವ ಶುಲ್ಕದ ಮೇಲೆ ಕಟ್ಟುನಿಟ್ಟಿನ ಮಿತಿ ಹಾಕಲಾಗುವುದು ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯದ ಸುಧಾರಣೆಗೆ ಸರ್ಕಾರ ಕೈಗೊಳ್ಳಲಿರುವ ಹಲವು ಮಹತ್ವದ ನಿರ್ಧಾರಗಳನ್ನ ಹಂಚಿಕೊಂಡರು.
ಗ್ರಾಮೀಣ ಸರ್ಕಾರಿ ಶಾಲೆಗಳ ದತ್ತು ಕಡ್ಡಾಯ
ಗ್ರಾಮೀಣ ಭಾಗದ ಮಕ್ಕಳಿಗೂ ನಗರದಷ್ಟೇ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಹೀಗಾಗಿ ದುಬಾರಿ ಶುಲ್ಕ ಪಡೆಯುವ ಶಾಲೆಗಳು ಹಳ್ಳಿಗಳ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು, ಅಲ್ಲಿ ಕೇವಲ ಮೂಲಸೌಕರ್ಯ ಒದಗಿಸುವುದಕ್ಕಿಂತ ಹೆಚ್ಚಾಗಿ ಗುಣಮಟ್ಟದ ಬೋಧಕ ವರ್ಗವನ್ನ ನಿಯೋಜಿಸುವ ಜವಾಬ್ದಾರಿ ಹೊರಬೇಕು. "ನಮ್ಮ ಕುಟುಂಬವೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ನನ್ನ ಮಗಳಿಗೂ ಗ್ರಾಮೀಣ ಶಾಲೆಗಳನ್ನ ದತ್ತು ಪಡೆಯಲು ಸೂಚಿಸಿದ್ದೆ. ಅದರಂತೆ ಆಕೆ ಈಗಾಗಲೇ 3 ಶಾಲೆಗಳನ್ನ ದತ್ತು ಪಡೆದಿದ್ದಾಳೆ" ಎಂದು ಸಿಎಂ ಹೇಳಿದ್ದಾರೆ. ದತ್ತು ಪಡೆಯಲು ಹಿಂದೇಟು ಹಾಕುವ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಲು ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದರು.
ಸಿಎಸ್‌ಆರ್ ನಿಧಿ ನಿಗಾಗೆ ಉನ್ನತ ಮಟ್ಟದ ಸಮಿತಿ
ರಾಜ್ಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಂದ ವಾರ್ಷಿಕ ಸುಮಾರು 10,000 ಕೋಟಿ ರೂಪಾಯಿಗೂ ಅಧಿಕ ಸಿಎಸ್‌ಆರ್ ನಿಧಿ ಸಂಗ್ರಹವಾಗುತ್ತಿದೆ. ಆದರೆ, ಈ ಪೈಕಿ ಶೇ.50ರಷ್ಟು ಹಣ ಸಮರ್ಪಕವಾಗಿ ಬಳಕೆಯಾಗದೆ ದುರುಪಯೋಗವಾಗುತ್ತಿದೆ ಎಂಬ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಈ ನಿಧಿಯ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳಲು ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಗಾ ಸಮಿತಿಯನ್ನ ಶೀಘ್ರದಲ್ಲೇ ರಚಿಸಲಾಗುವುದು. ಪ್ರಮುಖವಾಗಿ ಈ ನಿಧಿಯನ್ನು ಗ್ರಾಮೀಣ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು, ನಂತರವಷ್ಟೇ ಆರೋಗ್ಯ ಹಾಗೂ ಇತರ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದು ಡಿಕೆ. ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಮೀಸಲಾತಿ
ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದೆ. ಪ್ರಸ್ತುತ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದೀಗ ಆ ಶೇ.15ರ ಮೀಸಲಾತಿಯೊಳಗೆ ಶೇ.7.5ರಷ್ಟು ಪಾಲನ್ನು ಕೇವಲ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮುಂದಿನ 100 ದಿನಗಳೊಳಗಾಗಿ ಈಗ ಇರುವ ಕಾಯ್ದೆಯನ್ನಾ ತಿದ್ದುಪಡಿ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
'ಯುವ ಸೇತು' ಉದ್ಯೋಗ ಯೋಜನೆ
ಇನ್ನೂ, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು 'ಯುವ ಸೇತು' ಎಂಬ ವಿನೂತನ ಉದ್ಯೋಗ ವಿನಿಮಯ ಕೇಂದ್ರವನ್ನ ಆರಂಭಿಸಲಾಗುತ್ತಿದೆ. ಇದರ ಮೂಲಕ ನಿರುದ್ಯೋಗಿ ಯುವಕರಿಗೆ ಅಗತ್ಯ ತರಬೇತಿ ನೀಡಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವ ಕೆಲಸವನ್ನ ಸರ್ಕಾರ ಮಾಡಲಿದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮಾನವ ಸಂಪನ್ಮೂಲ ಕೇಂದ್ರವಾಗಿದ್ದು, ಉದ್ಯೋಗಿಗಳ ಹಿತರಕ್ಷಣೆಯ ಜೊತೆಗೆ ಉದ್ಯೋಗದಾತರ ಮೇಲೂ ಆರ್ಥಿಕ ಹೊರೆ ಬೀಳದಂತೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.


Click it and Unblock the Notifications
