ನವೆಂಬರ್ ಅಂತ್ಯಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಲೆಕ್ಕಾಚಾರ; ಕೋಲಾಹಲ ಹುಟ್ಟಿಸಿದ ಪರ-ವಿರೋಧ ಚರ್ಚೆ?
ಬೆಂಗಳೂರು, ನವೆಂಬರ್ 09: ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ನವೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ತಿಳಿದು ಬಂದಿದ್ದು, ಈ ವಿಚಾರವಾಗಿ ಪರ ವಿರೋಧ ಚರ್ಚೆಗಳು ಜೋರಾಗಿದೆ.
ಜಾತಿ ಗಣತಿ ವರದಿ ಕುರಿತು ಇತ್ತೀಚೆಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಸಭೆ ನಡೆಸಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗ ಸಮುದಾಯದ ಪ್ರಮುಖರು ಮನವಿ ಮಾಡುವ ತೀರ್ಮಾನ ಕೈಗೊಂಡಿದ್ದರು. ಇನ್ನೂ ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಜಾತಿ ಗಣತಿ ವರದಿವರದಿ ಕುರಿತು ಆರಂಭದಿಂದಲೂ ವಿರೋಧ ವ್ಯಕ್ತಪಸಿರುವ ವೀರಶೈವ-ಲಿಂಗಾಯತ ಸಮುದಾಯದ ನಾಯಕರು, ಈ ಕುರಿತು ಮೊದಲ ಸುತ್ತಿನ ಸಭೆ ನಡೆಸಿದ್ದರು. ವರದಿಯನ್ನು ಒಪ್ಪದಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಎಚ್.ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯ ವರದಿ 2018ರಲ್ಲೇ ಪೂರ್ಣಗೊಂಡಿತ್ತು. ವರದಿ ಬಿಡುಗಡೆಯಾದರೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗರು ಮತ್ತು ಲಿಂಗಾಯತರು ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಇದೀಗ ಜಾತಿ ಗಣತಿ ವರದಿಯನ್ನ ನವೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಲೆಕ್ಕಾಚಾರದ ನಡುವೆ ಪರ ವಿರೋಧ ಚರ್ಚೆಗಳು ರಾಜ್ಯದಲ್ಲಿ ಶುರುವಾಗಿದೆ.
ಇನ್ನೂ ಜಾತಿ ಗಣತಿ ವರದಿ ಸಲ್ಲಿಕೆ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಮಧ್ಯ, ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲು ಒಂದು ತಿಂಗಳ ಗಡುವು ನೀಡುವ ಮೂಲಕ ಪರವಾದ ಕೂಗು ಕೇಳಿ ಬಂದಿದೆ. ಅಲ್ಲದೇ ಪ್ರಬಲ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತ ವಿರೋಧವನ್ನು ಖಂಡಿಸಿದ್ದಾರೆ.
ಜಾತಿ ಗಣತಿ ವರದಿಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಒಕ್ಕೂಟ ಒತ್ತಾಯಿಸುವುದಿಲ್ಲ. ಬಿಡುಗಡೆಯ ನಂತರ ಸದನದ ಹೊರಗೆ, ಒಳಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ವಿಸ್ಕೃತ ಚರ್ಚೆಯ ನಂತರವಷ್ಟೇ ಅಂಗೀಕರಿಸುವ ಕುರಿತು ಸಿದ್ದರಾಮಯ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಇನ್ನೂ ಈ ಕುರಿತು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಅವರು ಮಾತನಾಡಿ, ನವೆಂಬರ್ ತಿಂಗಳು ಆಯೋಗದಿಂದ ವರದಿ ಪಡೆದು ಬಿಡುಗಡೆ ಮಾಡದೇ ಇದ್ದರೆ ಮುಂದಿನ ತಿಂಗಳು ನಡೆಯುವ 10 ಲಕ್ಷ ಜನರನ್ನು ಒಳಗೊಂಡ ಸಮಾವೇಶದಲ್ಲಿ ಹೋರಾಟದ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ದಶಕಗಳಿಂದ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿ ಪ್ರಕಟಿಸಿಲ್ಲ. ವೈಜ್ಞಾನಿಕ ಸಮೀಕ್ಷೆಯ ಅಂಕಿಅಂಶ ಇಲ್ಲದ ಕಾರಣ ಕೆಲ ಪ್ರಬಲ ಜಾತಿಗಳು ತಮ್ಮದೇ ಹೆಚ್ಚು ಜನಸಂಖ್ಯೆ ಎಂದು ಬಿಂಬಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಾ ಬಂದಿದ್ದಾರೆ. ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಜಾತಿ ಗಣತಿಯ ವರದಿ ಬಿಡುಗಡೆಯೊಂದೇ ದಾರಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಬಿಹಾರ, ಕರ್ನಾಟಕದ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಜಾತಿ ಗಣತಿ ನಡೆಯಬೇಕು. ಪ್ರಸ್ತುತ ಕೆಲವೇ ಪ್ರಬಲ ಜಾತಿಗಳು ಪ್ರಾಬಲ್ಯ ಹೊಂದಿವೆ. ರಾಜ್ಯದಲ್ಲೂ ಅಂತಹ ವರ್ಗಗಳ ಜನರೇ ಮುಖ್ಯಮಂತ್ರಿಗಳಾಗಿದ್ದಾರೆ. ದೇಶದ ಸಂಪತ್ತು, ಅಧಿಕಾರ, ಅವಕಾಶಗಳು ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಈಗ ಹಿಂದುಳಿದ ವರ್ಗಗಳಲ್ಲೂ ಜಾಗೃತಿ ಮೂಡಿದೆ. ಮೋಸಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಜಾತಿ ಗಣತಿ ವರದಿಗೆ ಕೆಲವರು ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸಮಾಜದ ಹಿತಕ್ಕಲ್ಲ, ಸ್ವಾರ್ಥಕ್ಕಾಗಿ, ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ನ್ಯಾಯ ದೊರಕಿಸುವ ಭರವಸೆ ನಮಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾತಿ ಗಣತಿ ವರದಿ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭಾ ನವೆಂಬರ್ 9ರಂದು ಸಭೆ ಕರೆದಿದ್ದು, ಆಧಾರ್ ಆಧಾರಿತ ಹೊಸ ಸಮೀಕ್ಷೆ ನಡೆಸಲು ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ವೀರಶೈವ-ಲಿಂಗಾಯತರು ಜಾತಿ ಗಣತಿಗೆ ಆರಂಭದಿಂದಲೇ ವಿರೋಧ ವ್ಯಕ್ತಪಡಿಸಿದ್ದರು.












Click it and Unblock the Notifications