ಜೂನ್ 14ರ ಶುಭ ಶುಕ್ರವಾರ ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು, ಜೂನ್ 10 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಜೂನ್ 12ಕ್ಕೆ ನಡೆಯಬೇಕಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿತ್ತು.
ಸೋಮವಾರ ಸಂಜೆ ಸಂಪುಟ ವಿಸ್ತರಣೆ ದಿನಾಂಕ ಮತ್ತು ಸಮಯ ಅಂತಿಮವಾಗಿದೆ. ಜೂನ್ 14ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದೆ. ರಾಜಭವನ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸೋಮವಾರ ವಿಧಿವಶರಾಗಿದ್ದಾರೆ. ಸರ್ಕಾರ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ. ಆದ್ದರಿಂದ, ಜೂನ್ 12ಕ್ಕೆ ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿತ್ತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿ ಇವೆ. ಜೆಡಿಎಸ್ ಕೋಟಾದಲ್ಲಿ 2, ಕಾಂಗ್ರೆಸ್ ಕೋಟಾದಲ್ಲಿ 1 ಸ್ಥಾನ ಖಾಲಿ ಇದೆ. ಆದರೆ, ಸಂಪುಟ ಸೇರುವ ಶಾಸಕರು ಯಾರು? ಎಂಬುದು ಇನ್ನೂ ನಿಗೂಢವಾಗಿದೆ.
ಜೆಡಿಎಸ್ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಮತ್ತೊಂದು ಸ್ಥಾನವನ್ನು ಪಕ್ಷೇತರ ಶಾಸಕರಿಗೆ ಬಿಟ್ಟುಕೊಡಲಿದ್ದು, ಮಳಬಾಗಿಲು ಕ್ಷೇತ್ರದ ಎಚ್.ನಾಗೇಶ್ ಅಥವ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಸಚಿವರಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಕೋಟಾದಲ್ಲಿ ಖಾಲಿ ಇರುವ 1 ಸ್ಥಾನಕ್ಕೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಬಿ.ಟಿ.ಎಂ.ಕ್ಷೇತ್ರದ ರಾಮಲಿಂಗಾ ರೆಡ್ಡಿ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರ ಹೆಸರುಗಳು ಹೇಳಿಬರುತ್ತಿದೆ. ಯಾರು ಸಂಪುಟ ಸೇರಲಿದ್ದಾರೆ? ಎಂದು ಕಾದು ನೋಡಬೇಕು.












Click it and Unblock the Notifications