ಉಪಚುನಾವಣೆ ಕದನ: ದೋಸ್ತಿ ಸರ್ಕಾರದ ಮೈತ್ರಿ ಜಪ ಯಶಸ್ವಿಯಾಗುತ್ತಾ?
ಬೆಂಗಳೂರು, ಅಕ್ಟೋಬರ್ 7: ರಾಜ್ಯದಲ್ಲಿನ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ಬಳಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಇದು ಮೊದಲ ಚುನಾವಣಾ ಸವಾಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರಗಳನ್ನು ಹಂಚಿಕೊಂಡು ಬಿಜೆಪಿಯನ್ನು ಜತೆಯಾಗಿ ಎದುರಿಸಲು ತೀರ್ಮಾನ ಮಾಡಿರುವ ದೋಸ್ತಿ ಪಕ್ಷಗಳು ಈಗ ಮೊದಲ ಪರೀಕ್ಷೆಯನ್ನು ಪಾಸ್ ಮಾಡಬೇಕಿದೆ.
ಅಲ್ಲದೆ, ಈಗ ಮೂರೂ ಪಕ್ಷಗಳು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಇನ್ನೂ ನಾಲ್ಕೂವರೆ ವರ್ಷ ಬಾಕಿ ಇರುವುದರಿಂದ ಚುನಾವಣೆ ನಡೆಸುವುದು ಅನಿವಾರ್ಯ.
ಆದರೆ, ಲೋಕಸಭೆಗೆ ನಡೆಸುವ ಉಪಚುನಾವಣೆ ಪಕ್ಷಗಳಿಗೆ ಭಾರಿ ಹೊರೆಯಾಗಲಿದೆ. ಏಕೆಂದರೆ ಉಪ ಚುನಾವಣೆ ನಡೆದ ಐದೇ ತಿಂಗಳಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ಹೀಗಾಗಿ ಐದು ತಿಂಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಖರ್ಚಿನ ಬಾಬತ್ತು ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಆದರೆ, ಪ್ರತಿಷ್ಠೆಯ ಕಾರಣಕ್ಕೆ ಹಾಗೂ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಬುನಾದಿ ಹಾಕಲು ಈ ಚುನಾವಣೆ ಮೂರೂ ಪಕ್ಷಗಳಿಗೆ ಮಹತ್ವದ್ದಾಗಿದೆ.

ರಾಮನಗರದಲ್ಲಿ ಯಾರು ಅಭ್ಯರ್ಥಿ
ವಿಧಾನಸಭೆ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಸಮ್ಮಿಶ್ರ ಸರ್ಕಾರಕ್ಕೆ ಅಷ್ಟೇನೂ ದೊಡ್ಡ ತಲೆನೋವಾಗಿಲ್ಲ. ರಾಮನಗರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ತವರು ಕ್ಷೇತ್ರವಾಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸಬಹುದು. ಕಾಂಗ್ರೆಸ್‌ನ ಸಿಎಂ ಲಿಂಗಪ್ಪ ಮತ್ತು ಕಳೆದ ಬಾರಿ ಸ್ಪರ್ಧಿಸಿದ್ದ ಇಕ್ಬಾಲ್ ಹುಸೇನ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಎಂ. ರುದ್ರೇಶ್ ಮತ್ತು ಸಿ.ಪಿ. ಯೋಗೀಶ್ವರ್ ನಡುವೆ ಪೈಪೋಟಿ ಇದೆ ಎನ್ನಲಾಗಿದೆ. ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ.

ಜಮಖಂಡಿಯಲ್ಲಿ ಸಿದ್ದು ಪುತ್ರ?
ಸಿದ್ದು ನ್ಯಾಮಗೌಡ ಅವರ ಮರಣದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಸಿದ್ದು ನ್ಯಾಮಗೌಡ ಅವರ ಮಗ ಆನಂದ್ ನ್ಯಾಮಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಬಿಜೆಪಿಯಿಂದ ಶ್ರೀಕಾಂತ್ ಕುಲಕರ್ಣಿ ಮತ್ತು ಸಂಗಮೇಶ್ ನಿರಾಣಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಲೋಕಸಭೆಯದ್ದೇ ಗೊಂದಲ
ವಿಧಾನಸಭೆಯಲ್ಲಿ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಒಂದು ಕ್ಷೇತ್ರವನ್ನು ಮಾತ್ರ. ಜೆಡಿಎಸ್ ಇಲ್ಲಿ ಚಿಗುರೊಡೆದಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಬಲವನ್ನು ಕುಗ್ಗಿಸಲು ಶಿವಮೊಗ್ಗ ಲೋಕಸಭೆ ಉಪಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖವಾಗಿ ಪರಿಗಣಿಸಲಿವೆ. ಶಿವಮೊಗ್ಗದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲು ಜೆಡಿಎಸ್ ಉತ್ಸುಕವಾಗಿದೆ. ಇನ್ನು ಬಳ್ಳಾರಿ ಮತ್ತು ಮಂಡ್ಯ ಲೋಕಸಭೆ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಉಭಯ ಪಕ್ಷಗಳಲ್ಲಿ ಗೊಂದಲಗಳಿವೆ ಎನ್ನಲಾಗಿದೆ.

ನೀತಿ ಸಂಹಿತೆ ಜಾರಿ
ಉಪಚುನಾವಣೆ ಘೋಷಣೆಯಾಗಿರುವುದರಿಂದ ಶನಿವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಮತ್ತು ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಂಟಿಯಾಗಿ ಚುನಾವಣೆ
ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಜತೆಯಾಗಿ ಎದುರಿಸಲು ತೀರ್ಮಾನಿಸಿವೆ. ಜಮಖಂಡಿಯಲ್ಲಿ ಕಾಂಗ್ರೆಸ್ ಮತ್ತು ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ ಎಂದು ಎಚ್ ಡಿ ದೇವೇಗೌಡ ಹೇಳಿದ್ದಾರೆ

ಸಮ್ಮಿಶ್ರ ಸರ್ಕಾರದ್ದೇ ತೀರ್ಮಾನ
ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿದ್ದೇವೆ. ರಾಮನಗರ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಜಮಖಂಡಿ, ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಉಪಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲವಿಲ್ಲ.
ಇದು 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿಯಲ್ಲ. ಉಪ ಚುನಾವಣೆ ಎದುರಿಸುವ ಕುರಿತು ಸಮ್ಮಿಶ್ರ ಸರ್ಕಾರದ ಮುಖಂಡರೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ವಿಜಯಪುರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದೆವು. ಇಲ್ಲಿಯೂ ಅದೇ ರೀತಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ದೇವೇಗೌಡ ತಿಳಿಸಿದ್ದಾರೆ.

ರಮ್ಯಾ ಸ್ಪರ್ಧೆ ಖಚಿತವಾಗಿಲ್ಲ
ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ರಮ್ಯಾ, ಜೆಡಿಎಸ್‌ನ ಪುಟ್ಟರಾಜು ಎದುರು ಸೋಲು ಅನುಭವಿಸಿದ್ದರು. ಇಬ್ಬರ ಜಗಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಾರಿ ರಮ್ಯಾ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿ ಸೋಲಿಸಲು ರಣನೀತಿ ರೂಪಿಸುತ್ತೇವೆ. ಎಲ್ಲ ಮುಖಂಡರು ಜತೆಯಾಗಿ ಚುನಾವಣೆ ಎದುರಿಸಲಿದ್ದೇವೆ. ಚುನಾವಣೆಗೆ ಸಿದ್ಧತೆ ಕೈಗೊಳ್ಳಲು ಅತ್ಯಲ್ಪ ಸಮಯವಿದೆ. ಅಷ್ಟರೊಳಗೆ ಗೊಂದಲವಿಲ್ಲದೆ ಎಲ್ಲವನ್ನೂ ನಿಭಾಯಿಸಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.












Click it and Unblock the Notifications